ಮಂಗಳವಾರ, ಆಗಸ್ಟ್ 11, 2020
26 °C

ತೆಂಗಿನತೋಪಿನಲ್ಲಿ ಅರಳಿದ ಕ್ರೀಡಾ ಸಾಧನೆಯ ಲೆಕ್ಕ!

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ತೆಂಗಿನತೋಪಿನಲ್ಲಿ ಅರಳಿದ ಕ್ರೀಡಾ ಸಾಧನೆಯ ಲೆಕ್ಕ!

ಮಧ್ಯಮವರ್ಗದ ಕುಟುಂಬದ ಕೆ.ಎಸ್. ಮೇಘಾ ಕರ್ನಾಟಕದ ಹದಿನಾರು ವರ್ಷದೊಳಗಿನ ಬಾಲಕಿಯರ ಕೊಕ್ಕೊ ತಂಡದ ನಾಯಕಿಯಾಗುತ್ತಾರೆ ಎಂದು ಗ್ರಾಮದಲ್ಲಿ ಯಾರೂ ಅಂದುಕೊಂಡಿರಲಿಲ್ಲ. ಆದರೆ ಎರಡು ಬಾರಿ ನಾಯಕಿಯಾಗಿ ಮಿಂಚಿದ ಸಾಧನೆ ಹತ್ತನೇ ತರಗತಿಯ ಈ ವಿದ್ಯಾರ್ಥಿನಿಯದು. ಶಾಲಾ ಕ್ರೀಡಾಕೂಟಗಳು  ಸೇರಿದಂತೆ ಒಟ್ಟು ಒಂಬತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಶ್ರೇಯ ಇವರದ್ದು.ಇದೇ ಊರಿನ ಹತ್ತನೇ ತರಗತಿಯ ಎಂ. ನಿಂಗರಾಜು ಜಾರ್ಖಂಡ್‌ನಲ್ಲಿ ನಡೆದ ಸಬ್ ಜೂನಿಯರ್ ಕೊಕ್ಕೊ ಟೂರ್ನಿಯಲ್ಲಿ ರನ್ನರ್ ಅಪ್ ಆದ ಕರ್ನಾಟಕ ತಂಡದಲ್ಲಿ ಭಾಗವಹಿಸಿದ್ದ ಮೈಸೂರು ಜಿಲ್ಲೆಯ ಏಕೈಕ ಆಟಗಾರ. ಬೆಳಗಾವಿಯಲ್ಲಿ ನಡೆದ ರಾಜ್ಯ ಶಾಲಾ ಅಥ್ಲೆಟಿಕ್ಸ್‌ನ 3000 ಮೀಟರ್ ಓಟದಲ್ಲಿಯೂ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.ಮೈಸೂರು ಜಿಲ್ಲೆಯ ಪುಟ್ಟ ಗ್ರಾಮಗಳಾದ ಕುರಬೂರು, ಕೊತ್ತೇಗಾಲ.ಸಿ. ಹಳ್ಳಿಯ  ಎಂ. ವೀಣಾ, ಸಿ. ಲತಾಶ್ರೀ, ಪಿ. ಸಿಂಧು, ಎಂ. ಮಂಜುಳಾ, ಎಂ. ಸಹನಾ, ಸಿ.ಆರ್. ಜಯಶ್ರೀ, ಎಂ. ನಮ್ರತಾ, ಕೆ.ಎಸ್. ಭವ್ಯಾ, ಕೆ.ಎಸ್. ಅಮೂಲ್ಯ, ಕೆ.ಎಸ್. ಚೈತ್ರಾ ಸೇರಿದಂತೆ  ಒಟ್ಟು 40 ವಿದ್ಯಾರ್ಥಿ-ವಿದ್ಯಾರ್ಥಿನಿಯರದ್ದು ಇಂತಹದ್ದೇ ಯಶೋಗಾಥೆ. ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ತುಂಬ ತುಂಬಿರುವ ಪ್ರಶಸ್ತಿ, ಪಾರಿತೋಷಕಗಳ ರಾಶಿ ಇವರ ಸಾಧನೆಯನ್ನು ಹೇಳುತ್ತವೆ.  ಈ ಯಶಸ್ಸಿನ ಹಿಂದಿರುವುದು ಮಾತ್ರ ಒಬ್ಬ ಗಣಿತ ಶಿಕ್ಷಕ. ಇನ್ನೊಂದು ವಿಶೇಷವೆಂದರೆ ಇವರೆಲ್ಲರ ತರಬೇತಿ ನಡೆದದ್ದು ತೆಂಗಿನ ತೋಪಿನಲ್ಲಿ!ಕುರಬೂರಿನ ಶ್ರೀನಿರ್ವಾಣಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಈ ವಿದ್ಯಾರ್ಥಿಗಳಿಗೆ ಕಳೆದ ಐದು ವರ್ಷಗಳಿಂದ ಕ್ರೀಡೆಯ ರುಚಿ ಹತ್ತಿಸಿದವರು ಕೆ. ಮಂಜುನಾಥ್. ಹೊಸ ತಿರುಮಕೂಡಲಿನಲ್ಲಿ ಬಿ.ಎ., ಡಿಇಡಿ ಮುಗಿಸಿ ಸಹಶಿಕ್ಷಕರಾಗಿ ಶಾಲೆಗೆ ಸೇರಿದ ಮಂಜುನಾಥ್ ಮಕ್ಕಳಲ್ಲಿದ್ದ ಪ್ರತಿಭೆಯನ್ನು ಗುರುತಿಸಿದರು. ದಿನವಿಡೀ ಗಣಿತ ಕಲಿಸುವ ಅವರು, ಶಾಲೆ ಮುಗಿದ ಕೂಡಲೇ ಅಂಗಳಕ್ಕೆ ಇಳಿದು `ಶಿಳ್ಳೆ' ಊದುತ್ತ ಮಕ್ಕಳಿಗೆ ಆಟ ಕಲಿಸುತ್ತಿದ್ದಾರೆ.ಸುಮಾರು ನಾಲ್ಕೂವರೆ ವರ್ಷಗಳವರೆಗೆ ತೆಂಗಿನ ತೋಟದ  ಏರಿಳಿತಗಳಲ್ಲಿಯೇ ತರಬೇತಿ ನಡೆಯಿತು. ಆರು ತಿಂಗಳ ಹಿಂದೆ ಮೈಸೂರು ರಸ್ತೆಯ ಪಕ್ಕದ ಕಟ್ಟಡಕ್ಕೆ ಶಾಲೆ ಸ್ಥಳಾಂತರವಾದ ಮೇಲೆ ಅಲ್ಲಿಯ ಅಂಗಳವೇ ಕೊಕ್ಕೊ ಮೈದಾನವಾಯಿತು. ಸಣ್ಣ ಸಣ್ಣ ಕಲ್ಲುಗಳಿರುವ ಈ ಅಂಗಳದಲ್ಲಿಯೇ ಇವರ ಅಭ್ಯಾಸ ನಡೆಯುತ್ತದೆ. ನಾಲ್ಕು ಕೋಣೆಗಳಿರುವ ಪುಟ್ಟ ಕಟ್ಟಡದ ಈ ಶಾಲೆಯಲ್ಲಿ ಕ್ರೀಡೆಗಾಗಿ ವಿಶೇಷ ಸೌಲಭ್ಯಗಳು ಇಲ್ಲ. ಆದರೆ ಇದ್ಯಾವುದೂ ಮಕ್ಕಳ ಮತ್ತು ಶಿಕ್ಷಕರ ಆತ್ಮವಿಶ್ವಾಸ ಕುಗ್ಗಿಸಿಲ್ಲ.ರಾಷ್ಟ್ರೀಯ ಕೊಕ್ಕೊ ಟೂರ್ನಿಯಲ್ಲಿ ಭಾಗವಹಿಸಿದ್ದ ಕರ್ನಾಟಕ, ರಾಜ್ಯದ ಸಬ್ ಜೂನಿಯರ್, ಜೂನಿಯರ್ ತಂಡಗಳಲ್ಲಿ ಇಲ್ಲಿಯ 11 ಹುಡುಗಿಯರು ಆಡಿದ್ದಾರೆ. ಅಲ್ಲದೇ ಗ್ರಾಮೀಣ ಪೈಕಾ ಕ್ರೀಡಾಕೂಟ, ದಸರಾ ಮತ್ತು ರಸ್ತೆ ಓಟಗಳಲ್ಲಿ ಇಲ್ಲಿಯ ಕ್ರೀಡಾಪಟುಗಳದ್ದೇ ಮಿಂಚು.`ಇಲ್ಲಿಗೆ ಸಮೀಪದ ರಂಗಸಮುದ್ರ ಕೊಕ್ಕೊ ಆಟಗಾರರಿಗೆ ಪ್ರಸಿದ್ಧಿ ಪಡೆದ ಊರು. ನಮ್ಮ ಶಾಲೆಯು ಯಾವಾಗಲೂ ಹೋಬಳಿ ಮಟ್ಟದಲ್ಲಿಯೇ ಸೋಲುತ್ತಿತ್ತು. ಆದರೆ ಮಂಜುನಾಥ್ ಸರ್ ಬಂದ ಮೇಲೆ ಆಟದ ಕೌಶಲಗಳನ್ನು ಚೆನ್ನಾಗಿ ಕಲಿಸಿದರು. ಆಗ ನಾವೂ ಹೋಬಳಿ, ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು' ಎಂದು ಮೇಘಾ ಹೆಮ್ಮೆಯಿಂದ ಹೇಳುತ್ತಾಳೆ.`ಮಕ್ಕಳಲ್ಲಿ ಪ್ರತಿಭೆ ಇತ್ತು. ಊರಿನ ಜನರು ಮತ್ತು ಶಾಲೆಯ ಮುಖ್ಯ ಶಿಕ್ಷಕ ಕೆ.ವಿ.ಮಹದೇವಸ್ವಾಮಿ ನೀಡುತ್ತಿರುವ ಪ್ರೋತ್ಸಾಹದ ಫಲ ಇದು. ನಾನು ಶಾಲೆ, ಕಾಲೇಜಿನಲ್ಲಿದ್ದಾಗ ಅಥ್ಲೀಟ್ ಆಗಿದ್ದೆ. ನನಗೆ ತಿಳಿದಷ್ಟು ಕಲಿಸುತ್ತಿದ್ದೇನೆ. ಅದರಲ್ಲೂ ಮೇಘಾ ಮಾಡಿದ ಸಾಧನೆಯಿಂದ ಉಳಿದವರ ಆಸಕ್ತಿ ಹೆಚ್ಚಾಯಿತು. ಮೇಘಾ ಓದಿನಲ್ಲಿಯೂ ಉತ್ತಮವಾಗಿದ್ದಾಳೆ. ಅಥ್ಲೆಟಿಕ್ಸ್‌ನ ಮಾರ್ಗದರ್ಶನವನ್ನೂ ನೀಡುತ್ತಿದ್ದೇವೆ. ಆದರೆ ನಮಗೆ ಸೌಲಭ್ಯಗಳದ್ದೇ ಕೊರತೆ' ಎಂದು ಮಂಜುನಾಥ್ ಹೇಳುತ್ತಾರೆ. ಉತ್ತಮ ಸೌಲಭ್ಯಗಳು ದೊರೆತರೆ ಮಕ್ಕಳು ಇನ್ನೂ ಎತ್ತರದ ಸಾಧನೆ ಮಾಡುತ್ತಾರೆ ಎನ್ನುವ ಭರವಸೆ ಅವರದ್ದು.ಆಟದ ಮೇಲಿನ ಪ್ರೀತಿ ಗಮನಾರ್ಹ

`ಇವತ್ತು ನಗರದ ಎಲ್ಲ ಸೌಲಭ್ಯಗಳೂ ಇರುವ ಬಹಳಷ್ಟು ಶಾಲೆಗಳಲ್ಲಿ  ಕ್ರೀಡೆ ನಗಣ್ಯವಾಗಿದೆ. ಹಲವಾರು ಕ್ರೀಡಾ ಶಿಕ್ಷಕರು ಬೇರೆ ಬೇರೆ ವಿಷಯಗಳ ಬೋಧನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ಸೌಲಭ್ಯಗಳೂ ಇಲ್ಲ. ವಿಶೇಷ ಪರಿಣಿತಿಯೂ ಇಲ್ಲ.ಆದರೆ ಆಟದ ಮೇಲೆ ಪ್ರೀತಿ ಇದೆ. ಸಾಧಿಸುವ ಛಲ ಇದೆ. ಇವರಿಗೆ ಬೇಕಾಗಿರುವುದು ಪ್ರೋತ್ಸಾಹ ಮಾತ್ರ' ಎಂದು ರಾಷ್ಟ್ರೀಯ ಮಾಜಿ ಅಥ್ಲೀಟ್ ಮತ್ತು ಕೊಳ್ಳೇಗಾಲದ ಸಹಜ ಕೃಷಿ ಪದ್ಧತಿಯ ರೈತ ಕೈಲಾಸಮೂರ್ತಿ ಹೇಳುತ್ತಾರೆ. ಅವರು ಈ ಮಾರ್ಗದ ಮೂಲಕ ಮೈಸೂರಿಗೆ ಹೋಗುವಾಗ ತಮ್ಮ ತೋಟದ ಹಣ್ಣುಗಳನ್ನು ತಂದು ಮಕ್ಕಳಿಗೆ ಹಂಚುತ್ತಾರೆ. ಮಕ್ಕಳಿಗೆ ಆಟದ ಕುರಿತ ಮಾಹಿತಿ ಕೂಡ ನೀಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.