ಗುರುವಾರ , ಜನವರಿ 30, 2020
20 °C

ತೆರಿಗೆ ಹೆಚ್ಚಳ; ಚಿನ್ನ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಿನ್ನ, ಬೆಳ್ಳಿ ವಹಿವಾಟಿನ ಮೇಲಿನ ತೆರಿಗೆ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾಯಿಸಿದ ಹಿನ್ನೆಲೆಯಲ್ಲಿ, ಈ ಎರಡೂ ಲೋಹಗಳು  ಇನ್ನು ಮುಂದೆ ಇನ್ನಷ್ಟು ದುಬಾರಿಗೊಳ್ಳಲಿವೆ.ಈ ತೆರಿಗೆ ಸ್ವರೂಪ ಬದಲಾವಣೆ ಮೂಲಕ ಪ್ರಸಕ್ತ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ರೂ. 600 ಕೋಟಿಗಳಷ್ಟು ಹೆಚ್ಚುವರಿ ವರಮಾನ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿದೆ.ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂಗಳ ಮೇಲಿನ ಅಬಕಾರಿ ಮತ್ತು ಸೀಮಾಸುಂಕ ಹೆಚ್ಚಿಸಲಾಗಿದ್ದು, ಈ ಹೆಚ್ಚುವರಿ ತೆರಿಗೆ ದರಗಳು ಮಂಗಳವಾರದಿಂದಲೇ ಜಾರಿಗೆ ಬಂದಿವೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವಜ್ರದ ಮೇಲೆ ಕೂಡ ಶೇ 2ರಷ್ಟು ಆಮದು ಸುಂಕ ವಿಧಿಸಲಾಗಿದೆ.ತೆರಿಗೆ ಸ್ವರೂಪ ಬದಲಾವಣೆ ಪ್ರಕಾರ,  ಚಿನ್ನ ಮತ್ತು ಬೆಳ್ಳಿ ಮೇಲೆ ಸ್ಥಿರ ಮೊತ್ತದ ತೆರಿಗೆ ವಿಧಿಸುವ ಬದಲಿಗೆ, ಈ ಅಪೂರ್ವ ಲೋಹಗಳ ಮೌಲ್ಯ ಆಧರಿಸಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿದಂತೆ ತೆರಿಗೆ ದರವೂ ಹೆಚ್ಚಳಗೊಳ್ಳಲಿದೆ. ಹೀಗಾಗಿ ಬೆಲೆ ಏರಿಕೆಯಾದರೆ ಅದಕ್ಕೆ ತಕ್ಕಂತೆ ತೆರಿಗೆಯೂ ಹೆಚ್ಚಲಿದೆ.ಚಿನ್ನದ ಮೇಲಿನ ಆಮದು ಸುಂಕವನ್ನು ಚಿನ್ನದ ಬೆಲೆಯ ಶೇ 2ರಷ್ಟಕ್ಕೆ ನಿಗದಿಗೊಳಿಸಲಾಗಿದೆ.  ಇದಕ್ಕೂ ಮೊದಲು ಪ್ರತಿ 10 ಗ್ರಾಂಗಳಿಗೆ ರೂ. 300 ತೆರಿಗೆ ವಿಧಿಸಲಾಗುತ್ತಿತ್ತು. ಬೆಳ್ಳಿ ಮೇಲೆ ಪ್ರತಿ ಕೆ.ಜಿಗೆ ರೂ. 1,500ರ ಬದಲಿಗೆ ಈಗ ಆಮದು ಸುಂಕವನ್ನು ಶೇ 6ಕ್ಕೆ ನಿಗದಿಪಡಿಸಲಾಗಿದೆ.ಅಬಕಾರಿ ಸುಂಕ: ಅಬಕಾರಿ ಸುಂಕ ವಿಧಿಸುವ ವಿಷಯದಲ್ಲಿ, ಈ ಮೊದಲು ತಲಾ 10 ಗ್ರಾಂ ಚಿನ್ನಕ್ಕೆ ರೂ. 200ರಂತೆ ಸುಂಕ ವಿಧಿಸಲಾಗುತ್ತಿತ್ತು. ಈಗ ಅದನ್ನು ಚಿನ್ನದ ಬೆಲೆಯ ಶೇ 1.5ಕ್ಕೆ ನಿಗದಿಪಡಿಸಲಾಗಿದೆ.ಬೆಳ್ಳಿಗೆ ಪ್ರತಿ ಕೆ.ಜಿಗೆ ರೂ.1000ರಂತೆ ಸ್ಥಿರ ಮೊತ್ತದ ಸುಂಕ ವಸೂಲು ಮಾಡಲಾಗುತ್ತಿತ್ತು. ಅದನ್ನು ಈಗ ಶೇ 4ಕ್ಕೆ ಹೆಚ್ಚಿಸಲಾಗಿದೆ.ಹಳೆಯ ದರಗಳನ್ನು ನಾಲ್ಕೈದು ವರ್ಷಗಳ ಹಿಂದೆಯೇ ನಿಗದಿಪಡಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಗಮನಾರ್ಹ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ, ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ತೆರಿಗೆ ದರ ಹೆಚ್ಚಿಸಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕದ ಕೇಂದ್ರೀಯ  ಮಂಡಳಿ (ಸಿಬಿಇಸಿ) ಅಧ್ಯಕ್ಷ ಎಸ್. ಕೆ. ಗೋಯೆಲ್ ಹೇಳಿದ್ದಾರೆ.ತೆರಿಗೆ ದರ ಹೆಚ್ಚಳದ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ನವದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗಳಿಗೆ ರೂ. 35ರಂತೆ ಹೆಚ್ಚಳಗೊಂಡು ರೂ. 27,925 ಮತ್ತು ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ ರೂ.575ರಷ್ಟು ಏರಿಕೆಯಾಗಿ ರೂ. 52,725ಕ್ಕೆ ತಲುಪಿತು.

ಪ್ರತಿಕ್ರಿಯಿಸಿ (+)