ಶನಿವಾರ, ಮೇ 21, 2022
25 °C

ತೆರಿಗೆ: ಹೆಚ್ಚುವರಿ ಆದಾಯ ಸಂಗ್ರಹ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆರಿಗೆ ಸಂಗ್ರಹದಲ್ಲಿ ರಾಜ್ಯ ಗಣನೀಯ ಪ್ರಗತಿ ಸಾಧಿಸಿದ್ದು, ಪ್ರಸಕ್ತ ವರ್ಷ ಅಂದಾಜಿಗಿಂತಲೂ 1,500 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಆದಾಯ ಸಂಗ್ರಹವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಬಜೆಟ್ ಮೇಲಿನ ಚರ್ಚೆಗೆ ಬುಧವಾರ ವಿಧಾನಸಭೆಯಲ್ಲಿ ಉತ್ತರ ನೀಡಿದ ಅವರು, 2010-11ನೇ ಆರ್ಥಿಕ ವರ್ಷದಲ್ಲಿ ತೆರಿಗೆ ಮೂಲಗಳಿಂದ 36,228 ಕೋಟಿ ರೂಪಾಯಿ ವರಮಾನ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. 2011ರ ಫೆಬ್ರುವರಿ ಅಂತ್ಯಕ್ಕೆ 33,624 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಪ್ರಗತಿಯನ್ನು ಗಮನಿಸಿದರೆ, ನಿಗದಿತ ಗುರಿಗಿಂತಲೂ 1,500 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಸಂಗ್ರಹವಾಗುವ ವಿಶ್ವಾಸವಿದೆ ಎಂದರು.ವಾಣಿಜ್ಯ ತೆರಿಗೆಯಿಂದ ರೂ 500 ಕೋಟಿ, ಅಬಕಾರಿ ತೆರಿಗೆಯಿಂದ ರೂ 600 ಕೋಟಿ, ಮೋಟಾರು ವಾಹನ ತೆರಿಗೆಯಿಂದ ರೂ 200 ಕೋಟಿ ಮತ್ತು ಅರಣ್ಯ ಅಭಿವೃದ್ಧಿ ತೆರಿಗೆಯಿಂದ ರೂ 200 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ವಾಣಿಜ್ಯ ತೆರಿಗೆ ಸಂಗ್ರಹಣೆಯಲ್ಲಿ ಶೇ 31ರಷ್ಟು ಬೆಳವಣಿಗೆ ಆಗಿದ್ದು, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.ಗಣಿಗಾರಿಕೆಯಿಂದ ರೂ 1,100 ಕೋಟಿ: ಕೆಲಕಾಲ ಅದಿರು ರಫ್ತಿನ ಮೇಲೆ ನಿಷೇಧ ಹೇರಿದ್ದರೂ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 900 ಕೋಟಿ ರೂಪಾಯಿ ಸಂದಾಯವಾಗಿದೆ. ಗಣಿಗಾರಿಕೆಯಿಂದ ಬರುವ ಆದಾಯದಲ್ಲಿ ಶೇ 25ರಷ್ಟು ಹೆಚ್ಚಳವಾಗಿದ್ದು, ಈ ವಲಯದಿಂದ ದೊರೆಯುವ ವರಮಾನದ ಮೊತ್ತ ರೂ 1,100 ಕೋಟಿ ತಲುಪುವ ನಿರೀಕ್ಷೆ ಇದೆ ಎಂದರು.ಸರ್ಕಾರಿ ಜಮೀನುಗಳ ಮಾರಾಟದಿಂದ 3,000 ಕೋಟಿ ರೂಪಾಯಿ ಆದಾಯ ಪಡೆಯುವ ಗುರಿ ಹೊಂದಲಾಗಿತ್ತು. ಆದರೆ ರಿಯಲ್ ಎಸ್ಟೇಟ್ ಉದ್ಯಮ ಕುಸಿತ ಕಂಡ ಹಿನ್ನೆಲೆಯಲ್ಲಿ ಕೇವಲ 100 ಕೋಟಿ ರೂಪಾಯಿ ಮೌಲ್ಯದ ಭೂಮಿ ಮಾರಾಟ ಮಾಡಲು ಸಾಧ್ಯವಾಗಿತ್ತು. ಈಗ ಮಾರುಕಟ್ಟೆ ಚೇತರಿಕೆ ಕಂಡಿದ್ದು, ಒಳ್ಳೆಯ ಬೆಲೆ ಬಂದಾಗ ಭೂಮಿ ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.ಜಿಎಸ್‌ಡಿಪಿ ಏರಿಕೆ: ರಾಜ್ಯದ ಸಾಲದ ಮೊತ್ತದಲ್ಲಿ ಏರಿಕೆ ಆಗಿರುವ ಬಗ್ಗೆ ವಿರೋಧ ಪಕ್ಷಗಳು ನಿರಂತರವಾಗಿ ಪ್ರಶ್ನಿಸುತ್ತಿವೆ. ಸಾಲದ ಪ್ರಮಾಣದಲ್ಲಿ ಏರಿಕೆ ಆಗಿರುವುದು ನಿಜ. ಅದರಂತೆಯೇ ರಾಜ್ಯದ ನಿವ್ವಳ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಪ್ರಮಾಣವೂ ಹೆಚ್ಚಳವಾಗಿದೆ ಎಂದು ಸಮರ್ಥಿಸಿಕೊಂಡರು.2004-05ರಲ್ಲಿ ರಾಜ್ಯದ ಸಾಲದ ಮೊತ್ತ ರೂ 54,002 ಕೋಟಿ ರೂಪಾಯಿ ಇತ್ತು. ಆಗ ಜಿಎಸ್‌ಡಿಪಿ ರೂ 1,66,306 ಕೋಟಿ ಇತ್ತು. 2010-11ರಲ್ಲಿ ಸಾಲದ ಮೊತ್ತ ರೂ 92,969 ಕೋಟಿಗೆ ಏರಿಕೆಯಾಗಿದ್ದು, ಜಿಎಸ್‌ಡಿಪಿ ಮೊತ್ತ ರೂ 3,80,871 ಕೋಟಿಗೆ ಹೆಚ್ಚಳವಾಗಿದೆ. ಪ್ರಗತಿಗೆ ಪೂರಕವಾಗಿ ಸಾಲವೂ ಹೆಚ್ಚುವುದು ಸಾಮಾನ್ಯ ಎಂದು ಯಡಿಯೂರಪ್ಪ ಹೇಳಿದರು.

ಸಂಶಯಗಳ ಬಜೆಟ್: ಸಿದ್ದು

ಬೆಂಗಳೂರು: ಬಜೆಟ್ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷಗಳು ಎತ್ತಿದ ಯಾವುದೇ ಪ್ರಶ್ನೆಗಳಿಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರ ನೀಡಿಲ್ಲ. ಬಜೆಟ್ ಪುಸ್ತಕವನ್ನು ಮತ್ತೊಮ್ಮೆ ಓದಿದ್ದಾರೆ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಿದ ಬಳಿಕ ಪ್ರತಿಕ್ರಿಯಿಸಿದ ಅವರು, ‘ಈ ಬಜೆಟ್‌ನಲ್ಲಿ ಬರೀ ಸಂಶಯಗಳೇ ತುಂಬಿವೆ. ಕೃಷಿಕರ ಉದ್ಧಾರಕ್ಕಾಗಿ ಹೊಸ ಕಾರ್ಯಕ್ರಮ ಘೋಷಿಸಿಲ್ಲ. ರಾಜಕೀಯ ಲಾಭಕ್ಕಾಗಿ ಗಿಮಿಕ್ ಮಾಡಿದ್ದೇ ದೊಡ್ಡ ಸಾಧನೆ’ ಎಂದು ಟೀಕಿಸಿದರು.‘ರಾಜ್ಯದ ಬೊಕ್ಕಸ ತುಂಬಿ ತುಳುಕುತ್ತಿದೆ ಎಂದು ನೀವು ಬೆನ್ನು ತಟ್ಟಿಕೊಳ್ಳುತ್ತಿದ್ದೀರಿ. ನಿಮ್ಮ ಸರ್ಕಾರವೇ ಪ್ರಕಟಿಸಿರುವ ಆರ್ಥಿಕ ಸಮೀಕ್ಷೆಯ ಪ್ರಕಾರ ರಾಜ್ಯದ ಪ್ರಗತಿ ಋಣಾತ್ಮಕ ಹಾದಿಯಲ್ಲಿದೆ. ಸರ್ಕಾರದ ದಾಖಲೆಯಾಗಿರುವ ಆರ್ಥಿಕ ಸಮೀಕ್ಷೆಯನ್ನು ನಂಬುತ್ತೇವೆ. ನಿಮ್ಮ ಉತ್ತರವನ್ನು ನಂಬಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.ಸರ್ಕಾರ ಭ್ರಮಾಲೋಕದಲ್ಲೇ ಇದೆ. ಆದ್ದರಿಂದ ವಾಸ್ತವಕ್ಕೆ ದೂರವಾದ ಬಜೆಟ್ ಮಂಡಿಸಿದೆ. ವಾಸ್ತವಕ್ಕೆ ಇಳಿದರೆ ಮಾತ್ರ ಸತ್ಯದ ಅರಿವಾಗುತ್ತದೆ. ಆರ್ಥಿಕ ನಿರ್ವಹಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂಬ ಸಿದ್ಧ ಉತ್ತರ ಬಿಜೆಪಿ ಸರ್ಕಾರದ ಬಾಯಲ್ಲಿದೆ. ಹಾಗಿದ್ದರೆ ರಾಜ್ಯ ಏಕೆ ಅಭಿವೃದ್ಧಿ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ, ಎಂ.ಕೆ.ಶಿವಲಿಂಗೇಗೌಡ ಮತ್ತಿತರರೂ ಮುಖ್ಯಮಂತ್ರಿಯವರ ಉತ್ತರ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಬುಧವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರ ನೀಡಿದರು. ರಾತ್ರಿಯವರೆಗೂ ಉಭಯ ಸದನಗಳ ಕಲಾಪ ನಡೆಯಿತು. ಬಳಿಕ ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.