ಭಾನುವಾರ, ಮೇ 9, 2021
28 °C

ತೇಲಿಬಂದಿದೆ ಕಸರಹಿತ ದಿನದ ಕನಸು!

ಪ್ರಜಾವಾಣಿ ವಾರ್ತೆ/ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ವಿರಾಟ ರೂಪವನ್ನು ತಾಳಿದ್ದ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ.



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಅಧ್ಯಕ್ಷರಾಗಿದ್ದ ಈ ಸಮಿತಿಯಲ್ಲಿ ಏಳು ಜನ ತಜ್ಞರು ಸದಸ್ಯರಾಗಿದ್ದರು. ಸಮಿತಿ ವರದಿಯನ್ನು ಸಾರ್ವಜನಿಕರ ಅವಗಾಹನೆಗೆ ತೆರೆದಿಟ್ಟಿರುವ ಬಿಬಿಎಂಪಿಯು ಸಲಹೆ-ಸೂಚನೆಗಳನ್ನು ಆಹ್ವಾನಿಸಿದೆ.



`ಎ ಫ್ಯೂಚರ್ ವಿತ್ ನೋ ಲ್ಯಾಂಡ್‌ಫಿಲ್ಸ್' (ಕಸದ ಗುಂಡಿರಹಿತ ಭವಿಷ್ಯದ ದಿನಗಳು) ಎಂಬ ಹೆಸರಿನಲ್ಲಿ ಸಲ್ಲಿಸಲಾದ ವರದಿಯಲ್ಲಿ ಕಸದ ಗುಂಡಿಗಳಲ್ಲಿ ತ್ಯಾಜ್ಯದ `ಭಾರ' ಇಟ್ಟುಕೊಳ್ಳದೆ ಅದನ್ನು ಸಂಸ್ಕರಿಸುವ ಬಗೆವಿವರಿಸಲಾಗಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಬಿಬಿಎಂಪಿ ಎಸಗಿದ ಲೋಪಗಳನ್ನೂ ಪಟ್ಟಿ ಮಾಡಲಾಗಿದೆ.



ತ್ಯಾಜ್ಯವನ್ನು ಯಾವ ಹಂತದಲ್ಲೂ ಬೇರ್ಪಡಿಸದೆ ಅವೈಜ್ಞಾನಿಕವಾಗಿ ಕಸದ ಗುಂಡಿಗಳಿಗೆ ತಂದು ಸುರಿಯುತ್ತಿದ್ದುದೇ ಕಳೆದ ಆಗಸ್ಟ್‌ನಲ್ಲಿ ಕಸ ಸಮಸ್ಯೆ ಬಿಗಡಾಯಿಸಲು ಕಾರಣ ಎಂಬುದನ್ನು ಎತ್ತಿ ತೋರಲಾಗಿದೆ.



ಮಂಡೂರು, ಮಾವಳ್ಳಿಪುರ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಆರು ಗುಂಡಿಗಳಲ್ಲಿ ಸಾವಯವ ತ್ಯಾಜ್ಯ ಸಂಗ್ರಹಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸಾವಯವ ತ್ಯಾಜ್ಯ ಇದ್ದಲ್ಲೇ ಕರಗುತ್ತಿದ್ದರಿಂದ ಆ ವ್ಯವಸ್ಥೆ ಆರಂಭದಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಪ್ಲಾಸ್ಟಿಕ್‌ನಂತಹ ಘನತ್ಯಾಜ್ಯ ಹೆಚ್ಚಾಗಿ, ಸಂಸ್ಕರಣೆ ಇಲ್ಲದೆ ಪರ್ವತದ ರೂಪವನ್ನು ತಾಳಿ ಕಸ ಸಮಸ್ಯೆಯನ್ನು ಸೃಷ್ಟಿಸಿತು ಎಂದು ತಜ್ಞರ ಸಮಿತಿ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದೆ.



ಉತ್ಪಾದನೆಯಾಗುವ ಕಸದಲ್ಲಿ ಸಾವಯವ ತ್ಯಾಜ್ಯ ಪ್ರಮಾಣವೇ ಹೆಚ್ಚಾಗಿರುವ ಕಾರಣ ದೇಶದ ಯಾವ ನಗರದಲ್ಲೂ ಕಸವನ್ನು ದಹಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಗಳು ನಿರೀಕ್ಷಿತ ಪ್ರಮಾಣದ ಯಶಸ್ಸನ್ನು ನೀಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.



ತ್ಯಾಜ್ಯ ನಿರ್ವಹಣೆಗೆ ಸೂಕ್ತ ಶಾಸನ ಅಥವಾ ನಿಯಮಾವಳಿ ಇಲ್ಲ. ರೂಪಿಸಲಾದ ಕೆಲವು ನಿಯಮಗಳ ಪಾಲನೆಗೂ ಸೂಕ್ತವಾದ ವ್ಯವಸ್ಥೆ ಇಲ್ಲ. ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಘಟಕ ಇಲ್ಲ. ಕೈಗಾರಿಕೆ ತ್ಯಾಜ್ಯ ನಿರ್ವಹಣೆಗೆ ಅಗತ್ಯವಾದ ನಿಯಮಾವಳಿ ಇಲ್ಲ. ಕಸ ಸಂಗ್ರಹದ ವ್ಯವಸ್ಥೆ ಸಮರ್ಪಕವಾಗಿಲ್ಲ. ಸಾಗಾಟ ಪೂರ್ವದಲ್ಲಿ ಕಸವನ್ನು ಪ್ರಾಥಮಿಕ ಸಂಸ್ಕರಣೆ ಮಾಡುವ ವ್ಯವಸ್ಥೆ ಇಲ್ಲ. ಮೂಲದಲ್ಲಿ ಕಸ ಬೇರ್ಪಡಿಸುವ ನಿಯಮ ಅನುಷ್ಠಾನಕ್ಕೆ ಬಂದಿಲ್ಲ. ಸಾಧ್ಯವಿದ್ದ ವಸ್ತುಗಳ ಮರು ಬಳಕೆ ಆಗುತ್ತಿಲ್ಲ ಎಂದು ಸಮಿತಿ `ಇಲ್ಲ'ಗಳ ದೊಡ್ಡ ಪಟ್ಟಿಯನ್ನೇ ಮಾಡಿದೆ.



ಕಟ್ಟಡ ತ್ಯಾಜ್ಯ ಹಾಗೂ ಉದ್ಯಾನ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಇಲ್ಲ. ಅಗತ್ಯವಾದ ಪೌರ ಕಾರ್ಮಿಕರು ಇಲ್ಲ. ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲ. ಯಾವ ಅಧಿಕಾರಿಗೂ ನಿಶ್ಚಿತ ಹೊಣೆಗಾರಿಕೆ ನಿಗದಿ ಆಗಿಲ್ಲ. ಸಾರ್ವಜನಿಕರಲ್ಲೂ ತ್ಯಾಜ್ಯ ನಿರ್ವಹಣೆ ವಿಷಯವಾಗಿ ಸೂಕ್ತ ತಿಳಿವಳಿಕೆ ಇಲ್ಲ ಎಂಬುದನ್ನು ಬೊಟ್ಟು ಮಾಡಿ ತೋರಿಸಲಾಗಿದೆ.



ಘನತ್ಯಾಜ್ಯ ನಿರ್ವಹಣೆಯಲ್ಲಿ ಬಿಬಿಎಂಪಿ ಲೋಪ-ದೋಷಗಳನ್ನು ಸರಿಪಡಿಸುವ ಸಲುವಾಗಿ ಮಾರ್ಗಸೂಚಿಯೊಂದನ್ನು ರಚಿಸುವ ಅಗತ್ಯವನ್ನು ತಜ್ಞರ ಸಮಿತಿ ಪ್ರತಿಪಾದಿಸಿದೆ. ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಆರ್ಥಿಕವಾಗಿ, ಸಾಮಾಜಿಕವಾಗಿ, ತಾಂತ್ರಿಕವಾಗಿ ಮತ್ತು ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುವಂತಹ ಸಂಸ್ಕರಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಶಿಫಾರಸು ಮಾಡಲಾಗಿದೆ.



ಮೂಲದಲ್ಲಿ ಕಸ ಪ್ರತ್ಯೇಕಗೊಳಿಸುವುದು, ಅದನ್ನು ಸಂಗ್ರಹಿಸುವುದು, ಸಾಗಾಟ ಮಾಡುವುದು, ಸಂಸ್ಕರಿಸುವುದು, ಮರು ಬಳಕೆ ಮಾಡುವುದು (ಬಯೋಗ್ಯಾಸ್, ಪುನರ್ ಬಳಸಬಹುದಾದ ವಸ್ತುಗಳು ಇತ್ಯಾದಿ) ಎಂಬ ಸೂತ್ರವನ್ನು ಬಿಬಿಎಂಪಿಗೆ ನೀಡಲಾಗಿದೆ.



ಕಸದ ಉತ್ಪಾದಕರ ಜವಾಬ್ದಾರಿಯನ್ನು ನಿಗದಿ ಮಾಡಬೇಕು. ತ್ಯಾಜ್ಯದ ನಿರ್ವಹಣೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆ ಹಾಕಿಕೊಳ್ಳಬೇಕು. ಒಮ್ಮೆ ರೂಪಿಸಿದ ನೀತಿಗಳನ್ನು ಕನಿಷ್ಠ ಐದು ವರ್ಷಅವಧಿಗೆ ಬದಲಾವಣೆ ಮಾಡಬಾರದು. ಮುಂಬರುವ ಆಗಸ್ಟ್ 1ರಿಂದ ಕಟ್ಟಡ ಪರವಾನಗಿ ನೀಡುವಾಗ ತ್ಯಾಜ್ಯ ನಿರ್ವಹಣೆ ಷರತ್ತನ್ನು ಆದ್ಯತೆ ಮೇರೆಗೆ ವಿಧಿಸಬೇಕು. ತ್ಯಾಜ್ಯದ ನಿರ್ವಹಣೆಯನ್ನು ವಿಕೇಂದ್ರೀಕರಣ ಮಾಡಬೇಕು. ತ್ಯಾಜ್ಯದಲ್ಲಿ ದೊರೆಯುವ ಪ್ಲಾಸ್ಟಿಕ್ ವಸ್ತುಗಳನ್ನು ಬಿಬಿಎಂಪಿ ರಸ್ತೆ ನಿರ್ಮಾಣಕ್ಕೆ ಬಳಸಬೇಕು ಎಂದು ಸಲಹೆ ನೀಡಲಾಗಿದೆ.



ತ್ಯಾಜ್ಯ ನಿರ್ವಹಣೆ ಹೊಣೆಯನ್ನು ಹೊತ್ತ ಸಿಬ್ಬಂದಿಯನ್ನು ಬೇರೆ ಯಾವ ಉದ್ದೇಶಕ್ಕೂ ಬಳಕೆ ಮಾಡಬಾರದು. ಖಾಲಿ ಇರುವ 4,000 ಪೌರ ಕಾರ್ಮಿಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿಕೊಳ್ಳಬೇಕು. ಕಸದ ರಾತ್ರಿ ವಿಲೇವಾರಿಯೂ ಆದಷ್ಟು ಬೇಗ ನಿಲ್ಲಬೇಕು. ಸಂಜೆ ವೇಳೆ ಕಸ ಸಂಗ್ರಹಕ್ಕೂ ಬ್ರೇಕ್ ಬೀಳಬೇಕು. ಸಂಗ್ರಹವಾದ ಕಸವನ್ನು ವಾಹನದಲ್ಲಿ ಕೊಳೆಯಲು ಬಿಡದೆ ಬಹುಬೇಗ ವಿಲೇವಾರಿ ಆಗಬೇಕು. ಬಡಾವಣೆ ಉದ್ಯಾನಗಳಲ್ಲಿ ಗಿಡಗಳ ಎಲೆ ಸೇರಿದಂತೆ ಸಾವಯವ ತ್ಯಾಜ್ಯವನ್ನು ಅಲ್ಲಿಯೇ ಗೊಬ್ಬರ ಮಾಡಲು ಬಳಸಬೇಕು.



ಕಟ್ಟಡ ನಿರ್ಮಾಣ ಮತ್ತು ಕೆಡವುವಿಕೆಯನ್ನು ಸೂಕ್ತವಾಗಿ ವ್ಯಾಖ್ಯಾನಿಸಬೇಕು. ಮತ್ತು ಅದರ ತ್ಯಾಜ್ಯ ನಿರ್ವಹಣೆಗೆ ನೀತಿ ರೂಪಿಸಬೇಕು. ಪ್ರತಿ ವಾರ್ಡ್‌ನಲ್ಲಿ ಕಸ ಸಂಗ್ರಹ ಕೇಂದ್ರ ತೆರೆಯಬೇಕು. ನಿರ್ವಹಣೆ ಮೇಲೆ ನಿಗಾ ಇಡಲು ಮೂರನೇ ಸಂಸ್ಥೆಯಿಂದ ಪರಿಶೀಲನೆ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ.



ಆಯಾ ವಾರ್ಡ್‌ನಲ್ಲಿ ಉತ್ಪಾದನೆಯಾಗುವ ಕಸವನ್ನು ಅಲ್ಲಿಯೇ ನಿರ್ವಹಣೆ ಮಾಡಬೇಕು. ಕಸದ ತೂಕ ಮಾಡಲು ವೈಜ್ಞಾನಿಕ ವಿಧಾನ ಅಳವಡಿಕೆ ಮಾಡಿಕೊಳ್ಳಬೇಕು. ಕಸ ಸಾಗಾಟದ ಪ್ರತಿ ವಾಹನಕ್ಕೆ ಜಿಪಿಎಸ್ ನಿಗಾ ವ್ಯವಸ್ಥೆ ಮಾಡಬೇಕು ಎಂದೂ ಸಲಹೆ ನೀಡಲಾಗಿದೆ.



ತಜ್ಞರ ಸಮಿತಿಯಲ್ಲಿ ಯಾರಿದ್ದರು?

ಬಿಬಿಎಂಪಿ ಆಯುಕ್ತರು ಅಧ್ಯಕ್ಷರಾಗಿದ್ದ ತಜ್ಞರ ಸಮಿತಿಯಲ್ಲಿ ಒಟ್ಟು ಏಳು ಜನ ಸದಸ್ಯರಿದ್ದರು. ತ್ಯಾಜ್ಯ ಹಾಗೂ ಪರಿಸರ ನಿರ್ವಹಣೆಯಲ್ಲಿ ಹೊಂದಿದ ಅನುಭವದ ಆಧಾರದ ಮೇಲೆ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು.



ಡಾ.ಎಚ್.ಸಿ. ಶರಶ್ಚಂದ್ರ, ಅಲ್‌ಮಿತ್ರಾ ಪಟೇಲ್, ಕಲ್ಪನಾ ಕರ್, ರಮಾಕಾಂತ್, ಬಸವಯ್ಯ, ಪ್ರೊ. ರಾಧಾಕೃಷ್ಣ ಮತ್ತು ವೆಂಕಟೇಶ ಶೇಖರ್ ಸಮಿತಿಯ ಸದಸ್ಯರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.