ಮಂಗಳವಾರ, ಮೇ 18, 2021
31 °C

ತೈಲ ಬೆಲೆ ಏರಿಕೆ: ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಡೀಸೆಲ್ ಬೆಲೆ ಏರಿಕೆ ಮತ್ತು ನಿರ್ವಹಣಾ ವೆಚ್ಚದ ನೆಪದಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರದಲ್ಲಿ ಆಗಿರುವ ಭಾರಿ ಏರಿಕೆಯನ್ನು ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ಸಿಪಿಎಂ ತಾಲ್ಲೂಕು ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಇಲ್ಲಿನ ಪಕ್ಷದ ಕಚೇರಿಯಿಂದ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಸವೇಶ್ವರ ಬಜಾರ್‌ನ ಸರ್ಕಲ್‌ಗೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಕಾಂಗ್ರೆಸ್ ಸರಕಾರದ ಪ್ರತಿಕೃತಿಯನ್ನು ದಹಿಸುವ ಮೂಲಕ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ತಾಲ್ಲೂಕು ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿ, ನೂತನ ಕಾಂಗ್ರೆಸ್ ಸರಕಾರ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬಸ್ ಪ್ರಯಾಣ ದರದಲ್ಲಿ ಭಾರಿ ಪ್ರಮಾಣದ ಏರಿಕೆ ಮಾಡುವ ಮೂಲಕ ಜನರ ನೆಮ್ಮದಿಯನ್ನು ಹಾಳು ಮಾಡಿದೆ ಎಂದು ದೂರಿದರು.ಈಗಾಗಲೇ ತರಕಾರಿ ಸೇರಿದಂತೆ ವಿದ್ಯುತ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನರ ಬದುಕು ಅಸ್ಥಿರಗೊಂಡಿದೆ. ಇಂಥ ಸ್ಥಿತಿಯಲ್ಲಿ ರಾಜ್ಯದ ಬಡವರ ಮತ್ತು ಮಧ್ಯಮ ವರ್ಗದವರ ಪಾಲಿನ ಪ್ರಮುಖ ಸಂಚಾರ ಸೌಲಭ್ಯವಾದ ಸರಕಾರಿ ಬಸ್‌ಗಳ ದರ ಏರಿಕೆ ನುಂಗಲಾಗದ ತುತ್ತಾಗಿದೆ. ಇಂಧನ ಬೆಲೆ ಏರಿಕೆಯ ಹೊರೆಯನ್ನು ಪ್ರಯಾಣಿಕರ ಹೆಗಲಿಗೆ ಪರಭಾರೆ ಮಾಡುವುದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಷ್ಟದ ಹಾದಿ ಹಿಡಿದಿರುವ ಸಾರಿಗೆ ನಿಗಮಗಳ ವೆಚ್ಚ ಸರಿದೂಗಿಸಲು ಪ್ರಯಾಣ ದರವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸದೇ ಭಾರೀ ಪ್ರಮಾಣದಲ್ಲಿ ಏರಿಸಿರುವುದು ಖಂಡನಾರ್ಹ. ಸಾರಿಗೆ ನಿಗಮಗಳ ಎಲ್ಲ ಸಮಸ್ಯೆಗಳಿಗೆ ಪ್ರಯಾಣ ದರ ಏರಿಕೆಯೊಂದೇ ಪರಿಹಾರವಲ್ಲ.ಡಿಪೋಗಳಲ್ಲಿ ಬಿಡಿ ಭಾಗಗಳ ಖರೀದಿಯಲ್ಲಿ ನಡೆಯುವ ಭ್ರಷ್ಟಾಚಾರ, ಅಧಿಕಾರಿಗಳ ದುರಾಡಳಿತ ಹಾಗೂ ಟಿಕೆಟ್‌ನಿಂದ ಬರುವ ಆದಾಯ ಸೋರಿಕೆ ತಡೆಗಟ್ಟುವತ್ತ ಕ್ರಮ ಕೈಗೊಳ್ಳುವ ಮೂಲಕ ನಷ್ಟ ತಡೆಗಟ್ಟಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಸಮಿತಿ ಸದಸ್ಯ ಎಸ್. ಜಗನ್ನಾಥ್, ತಾಲ್ಲೂಕು ಸಮಿತಿಯ ಸದಸ್ಯ ಬೆಂಗಳೂರು ವೀರೇಶ್, ಕೊಟಗಿ ಮಲ್ಲಿಕಾರ್ಜುನ, ಸಿ. ಹನಮಂತ, ಚಾಂದಬೀ, ಸೊಬಟಿ ಅಂಜಿನಪ್ಪ, ಹೊಸಪೇಟೆ ಮಂಜುನಾಥ್, ಮಗಿಮಾವಿನಹಳ್ಳಿ ಆನಂದ್, ಜಿ.ಆರ್.ಮಲ್ಲಮ್ಮ ಪಾಲ್ಗೊಂಡಿದ್ದರು. ಡಿವೈಎಫ್‌ಐ ಮುಖಂಡ ಓ. ತಿಂದಪ್ಪ ಮತ್ತು ಬಸವರಾಜ ಕಮ್ಮಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.