ಸೋಮವಾರ, ಜೂಲೈ 13, 2020
29 °C

ತೊರ್ಕೆ ಬದಲಿಗೆ ಗರಗಸ ಮೀನು ಸಿಕ್ಕಿತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತಾಲ್ಲೂಕಿನ ದಾಂಡೇಬಾಗ್‌ನ ಸಾಂಪ್ರದಾಯಿಕ ಮೀನುಗಾರರ ಬಲೆಗೆ ಮೂರು ದಶಕಗಳ ಬಳಿಕ ಗರಗಸ ಮೀನು ಸಿಕ್ಕಿದೆ. ‘ಸ್ಮಾಲ್ ಟೀತ್ ಸಾ ಫಿಶ್’ ಎಂದು ಕರೆಯಲ್ಪಡುವ ಗರಗಸ ಮೀನು ಕಡಲಕಿನಾರೆಯಲ್ಲಿ ತಂದು ಹಾಕಿರುವ ಸುದ್ದಿ ಕೇಳಿ ಜನರು ತಂಡೋಪತಂಡವಾಗಿ ಬಂದು ಗಜಗಾತ್ರದ ಮೀನು ನೋಡಿ ಸಂತಸಪಟ್ಟರು.ಈ ಮೀನಿನ ಚುಂಚೂ ಉದ್ದವಾಗಿ ಅದಕ್ಕೆ ಗರಗಸದಂತೆ ಹಲ್ಲು ಇರುವುದರಿಂದ ‘ಗರಗಸ ಮೀನು’ ಎನ್ನುತ್ತಾರೆ. ಇದರ ಸಹಾಯದಿಂದ ಮೀನು ತನ್ನ ವೈರಿಗಳ ವಿರುದ್ಧ ಹೋರಾಟ ಮಾಡುವುದಷ್ಟೇ ಅಲ್ಲ, ಬೇರೆ ಮೀನುಗಳನ್ನು ಭೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ.ಆದರೆ ಈ ಗರಗಸದಂತಹ ಚುಂಚೇ ಮೀನಿನ ಪ್ರಾಣಕ್ಕೆರವಾಯಿತು. ದೇಹದ ಯಾವುದೇ ಭಾಗ ಬಲೆಯಲ್ಲಿ ಸಿಕ್ಕಿಹಾಕಿಕೊಂಡರೆ ಅದನ್ನು ಹರಿದು ತುಂಡು ಮಾಡುವ ಸಾಮರ್ಥ್ಯ ಈ ಮೀನಿಗಿದೆ. ಆದರೆ ಮೀನಿನ ಚುಂಚೂ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶಕ್ತಿಮೀರಿ ಹೋರಾಡಿ ನಂತರ ಗಜಗಾತ್ರದ ಮೀನು ಮೀನುಗಾರರ ವಶವಾಯಿತು.ದಾಂಡೇಬಾಗ್‌ನ ದನೇಶ ಸೈಲ್, ಪ್ರಶಾಂತ ಚಂಡೇಕರ್, ಸುನೀಲ್ ಬೊಳೆಕರ್ ಹಾಗೂ ದತ್ತಾತ್ರೇಯ ಎಂಬುವರು ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ತೊರ್ಕೆ ಮೀನಿನ ಭೇಟೆಗಾಗಿ ಗೋವಾ ಗಡಿ ಕಾಣಕೋಣ್ ಕಡಲತೀರದಿಂದ ಸುಮಾರು 5ರಿಂದ 6 ನಾಟಿಕಲ್ ಮೈಲು ದೂರದಲ್ಲಿ ಟೈರ್ ಬಲೆ ಹಾಕಿದ್ದರು.ಭಾನುವಾರ ಬೆಳಿಗ್ಗೆ ಬಲೆ ಮೇಲೆತ್ತುವಾಗ ಬಲೆಯಲ್ಲಿ ಭಾರದ ವಸ್ತು ಸಿಕ್ಕ ಅನುಭವವಾಗಿದೆ. ಬಲೆ ಕಲ್ಲಿಗೇನಾದರು ಸಿಕ್ಕಿರಬಹುದು ಎಂದು ಮೀನುಗಾರರು ಅಂದಾಜಿಸಿದ್ದರು. ಆದರೆ ಮೀನು ಇಡಿ ಬಲೆಯನ್ನು ಅತ್ತಿದಿಂತ್ತ ಎಳೆಯುತ್ತಿರುವುದನ್ನು ಗಮನಿಸಿದ ಮೀನುಗಾರರು ಇದು ದೊಡ್ಡ ಮೀನೇ ಇರಬೇಕು ಎಂದು ಭಾವಿಸಿದರು.ದೇಹದಲ್ಲಿರುವ ಶಕ್ತಿಯನ್ನೆಲ್ಲ ಬಳಸಿ ಬಲೆ ಎಳೆದಾಗ ಬಲೆಯಲ್ಲಿ ಗರಗಸ ಮೀನು ಇರುವುದು ಗೊತ್ತಾಯಿತು. ದೋಣಿ ಸಣ್ಣದಾಗಿದ್ದರಿಂದ ಮೀನು ದೋಣಿಗೆ ಹಾಕುವುದಕ್ಕಾಗಲಿ ಅಥವಾ ಎಳೆದು ತರುವುದಕ್ಕೆ ಸಾಧ್ಯವಾಗಲಿಲ್ಲ. ಮೀನು ಎಳೆದು ತರಲು ಸ್ವಲ್ಪ ಪ್ರಯತ್ನ ಪಟ್ಟರಾದರೂ ಮೀನಿನ ಹಲ್ಲು ಬಡಿದು ದತ್ತಾತ್ರೇಯ ಎಂಬಾತ ಗಾಯಗೊಂಡಿದ್ದಾನೆ.ಸತತ ಪ್ರಯತ್ನ ಮಾಡಿದ್ದರೂ ಮೀನು ದಡಕ್ಕೆ ತರಲು ಸಾಧ್ಯವಾಗದೇ ಇದ್ದಾಗ ಮೀನುಗಾರರು ಬಲೆಗೆ ದೊಡ್ಡ ಕಲ್ಲುಕಟ್ಟಿ ಮೀನನ್ನು ಅಲ್ಲೆ ಬಿಟ್ಟು ಭಾನುವಾರ ಬೆಳಿಗ್ಗೆ ದೊಡ್ಡ ದೋಣಿಯೊಂದನ್ನು ತೆಗೆದುಕೊಂಡು ಹೋಗಿ ಮೀನನ್ನು ದೋಣಿಗೆ ಕಟ್ಟಿ ದಡಕ್ಕೆ ತಂದಿದ್ದಾರೆ.ಅಂದಾಜು 500 ಕಿಲೋ ಭಾರವಿದ್ದ ಗರಗಸ ಮೀನನ್ನು ಸಮುದ್ರದಿಂದ ಮೇಲಕ್ಕೆ ತರಲು ಮೀನುಗಾರರು ಹರಸಾಹಸಪಟ್ಟರು. ಒಂದು ಗಂಟೆಯ ಪ್ರಯತ್ನದ ನಂತರ ಮೀನನನ್ನು ನೀರಿನಿಂದ ಸ್ವಲ್ಪ ದೂರಕ್ಕೆ ಎಳೆದು ತಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.