ಶನಿವಾರ, ಮೇ 15, 2021
23 °C

ತೋಟಪ್ಪನವರ ಮನೆ ನವೀಕರಣಕ್ಕೆ ಗುತ್ತಿಗೆದಾರರೇ ಇಲ್ಲಪ್ಪ!

ಪ್ರಜಾವಾಣಿ ವಾರ್ತೆ/ ಸುಭಾಸ.ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿ.ವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದ ಪ್ರೊ.ಕೆ.ಬಿ.ವೈ. ತೋಟಪ್ಪನವರು ವಾಸವಿದ್ದ ಮನೆಯ ನವೀಕರಣಕ್ಕೆ ಮೈಸೂರು ಮಹಾನಗರ ಪಾಲಿಕೆ ಮೂರು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರೇ ಸಿಗುತ್ತಿಲ್ಲ!-ಹೌದು. ಸರಸ್ವತಿಪುರಂನ ಕಾಂತರಾಜ ಅರಸ್ ರಸ್ತೆಯಲ್ಲಿರುವ ಪ್ರೊ. ತೋಟಪ್ಪನವರು ವಾಸವಿದ್ದ `ಪಾರಂಪರಿಕ ವಸತಿ ಗೃಹ~ವನ್ನು ಪುನರುಜ್ಜೀವನಗೊಳಿಸಲು ಪಾಲಿಕೆ ರೂ. 47 ಲಕ್ಷ ಅನುದಾನ ಮೀಸಲಿಟ್ಟಿದೆ. ಅಲ್ಲದೆ, ಮಾ. 23ರಂದು ಮೂರನೇ ಬಾರಿ ಟೆಂಡರ್ ಕರೆದಿದೆ. ಆದಾಗ್ಯೂ, ಈವರೆಗೂ ಒಬ್ಬ ಗುತ್ತಿಗೆದಾರರು ಮುಂದೆ ಬಾರದ್ದರಿಂದ `ಪಾರಂಪರಿಕ ಕಟ್ಟಡ~ ಪಳೆಯುಳಿಕೆಯಂತೆಯೇ ಉಳಿದುಕೊಂಡಿದೆ.ಮೈಸೂರು ವಿ.ವಿಯಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ.ತೋಟಪ್ಪನವರು ಈ ಮನೆಯಲ್ಲಿ ವಾಸವಾಗಿದ್ದರು. ರಾಜ್ಯಶಾಸ್ತ್ರ, ರಾಜಕೀಯ ವಿಜ್ಞಾನದ ಬಗ್ಗೆ ಅಪಾರ ಒಲವು ಹೊಂದಿದ್ದ ಅವರು ಶಿಷ್ಯಪಡೆಯನ್ನೇ ಕಟ್ಟಿದ್ದರು. ಅವರ ಬಳಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹ ಮಹಾ ನುಭಾವರು ವಾಸಿಸುತ್ತಿದ್ದ ಮನೆಯ ನವೀಕರಣಕ್ಕೆ ಗುತ್ತಿಗೆದಾರರು ಮುಂದಾಗದಿ ರುವುದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಟೆಂಡರ್‌ನಲ್ಲಿ ಪಾಲಿಕೆಯು, `ಈ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು, ಇದನ್ನು ನವೀಕರಿಸುವ ಸಂದರ್ಭದಲ್ಲಿ ಪೂರ್ವ ಸ್ಥಿತಿಗೆ ನವೀಕರಿಸಬೇಕು. ಇದರಲ್ಲಿ ವಿಶೇಷ ನೈಪುಣ್ಯ ಹಾಗೂ ಅನುಭವವುಳ್ಳ ಗುತ್ತಿಗೆದಾರರು ಮಾತ್ರ ಭಾಗವಹಿಸಬೇಕು. ಈ ಕೆಲಸಕ್ಕೆ ಪರಂಪರೆ, ಸಂಪ್ರದಾಯಬದ್ಧ ಸಾಮಗ್ರಿಗಳನ್ನು ಮಾತ್ರ ಉಪಯೋಗಿಸಬೇಕು ಹಾಗೂ ಕೆಲಸವನ್ನು ಪಾರಂಪರಿಕ ಗುಣಮಟ್ಟದಿಂದ ನಿರ್ವಹಿಸಬೇಕು~ ಎಂಬ ಷರತ್ತು ವಿಧಿಸಿದೆ. ಇದರಿಂದಾಗಿ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.ಈ ನಡುವೆ, ಯುನೆಸ್ಕೋದ `ಭಾರತೀಯ ಪಾರಂಪರಿಕ ನಗರಗಳ ಒಕ್ಕೂಟ- ಫೌಂಡೇಷನ್~ಗೆ (ಐಎಚ್‌ಸಿಎನ್-ಎಫ್) ಕಚೇರಿ ನಡೆಸಲು ಈ ಕಟ್ಟಡವನ್ನು 11 ವರ್ಷಗಳ ಅವಧಿಗೆ ಭೋಗ್ಯಕ್ಕೆ ಕೊಡಲಾಗಿದೆ. 2007ರಲ್ಲಿ ನವದೆಹಲಿಯಲ್ಲಿ ಕಚೇರಿ ಆರಂಭಿಸಿದ್ದ `ಐಎಚ್‌ಸಿಎನ್ ಫೌಂಡೇಷನ್~ ದಕ್ಷಿಣ ಭಾರತದಲ್ಲಿ ಕಚೇರಿ ಆರಂಭಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿತ್ತು. ಅದರಂತೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ ಅವರು ಮೈಸೂರು ಪಾರಂಪರಿಕ ನಗರವಾಗಿದ್ದು, ತಾವು ಮೈಸೂರಿಗೆ ಬರುವು ದಾದರೆ ಸ್ಥಳಾವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಪ್ರೊ.ತೋಟಪ್ಪನವರು ವಾಸವಿದ್ದ ಮನೆಯನ್ನೇ ಯುನೆಸ್ಕೊಗೆ ನೀಡಲಾಗಿತ್ತು.ರಾಜ್ಯದಲ್ಲಿ ಸಂರಕ್ಷಣಾ ಎಂಜಿನಿಯರುಗಳ ಕೊರತೆ ಇದೆ. ಪಾರಂಪರಿಕ ಕಟ್ಟಡಗಳ ನವೀಕರಣ ಕಾಮಗಾರಿಯಿಂದ ಹೆಚ್ಚಿನ ಲಾಭ ಸಿಗುವುದಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಸಂರಕ್ಷಣಾ ಕಟ್ಟಡಗಳ ನಿರ್ವಹಣೆ ಬಗ್ಗೆ ಹಲವು ಬಾರಿ ತರಬೇತಿ ನೀಡಿದರೂ ಗುತ್ತಿಗೆದಾರರು ಮುಂದೆ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.`ಗಚ್ಚು, ಗಾರೆ ಕೆಲಸ ನಿರ್ವಹಿಸುವ ಅನುಭವಿಗಳಿಗೆ ಈ ಕಟ್ಟಡದ ನವೀಕರಣ ಕಾಮಗಾರಿಯನ್ನು ಕೊಡಬೇಕು. ಆದರೆ, ತಾಂತ್ರಿಕವಾಗಿ ಅವರು ಅರ್ಹತೆ ಹೊಂದಿರು ವುದಿಲ್ಲ. ಪಿಡಬ್ಲ್ಯುಡಿ ದರಪಟ್ಟಿ ಪುಸ್ತಿಕೆಯಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ಉಲ್ಲೇಖವಿಲ್ಲ. ಆದರೆ, ಒಂದೆಡೆ ಹಳೆಯ ಕಟ್ಟಡಗಳನ್ನು ಒಡೆದು, ಹೊಸ ಕಟ್ಟಡ ನಿರ್ಮಿ ಸಬೇಕು ಎಂದು ಹೇಳಲಾಗಿದೆ. ನಿಜಕ್ಕೂ ಇದು ಸರಿಯಲ್ಲ.

 

ನಮ್ಮ ರಾಜ್ಯದಲ್ಲಿ ಪಾರಂಪರಿಕ ಕಟ್ಟಡಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ವಿಷಯ ದಲ್ಲಿ ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಉತ್ತಮ ಕೆಲಸ ಮಾಡುತ್ತಿದ್ದಾರೆ~ ಎನ್ನುತ್ತಾರೆ ಮೈಸೂರು ವಿ.ವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ.ಎನ್. ಎಸ್.ರಂಗರಾಜು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.