ಭಾನುವಾರ, ಜನವರಿ 19, 2020
20 °C
ಗುಂಜಾವತಿ ಭಾಗದಲ್ಲಿ ಮುಂದುವರಿದ ಕಾಡಾನೆಗಳ ಪುಂಡಾಟ

ತೋಟ, ಬಣವೆ, ಕಬ್ಬಿನ ಗದ್ದೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೋಟ, ಬಣವೆ, ಕಬ್ಬಿನ ಗದ್ದೆಗೆ ಹಾನಿ

ಮುಂಡಗೋಡ: ತೋಟ, ಗದ್ದೆಗಳಿಗೆ ಕಾಡಾನೆಗಳ ದಾಳಿ ಮುಂದುವರಿದಿದ್ದು ತಾಲ್ಲೂಕಿನ ಗುಂಜಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯರೇಬೈಲ್‌ ಗ್ರಾಮದ ಹೊಲಗದ್ದೆಗಳಿಗೆ ಮಂಗಳವಾರ ರಾತ್ರಿ ದಾಳಿ ನಡೆಸಿವೆ.ಗುರುಬಸಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಅವರ ತೋಟ ಹಾಗೂ ಗದ್ದೆಗೆ ಕಾಡಾನೆಗಳು ದಾಳಿ ನಡೆಸಿ ಬೆಳೆ ಹಾಳುಮಾಡಿವೆ. ಸುಮಾರು 120ರಷ್ಟು ಬಾಳೆ ಗಿಡ, 45–50ರಷ್ಟು ಅಡಿಕೆ ಮರಗಳನ್ನು ಮುರಿದು ಹಾಕಿವೆ. ನಾಲ್ಕು ಮರಿ ಆನೆಗಳನ್ನು ಒಳಗೊಂಡ ಒಟ್ಟು ಒಂಬತ್ತು ಆನೆಗಳ ಹಿಂಡು ರಾತ್ರಿ ಸಮಯದಲ್ಲಿ ತೋಟಕ್ಕೆ ನುಗ್ಗಿ ಫಸಲು ಬಿಡುತ್ತಿದ್ದ ಬಾಳೆ ಗಿಡಗಳನ್ನು ಹಾಗೂ 4–5ವರ್ಷದ ಅಡಿಕೆ ಗಿಡಗಳನ್ನು ಮುರಿದು ಹಾಕಿವೆ. ನಂತರ ಅಲ್ಲಿಯೇ ಸನಿಹದ ಕಬ್ಬಿನ ತೋಟಕ್ಕೂ ನುಗ್ಗಿರುವ ಕಾಡಾನೆಗಳು ಸುಮಾರು 3ಟನ್‌ ಕಬ್ಬು ಬೆಳೆಯನ್ನು ಹಾಳು ಮಾಡಿದ ಬಗ್ಗೆ ಅಂದಾಜಿಸಲಾಗಿದೆ.ಗ್ರಾಮದ ಸನಿಹದ ಅರಣ್ಯ ಪ್ರದೇಶದಿಂದ ಹೊಲಗದ್ದೆಗಳಿಗೆ ದಾಳಿ ನಡೆಸಿರುವ ಕಾಡಾನೆಗಳು ನಾಲ್ಕೈದು ರೈತರ ಭತ್ತದ ಬಣವೆಗಳನ್ನು ಹಾನಿ ಮಾಡಿ ನಂತರ ತೋಟದತ್ತ ನುಗ್ಗಿವೆ ಎನ್ನಲಾಗಿದೆ. ಬಾಳೆಗಿಡಗಳನ್ನು ತುಳಿದು ಹಾಕಿರುವ ಕಾಡಾನೆಗಳು ಇನ್ನೂ ಫಸಲು ಬಿಡದ ಅಡಿಕೆ ಮರಗಳನ್ನು ಬುಡ ಸಮೇತ ಕಿತ್ತು ಹಾಕಿವೆ. ನಂತರ ಅಲ್ಲಿಯೇ ಇದ್ದ ಭತ್ತದ ಬಣವೆಯ ಮೇಲೂ ದಾಳಿ ನಡೆಸಿ ಹಾನಿ ಮಾಡಿವೆ. ಬೆಳಗಿನ ಜಾವದವರೆಗೂ ತೋಟದಲ್ಲಿಯೇ ಬಿಡಾರ ಹೂಡಿದ್ದ ಕಾಡಾನೆಗಳು ನಂತರ ಸನಿಹದ ಅರಣ್ಯದತ್ತ ತೆರಳಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.‘ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಕಾಡಾನೆಗಳು ಈ ಪ್ರದೇಶದ ಹೊಲಗದ್ದೆಗಳು, ತೋಟಗಳಿಗೆ ದಾಳಿ ಮಾಡುತ್ತಿವೆ. ಮೊದಲೆರಡು ಸಲ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡಿರಲಿಲ್ಲ. ಈ ಸಲ ಮಾತ್ರ ಭತ್ತ, ಕಬ್ಬು, ಬಾಳೆ ಸೇರಿದಂತೆ ಬೆಳೆದ ಎಲ್ಲ ಬೆಳೆಗಳ ಮೇಲೂ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿವೆ’ ಎಂದು ರೈತರು ದೂರಿದ್ದಾರೆ.‘ರಾತ್ರಿ ಸಮಯದಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿರುವ ವಿಷಯವನ್ನು ಪಕ್ಕದ ಹೊಲದ ರೈತರು ತಿಳಿಸಿದರು. ಬಂದು ನೋಡುವಷ್ಟರಲ್ಲಿ ಕಾಡಾನೆಗಳು ಎಲ್ಲ ಕಡೆಯಿಂದ ದಾಳಿ ನಡೆಸಿರುವುದು ಕಂಡು ಬಂತು. ಏನೂ ಮಾಡಕ್ಕಾಗದ ದೂರದಿಂದ ನೋಡ್ತಾ ನಿಂತೆವು. ಬೆಳಗಿನ ಜಾವ ಅವು ಕಾಡಿಗೆ ಹೋದ ನಂತರ ತೋಟಕ್ಕೆ ಹೋಗಿ ನೋಡಿದರ ಸಂಕಟ ಬರಂಗ ಆತ್ರಿ. 4–5ವರ್ಷಗಳಿಂದ ಜೋಪಾನ ಮಾಡಿ ಬೆಳೆಸಿದ್ದ ಅಡಿಕೆ ಮರ ಹಾಗೂ ಬಾಳೆ ಗಿಡಗಳನ್ನು ಎಲ್ಲಿ ಬೇಕಾಂದ್ರ ಅಲ್ಲಿ ತಿಂದ ಮುರದಾವ. ಹಿಂಗಾದರೆ ನಾವು ಬದುಕವುದು ಹೆಂಗ. ಒಂದೇ ರಾತ್ರಿಯಲ್ಲಿ ಆನೆ ಹಿಂಡು ನಮ್ಮ ನ್ನ ಕಷ್ಟದಾಗ ಹಾಕಿ ಹೋಗ್ಯಾವ. ಅರಣ್ಯ ಇಲಾಖೆಯವರು ಬಂದ ಬರಕೊಂಡ ಹೋಗ್ಯಾರ್ರಿ’ ಎಂದು ಗುರುಬಸಯ್ಯ ನೋವಿನಿಂದ ತಮ್ಮ ಅಳಲು ತೋಡಿಕೊಂಡರು.ಕಾಡಾನೆಗಳ ದಾಳಿಯಿಂದ ಹಾನಿಯಾದ ಪ್ರದೇಶಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಬೆಳೆಹಾನಿಯ ಬಗ್ಗೆ ಪರಿಶೀಲಿಸಿದರು.ಮುಂದುವರಿದ ಪ್ರಯತ್ನ: ಈ ಬಗ್ಗೆ ಮಾತನಾಡಿದ ಎ.ಸಿ.ಎಫ್‌ ವಿ.ಆರ್‌. ಬಸನಗೌಡರ, ‘ಈಗಾಗಲೇ ತಾಲ್ಲೂಕಿನ ಗಡಿಭಾಗ ದಾಟಿ ಕಾಡಾನೆಗಳು ತೆರಳಬೇಕಿತ್ತು. ಕಳೆದ ಕೆಲ ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಯಲ್ಲಾಪುರ ಅರಣ್ಯ ಭಾಗಕ್ಕೆ ಕಳಿಸುವಲ್ಲಿ ಶ್ರಮಿಸುತ್ತಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)