ಭಾನುವಾರ, ಜೂನ್ 13, 2021
24 °C

ತ್ಯಾಗದ ನವನೀತ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಚಿತ್ರ: ಪುನೀತ್

`ಪ್ರೀತಿ ಮಧುರ, ತ್ಯಾಗ ಅಮರ~ ಎಂಬ ಸಿದ್ಧಾಂತದ ಪರಿಪಾಲನೆಯ ಫಲವಾಗಿ ಮೊಳಕೆಯೊಡೆದ ಚರ್ವಿತ ಚರ್ವಣ ಕಥಾವಸ್ತುವನ್ನೊಳಗೊಂಡ ಚಿತ್ರ `ಪುನೀತ್~. ಪ್ರೀತಿ ಮತ್ತು ತ್ಯಾಗವನ್ನೇ ಪ್ರಧಾನ ವಿಷಯವಾಗಿಟ್ಟುಕೊಂಡು ಭಾವನಾತ್ಮಕವಾಗಿ ಯುವಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಈ ಚಿತ್ರದಲ್ಲೂ ಮುಂದುವರಿದಿದೆ.ಚಿತ್ರಕಥೆಯ ಗಾಢತೆ ಮತ್ತು ಅನುಭವದ ಕೊರತೆಗಳಿಂದಾಗಿ ಅಲ್ಲಲ್ಲಿ ಎಡವಿದರೂ ಮೊದಲ ನಿರ್ದೇಶನದಲ್ಲೇ ನೀಲ್‌ಕಮಲ್ ಗಮನಸೆಳೆಯುತ್ತಾರೆ. ಯುವಸಮೂಹಕ್ಕೆ ಇಷ್ಟವಾಗುವಂತಹ ಪದಪುಂಜಗಳ ಜೋಡಣೆ ಸಂಭಾಷಣೆಯಲ್ಲಿದೆ. ಆದರೆ, ಪ್ರೀತಿಯ ಸಂಭ್ರಮ ಮತ್ತು ತ್ಯಾಗದ ನೋವನ್ನು ಪದಗಳ ಮೂಲಕವೇ ವ್ಯಕ್ತಪಡಿಸುವ ಉದ್ದೇಶವನ್ನು ಈಡೇರಿಸಿಕೊಳ್ಳುವ ಭರದಲ್ಲಿ ದೃಶ್ಯದಲ್ಲೂ ಅಷ್ಟೇ ಪರಿಣಾಮಕಾರಿಯಾಗಿ ಮೂಡಿಸುವುದನ್ನು ಮರೆಯುತ್ತಾರೆ.ಕಂಡ ಹುಡುಗಿಯರನ್ನೆಲ್ಲಾ ಪ್ರೀತಿಸಿ ಬಳಿಕ ಕೈ ಕೊಡುವ `ರೊಮ್ಯಾಂಟಿಕ್ ಬಾಯ್~ಗೆ ನಿಜವಾದ ಪ್ರೀತಿ ಹುಟ್ಟುವುದು ತಡವಾಗಿ. ಎಲ್ಲಾ ಹುಡುಗಿಯರಿಗೂ ಅಂಜಿಕೆಯಿಲ್ಲದೆ `ಐ ಲವ್ ಯೂ~ ಹೇಳುವ ಆತನಿಗೆ ತನ್ನ ಮನೆಯಲ್ಲೇ ಇರುವ ಪುಣ್ಯಳ (ನಿಶಾ ಶೆಟ್ಟಿ) ಬಳಿ ಪ್ರೀತಿಯನ್ನು ಅರಹುವ ಧೈರ್ಯವಿಲ್ಲ. ನಾಯಕಿಯದೂ ಇದೇ ಪರಿಸ್ಥಿತಿ. ಆಕೆ ತನ್ನನ್ನೇ ಪ್ರೀತಿಸುತ್ತಿದ್ದಾಳೆ ಎಂಬ ಭ್ರಮೆ ನಾಯಕನದು.

 

ಆತನ ಸ್ನೇಹಿತರು, ಅಮ್ಮ, ಅಣ್ಣನದೂ ಅದೇ ಕಲ್ಪನೆ. ಅಪ್ಪ ಮಾಡಿದ ಆಸ್ತಿ ಇರುವುದೇ ಅನುಭವಿಸಲು ಎನ್ನುವ ಪುನೀತ್‌ಗೆ ನಿಜವಾದ ಪ್ರೀತಿ ಎಂಬುದೇ ಗೊತ್ತಿಲ್ಲ ಎನ್ನುವುದು ಪುಣ್ಯಳ ಅಭಿಪ್ರಾಯ. ಕೊನೆಗೆ ನಾಯಕಿ ಯಾರನ್ನು ಪ್ರೀತಿಸುತ್ತಿದ್ದಾಳೆ ಎಂಬ ಸತ್ಯ ಹೊರಬರುತ್ತದೆ. ಭಗ್ನಪ್ರೇಮಿಗಳಿಗೆ ಮಳೆಯೇ ಮದ್ದು, ಮುದ್ದು. ಮಳೆಯಲ್ಲೇ ನಾಯಕ ಕಣ್ಣೀರು ಒರೆಸಿಕೊಳ್ಳುತ್ತಾನೆ. ತ್ಯಾಗದ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಾನೆ.ತ್ಯಾಗದ ಹಳೆಯ ಸೂತ್ರವನ್ನು ಚಿತ್ರ ಅವಲಂಬಿಸಿದ್ದರೂ ಅದನ್ನು ಪ್ರಸ್ತುತಪಡಿಸುವ ಸರಳ ವಿಧಾನ ಗಮನಾರ್ಹವಾದುದು. ಚಿಕ್ಕ ಸಂಸಾರದ ತುಂಬು ಪ್ರೀತಿಯ ನಡುವೆಯೇ ಸಾಗುವ ಪ್ರೇಮಕಥೆಯನ್ನು ಸುಂದರವಾಗಿ ಹೆಣೆದಿದ್ದಾರೆ. ಆದರೆ ನಿರೂಪಣೆಯಲ್ಲಿ ಮತ್ತು ಕಥೆಯಲ್ಲಿ ಇನ್ನಷ್ಟು ವೇಗದ ಅಗತ್ಯವಿತ್ತು. ನಾಯಕರಾಗಿ ಎರಡನೇ ಚಿತ್ರದಲ್ಲಿ ಕಾಣಿಸಿಕೊಂಡಿರುವ ದಿಲೀಪ್ ಪೈ ಅಭಿನಯ ತೀರಾ ನಿರಾಶಾದಾಯಕ ಆಗಿಲ್ಲವಾದರೂ, ಭಾವನೆಗಳನ್ನು ಹರಿಬಿಡುವಲ್ಲಿ ಅವರು ಹಿಂದೆಬೀಳುತ್ತಾರೆ.

 

ನಾಯಕಿ ನಿಶಾ ಶೆಟ್ಟಿ ನಟನೆ ಸ್ವಲ್ಪ ಮಾಗಬೇಕಿದೆ. ಆದರ್ಶ್, ರಾಮಕೃಷ್ಣ, ಭವ್ಯ, ಚಂದ್ರಶೇಖರ್ ಪಾತ್ರಗಳು ಅಚ್ಚುಕಟ್ಟಾಗಿವೆ.ನೀ ಬೇಕೆ ಬೇಕು ಎಂದು ಹಟ ಮಾಡಿದೆ~ ಎಂಬ ಮಧುರ ಹಾಡು ನೀಡಿರುವ ಸಂಗೀತ ನಿರ್ದೇಶಕ ಕಬೀರ್‌ರಾಜ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ವಸ್ತುವಿನ ಆಯ್ಕೆ ಮತ್ತು ನಿರೂಪಣಾ ದೃಷ್ಟಿಯಲ್ಲಿ ಚಿತ್ರ ಸೊರಗಿದಂತೆ ಕಾಣುತ್ತದೆ. ಪ್ರೀತಿ ಪ್ರೇಮದ ಗುಂಗಿನಲ್ಲಿರುವವರಿಗೆ, ಪ್ರೇಮ ವಿರಹಿಗಳಿಗೆ ಮುಂಗಾರು ಮಳೆಯ ಹನಿಯೊಂದು ಸಿಡಿದ ಅನುಭವ ನೀಡುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.