ಶುಕ್ರವಾರ, ಮೇ 7, 2021
25 °C

ತ್ಯಾಗದ ಪ್ರತೀಕ ಹಾರವನ ಕೆರೆ

ಡಿ.ಎಂ. ಹಾಲಾರಾಧ್ಯ Updated:

ಅಕ್ಷರ ಗಾತ್ರ : | |

ನುಡಿದಂತೆ ನಡೆಯುವ, ಛಲದಿಂದ ನಿರ್ಮಾಣವಾದ ಕೆರೆಗಳಿಗೆ ಸಾಕ್ಷಿಯಾಗಿ ಸೂಳೆಕೆರೆ, ಮದಗದಕೆರೆ ಇನ್ನು ಅನೇಕ ಕೆರೆಗಳಿವೆ. ಇಂತಹ ತ್ಯಾಗದ ಹಿನ್ನೆಲೆಯಲ್ಲಿ ನಿರ್ಮಾಣವಾದ ಕೆರೆ  `ಹಾರವನ ಕೆರೆ~ ಎಂಬುದಾಗಿ ಹಿರಿಯರು ಹೇಳುತ್ತಾರೆ.ಐತಿಹ್ಯ: ನ್ಯಾಮತಿ-ಕೆಂಚಿಕೊಪ್ಪ ಮಾರ್ಗವಾಗಿ ಹೊನ್ನಾಳಿಗೆ ಹೋಗುವ ಮಾರ್ಗದಲ್ಲಿ ಸಿಗುವ ತುಗ್ಗಲಹಳ್ಳಿ ಕರಡಿಕಲ್ ಸಿದ್ದೇಶ್ವರ ದೇವಸ್ಥಾನದ ಬಳಿಯ ಕೆರೆಯೇ ಹಾರವನ ಕೆರೆ.  ಸುಮಾರು ಶತಮಾನಗಳ  ಹಿಂದೆ   ಗ್ರಾಮದ ಯಜಮಾನಿಕೆ ಪಡೆಯಲು,  ಗ್ರಾಮದ ತೀರ್ಮಾನಕ್ಕೆ ತಲೆಬಾಗಿದ ಘಟನೆಯ ಹಿನ್ನೆಲೆಯಲ್ಲಿ ನಿರ್ಮಾಣವಾದ ಕೆರೆ  ಎಂದು ಗ್ರಾಮದ ನಿವೃತ್ತ ಶಿಕ್ಷಕ ಎಂ. ಲೋಕೇಶ್ವರಯ್ಯ ಹೇಳುತ್ತಾರೆ.ಅವರ ಪ್ರಕಾರ ಕೆಂಚಿಕೊಪ್ಪ ಗ್ರಾಮದಲ್ಲಿ ಹಾರವರು (ಬ್ರಾಹ್ಮಣರು) ಮತ್ತು ಲಿಂಗಾಯತರು ಸಮವಾಗಿದ್ದು, ತುಂಬು ಜೀವನ ನಡೆಸುತ್ತಿದ್ದರೆಂಬುದ್ದಕ್ಕೆ ಸಾಕಷ್ಟು ಸಾಕ್ಷಿಯಾಗಿ  ಈ ಗ್ರಾಮದಲ್ಲಿ ಹಾರವರ ಉಂಬಳಿ, ಮಠದ ಉಂಬಳಿ, ಗೌಡರ ಉಂಬಳಿ ಜಮೀನುಗಳಿವೆ.ಗ್ರಾಮದ ಯಜಮಾನಿಕೆಯನ್ನು ಪಡೆಯಲು (ಗೌಡಕಿ) ಎರಡು ಕೋಮಿನವರಲ್ಲಿ ವಾಗ್ವಾದಗಳು ನಡೆದು ಜಗಳಕ್ಕೆ ನಾಂದಿಯಾಯಿತು. ಆಗ ಊರಿನ ಪಂಚರು ಮತ್ತು ಸುತ್ತಮುತ್ತಲಿನ ಗ್ರಾಮದ ಪಂಚರು ಸೇರಿ ಪಂಚಾಯ್ತಿ ಮಾಡಿದರೂ ಒಪ್ಪದೆ ಹೋದ ಕಾರಣ ಅಂತಿಮವಾಗಿ ಎರಡೂ ಜನಾಂಗದವರು ಸ್ನಾನ, ಪೂಜೆ ಮಾಡಿಕೊಂಡು ಗುಗ್ಗಳದಲ್ಲಿ ಜ್ಯೋತಿಯನ್ನು ಹೊತ್ತಿಸಿಕೊಂಡು ಹಿರೇಕಲ್ಮಠದ ಚನ್ನಪ್ಪಸ್ವಾಮಿ ಮಠಕ್ಕೆ ಹೋಗಬೇಕು, ಅಲ್ಲಿಗೆ ತಲುಪುವುದರೊಳಗೆ ಯಾರ ಜ್ಯೋತಿ ನಂದುತ್ತದೊ ಅವರು ಗೌಡಕಿಯನ್ನು ಬಿಟ್ಟುಕೊಡುವುದು ಹಾಗೂ ಅವರನ್ನು ತಲೆಗೆ ಹೊಡೆದು ಸಾಯಿಸುವುದು ಎಂಬ  ತೀರ್ಪು ಕೊಟ್ಟರು.ಅದರಂತೆ ಎರಡು ಕೋಮಿನವರು ಜ್ಯೋತಿಯನ್ನು ಹಿಡಿದು ಮಠಕ್ಕೆ ಹೊರಟರಂತೆ, ಈಗಿರುವ ಕೆರೆಯ ಬಳಿ ಬರುವಷ್ಟರಲ್ಲೇ ಹಾರವರ  ಗುಗ್ಗಳ ಜ್ಯೋತಿ ನಂದಿತು, ಪಂಚಾಯ್ತಿ ತೀರ್ಮಾನದಂತೆ ಹಾರವನು ಯಜಮಾನಿಕೆಯನ್ನು ಬಿಟ್ಟು ಕೊಟ್ಟು  ಮರಣದಂಡನೆಗೆ ಒಪ್ಪಿದಾಗ  ನಿನ್ನ ಕೊನೆಯ ಆಸೆ ಏನು ಎಂದು ಕೇಳಿದಾಗ ಇದೇ ಸ್ಥಳದಲ್ಲಿ ನನ್ನ ಹೆಸರಿನ ಒಂದು ಕೆರೆ (ಕಟ್ಟೆ)ಯನ್ನು ಕಟ್ಟಿಸಿ ಎಂದು ಹೇಳಿದ, ನಂತರ ಅವನಿಗೆ ಶಿಕ್ಷೆ ನೀಡಿ ಅಲ್ಲಿಯೇ ಸಮಾಧಿ ಮಾಡಿದರು ಅಂದಿನಿಂದ ಈ ಕೆರೆ ಹಾರವನ ಕೆರೆ (ಕಟ್ಟೆ) ಎಂದಾಯಿತು ಎಂದು ನಮ್ಮ ಪೂರ್ವಜರು, ಜಾನಪದ ಸೊಗಡಿನಿಂದ ಮನೆಮಾತಾಗಿದೆ ಎಂದು ಎನ್ನುತ್ತಾರೆ ಲೋಕೇಶ್ವರಯ್ಯ.ಹಾರವನ ಕೆರೆ ಪ್ರಕೃತಿಯ ಸೌಂದರ್ಯ ಆಕರ್ಷಿತವಾಗಿದ್ದು, ಸಮೀಪದಲ್ಲಿಯೇ ಮಜ್ಜನಿಗುಂಡಿ ಬಸವೇಶ್ವರ ತೀರ್ಥಸ್ಥಳ, ತೀರ್ಥರಾಮೇಶ್ವರ ಪುಣ್ಯಕ್ಷೇತ್ರಗಳಿದ್ದು, ನಾಡಿನ ಜನರು ಇವುಗಳ ದರ್ಶನ ಪಡೆಯಲು ಅನುಕೂಲವಾಗುವಂತೆ ಜನಪ್ರತಿನಿಧಿಗಳು, ಗ್ರಾಮಸ್ಥರು ವಿಶೇಷ ಕಾಳಜಿ ವಹಿಸಬೇಕಿದೆ ಎಂಬುದು ಪರಿಸರ ಪ್ರೇಮಿಗಳ ಆಸೆಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.