ಭಾನುವಾರ, ಜನವರಿ 26, 2020
28 °C

ದಂಗೆ ಎದ್ದ ‘ಕಾಡಿನ ಜೀವಿ’

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

‘ನಿಸರ್ಗವು ಮನುಷ್ಯನ ಆಸೆಗಳನ್ನು ಪೂರೈಸಬಲ್ಲುದು. ಆದರೆ  ದುರಾಸೆಗಳನ್ನಲ್ಲ’ ಎಂದು ದಶಕಗಳ ಹಿಂದೆಯೇ ಮಹಾತ್ಮ ಗಾಂಧೀಜಿ ಹೇಳಿದ ಮಾತು ಇಂದಿಗೂ ನಮಗೆ ಅರ್ಥವಾಗಿಲ್ಲ. ಜನಸಂಖ್ಯೆ ಹಿಗ್ಗುತ್ತ ಅರಣ್ಯ ಪ್ರದೇಶದ ಸಾಂದ್ರತೆ ಕುಗ್ಗುತ್ತ ಸಾಗಿ ದಂತೆ, ಮೂಲ ಆವಾಸಸ್ಥಾನ ಮತ್ತು ಆಹಾರದ ಕೊರತೆ ಎದುರಿಸುವ ಪ್ರಾಣಿಗಳು ‘ದಂಗೆ’ ಏಳುತ್ತವೆ ಎಂದು ಪರಿಸರ ತಜ್ಞರು ವಿಶ್ಲೇಷಿಸುತ್ತಾರೆ.‘ಅರಣ್ಯ ವ್ಯಾಪ್ತಿ ಕಡಿಮೆಯಾಗುತ್ತಿದೆ. ನೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಶೇ 80ರಷ್ಟು ಅರಣ್ಯ ಪ್ರದೇಶ ಇತ್ತು. ಅದರೆ ಈಗ ಶೇ 19ಕ್ಕೆ ಇಳಿದಿದೆ. ಇದರಿಂದ ಆಹಾರ, ನೀರು, ಆವಾಸಸ್ಥಾನಗಳು ಸಿಗದೇ ಅವುಗಳನ್ನು ಅರಸುತ್ತ ವನ್ಯಜೀವಿಗಳು ಹೋಗುತ್ತವೆ. ಅದರಲ್ಲೂ ಆನೆಗಳು ತಲೆತಲಾಂತರದಿಂದ ಒಂದು ಆನೆಮಾರ್ಗವನ್ನು ಅನುಸರಿಸಿಕೊಂಡು ಬಂದಿವೆ.  ಆ ಮಾರ್ಗವು ಅವುಗಳ ಮಸ್ತಿಷ್ಕದಲ್ಲಿ ಅಚ್ಚಾಗಿದ್ದು, ವಂಶಪಾರಂಪರ್ಯವಾಗಿ ಅದು ವರ್ಗಾವಣೆಗೊಳ್ಳುವುದು ನಿಸರ್ಗ ನಿಯಮ.

ವರ್ಷಕೊಮ್ಮೆ ಒಂದು ಬಾರಿ ಅವು ವಲಸೆ ಹೋಗುವುದು ಮತ್ತು ಮರಳಿ ತಮ್ಮ ಪ್ರದೇಶಗಳಿಗೆ ತೆರಳುವುದು ನಡೆಯುತ್ತದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕದ ನಡುವೆ ಇದು ಸಹಜ ಕ್ರಿಯೆ. ಅಲ್ಲಿಂದ ಇಲ್ಲಿಗೆ ಬರುವಾಗ ಆಹಾರ ಮೂಲಗಳನ್ನು ನೋಡಿಕೊಂಡು ಸಾಗುತ್ತವೆ. ಮರಳುವಾಗ ತಿನ್ನುತ್ತ ಹೋಗುತ್ತವೆ. ಆದರೆ ಅಭಿವೃದ್ಧಿಯ ವೇಗಕ್ಕೆ ಪ್ರತಿವರ್ಷವೂ ಭೌಗೋಳಿಕ ಲಕ್ಷಣಗಳೂ ಬದಲಾಗುತ್ತಿವೆ.

ಇದರಿಂದ ಹೊಲ ಗದ್ದೆಗಳಲ್ಲಿ ಬೆಳೆಯುವ ಕಬ್ಬು, ರಾಗಿಯ ಸವಿರುಚಿಯನ್ನು ಆನೆಗಳು   ಕಂಡಿವೆ. ಬೆಳೆ, ಕಟಾವಿನ ಸಮಯವೂ ಅವುಗಳಿಗೆ ಗೊತ್ತಾಗಿದೆ. ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬರುತ್ತವೆ. ತನ್ನ ಬೆಳೆಯ ರಕ್ಷಣೆಗೆ ನಿಲ್ಲುವ ಮನುಷ್ಯ ಮತ್ತು ಅವುಗಳ ನಡುವೆ ಸಂಘರ್ಷ ಶುರುವಾಗುತ್ತದೆ. ಆದರೆ ಅವುಗಳನ್ನು ತಮ್ಮ ಪಾಡಿಗೆ ಹೋಗಲು ಬಿಟ್ಟರೆ ಹೋಗುತ್ತವೆ. ಸಂಘರ್ಷವನ್ನು ತಡೆಯಲು ಸರ್ಕಾರ ಮತ್ತು ಜನಸಮುದಾಯ ಆನೆಮಾರ್ಗವನ್ನು ಗುರುತಿಸಿ ಬಿಟ್ಟುಕೊಡಬೇಕು’ ಎಂದು ವನ್ಯಜೀವಿ ತಜ್ಞ ಡಾ. ಹರೀಶ್ ಭಟ್‌ ಹೇಳುತ್ತಾರೆ.ಮಾರ್ಜಾಲ ಸಂತತಿಯ ಹುಲಿ, ಸಿಂಹ ಮತ್ತು ಚಿರತೆಗಳು ನರಭಕ್ಷಕ ಆಗಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಗಬೇಕಿದೆ. ಏಕೆಂದರೆ ಇವು ಮೂಲತಃ ಮಾನವರನ್ನು ನೋಡಿ ಹೆದರುವ ಜೀವಿಗಳು. ಆದರೆ ಇವುಗಳನ್ನು ಬೇಟೆಯಾಡುವ ಅಥವಾ ಅವುಗಳ ಮಾರ್ಗಕ್ಕೆ ಅಡ್ಡಿಯಾಗಿ ಭೀತಿ ಮೂಡಿಸಿದಾಗ ಪ್ರತಿದಾಳಿ ನಡೆಸುವ ಈ ಪ್ರಾಣಿಗಳು ‘ನರಭಕ್ಷಕ’ವಾಗುವ ಸಾಧ್ಯತೆಯಿದೆ.  ಜಿಮ್‌ ಕಾರ್ಬೆಟ್, ಆ್ಯಂಡರ್ಸನ್ ಅವರ ನರಭಕ್ಷಕ ಹುಲಿಬೇಟೆಯ ರೋಚಕ ಕಥೆಗಳಲ್ಲಿ ಇಂತಹ ಹಲವು ಘಟನೆಗಳು ದಾಖಲಾಗಿವೆ.ಚಿರತೆಗಳ ಕುರಿತು ಸುದೀರ್ಘ ಅಧ್ಯಯನ ನಡೆಸಿರುವ ವನ್ಯಜೀವಿ ಸಂಶೋಧಕಿ ಪುಣೆಯ ವಿದ್ಯಾ ಆತ್ರೇಯ ಅವರು  ‘ನಮ್ಮ ದೇಶದಲ್ಲಿ ಇತ್ತು ಎಷ್ಟೇ ಸಂಘರ್ಷಗಳು ಆಗುತ್ತಿದ್ದರೂ, ಜನರಲ್ಲಿ ಇನ್ನೂ ವನ್ಯಪ್ರಾಣಿ   ಸಂರಕ್ಷಣೆಯ ಬಗ್ಗೆ ಒಲವಿದೆ. ಹುಲಿಗಳು

ಮನುಷ್ಯರ ಮೇಲೆ ದಾಳಿ ಮಾಡುವ ಕುರಿತು  ಅಧ್ಯಯನಗಳು ಇನ್ನೂ ನಮ್ಮಲ್ಲಿ ಆಗಬೇಕು. ರಷ್ಯಾದಲ್ಲಿ ನಡೆದ ಒಂದು  ಅಧ್ಯಯನದ ಪ್ರಕಾರ, ಹುಲಿಗಳು ಮನುಷ್ಯನಿಗೆ ಹೆದರುತ್ತವೆ.

ಆದರೆ ಒಂದೊಮ್ಮೆ ಅವುಗಳ ಹಾದಿಗೆ ಮಾನವ ಅಡ್ಡಿಯಾದರೆ, ಅವುಗಳನ್ನು ಗಾಸಿ ಅಥವಾ ವಿಚಲಿತಗೊಳಿಸಿದರೆ ಮತ್ತು ಅವುಗಳ ಮೇಲೆ ದಾಳಿ ಮಾಡಿದರೆ ಮಾತ್ರ ಅವು ಪ್ರತಿದಾಳಿ ನಡೆಸುತ್ತವೆ. ಅಮೆರಿಕದ ಸಂಸ್ಥೆಯೊಂದು ಹಿಮಸಿಂಹಗಳ ಕುರಿತು ನಡೆಸಿರುವ ಅಧ್ಯಯನದ ಪ್ರಕಾರ ಮನುಷ್ಯರ ಬೇಟೆಯ ಪ್ರವೃತ್ತಿ ಮತ್ತು ಅವುಗಳ ಆಹಾರ ಲಭ್ಯತೆಯು ಕಡಿಮೆಯಾದಾಗ ಮಾತ್ರ ಮನುಷ್ಯವಸತಿ ಪ್ರದೇಶಗಳಲ್ಲಿರುವ ಜಾನುವಾರುಗಳನ್ನು ಅರಸಿ ಬರುತ್ತವೆ ಎನ್ನುತ್ತಾರೆ.‘ಕೆಲವೊಮ್ಮೆ ಪ್ರಾಣಿಗಳು ಸೇಡು ತೀರಿಸಿಕೊಳ್ಳಲೂ ದಾಳಿ ಮಾಡುತ್ತವೆ. ಉದಾಹರಣೆಗೆ ಕಾಡಂಚಿನ ಹೆದ್ದಾರಿಯಲ್ಲಿ ವಾಹನವೊಂದು ತನ್ನ ಮರಿಗೆ ಡಿಕ್ಕಿ ಹೊಡೆದು ಕೊಂದು ಹೋದಾಗ ತಾಯಿ ಹುಲಿಯು, ಪ್ರತಿಯೊಂದು ವಾಹನ ಮತ್ತು ಅದರೊಳಗಿನ ಜನರ ಮೇಲೆ ದಾಳಿ ಮಾಡುತ್ತದೆ. ಆದು ಹಲವು ದಿನಗಳವರೆಗೆ ಮುಂದುವರೆಯುತ್ತದೆ. ಆದರೆ ಹಿನ್ನೆಲೆಯ ಬಗ್ಗೆ ಗೊತ್ತಿರದ ಜನರು ಮತ್ತು ಆಡಳಿತ ವ್ಯವಸ್ಥೆಯು ಆ ಹುಲಿಗೆ ನರಭಕ್ಷಕ ಪಟ್ಟ ಕಟ್ಟುತ್ತದೆ’ ಎಂದು  ವಿದ್ಯಾ ಆತ್ರೇಯ ಹೇಳುತ್ತಾರೆ. ಮೈಸೂರು ಜಿಲ್ಲೆಯ ಸುತ್ತಮುತ್ತ ನಡೆಯುತ್ತಿರುವ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷದ ಹಿನ್ನೆಲೆಯಲ್ಲಿ ಇಂತಹ ಕಾರಣಗಳು ಸಾಕಷ್ಟು ಇವೆ. ರೇಂಜರ್ ಕೆ.ಎಂ. ಚಿಣ್ಣಪ್ಪ ತಮ್ಮ ಕೃತಿಯಲ್ಲಿ (ಕಾಡಿ ನೊಳಗೊಂದು ಜೀವ) ದಾಖಲಿಸಿರುವ ಪ್ರಕಾರ, ಹೆಗ್ಗಡದೇವನ ಕೋಟೆ ತಾಲ್ಲೂಕಿನಲ್ಲಿ ಕಬಿನಿ ಜಲಾಶಯ ನಿರ್ಮಾಣದ ನಂತರ ನಾಗರಹೊಳೆ ಮತ್ತು ಬಂಡೀಪುರ ಅರಣ್ಯಗಳು ಎರಡು

ಭಾಗಗಳಾಗಿ ಒಡೆದವು. ಆಗ ವನ್ಯಪ್ರಾಣಿಗಳ ಮಾರ್ಗವೂ ಜಲಾವೃತವಾಯಿತು. ಆದರೂ ಆನೆ, ಹುಲಿ ಮತ್ತಿತರ ಜೀವಿಗಳು ಈಜಿಕೊಂಡೇ ಅತ್ತಿಂದಿತ್ತ ವಲಸೆ ಬರುತ್ತಿದ್ದವು.ಪಶ್ಚಿಮ ಘಟ್ಟದ ಅರಣ್ಯಗಳಲ್ಲಿ ಜಲವಿದ್ಯುತ್ ಯೋಜನೆ ಗಳಿಂದಾಗಿ ಅಪರೂಪದ ಜೀವವೈವಿಧ್ಯ ನಾಶವಾಗಿದೆ. ಆನೆ, ಹುಲಿಗಳು ಮುಂಡಗೋಡ, ದಾಂಡೇಲಿ, ಹಳಿಯಾಳ ಪಟ್ಟಣದ ಗಡಿಯಲ್ಲಿ ಓಡಾಡಿ ಭೀತಿ ಮೂಡಿಸಿವೆ.  ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಅರಣ್ಯದಂಚಿನಲ್ಲಿ ಹಾಕಲಾದ ಸೌರ ಬೇಲಿಗಳು, ಉಪ್ಪಿನ ಗುಂಡಿಗಳು, ಕಂದಕಗಳ ಹೊರತಾಗಿಯೂ ಆನೆಗಳು ಮೈಸೂರು ನಗರದ ಕೆಲವೇ ಕಿಲೋಮೀಟರುಗಳ ದೂರದಲ್ಲಿ ಬಂದು ಬೀಡುಬಿಟ್ಟು ಸುದ್ದಿ ಮಾಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರತಿಕ್ರಿಯಿಸಿ (+)