ಸೋಮವಾರ, ಮೇ 17, 2021
22 °C
ಪತ್ತೆಯಾದ ಮರಳು ಸರ್ಕಾರದ ವಶಕ್ಕಿಲ್ಲ

ದಂಧೆಯಲ್ಲಿ ಅಧಿಕಾರಿಗಳ ಶಾಮೀಲು: ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ತಾಲ್ಲೂಕಿನಾದ್ಯಂತ ಅಕ್ರಮ ಮರಳು ದಾಸ್ತಾನಿನ ತಾಣಗಳಿಗೆ ಶುಕ್ರವಾರ ದಾಳಿ ನಡೆಸಿ ಸಂಚಲನ ಮೂಡಿಸಿದ್ದ ಅಧಿಕಾರಿಗಳು, ದಾಳಿಯ ವೇಳೆ ಪತ್ತೆಯಾದ ಸಾವಿರಾರು ಲೋಡ್ ಮರಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ತಾಲ್ಲೂಕಿನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ಸರ್ಕಾರದ ವಶಕ್ಕೆ ಪಡೆಯಲು ಸಿದ್ಧರಾಗಿ ದಾಳಿ ನಡೆಸುವಂತೆ ತಿಳಿಸಲಾಗಿತ್ತು ಎನ್ನಲಾಗಿದ್ದು, ದಾಳಿಯ ವೇಳೆ ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್‌ಗಳನ್ನು ಕೊಂಡೊಯ್ಯುವಂತೆ ಆದೇಶಿಸಲಾಗಿತ್ತು ಎನ್ನಲಾಗಿದೆ. ಆದರೆ ತಾಲ್ಲೂಕಿನ ಕೆಲವು ಇಲಾಖೆಗಳ ಬೇಜವಾಬ್ದಾರಿತನದಿಂದ ಆದೇಶವನ್ನು ಪಾಲಿಸದೇ, ವಶಪಡಿಸಿಕೊಳ್ಳಲು ವಾಹನಗಳನ್ನು ಕೊಂಡೊಯ್ಯದೇ, ಕೇವಲ ಅಧಿಕಾರಿಗಳು ಮಾತ್ರ ದಾಳಿ ನಡೆಸಿದ್ದರು. ದಾಳಿಯ ವೇಳೆ ಗೋಣಿಬೀಡಿನ ಹೊರಟ್ಟಿಬಾರೆ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಲೋಡ್ ಮರಳು ಸಂಗ್ರಹ ಪತ್ತೆಯಾದ ನಂತರ ಮಧ್ಯಾಹ್ನ ಸುಮಾರು 1.30 ರ ವೇಳೆಗೆ ಒಂದು ಜೆಸಿಬಿ, ಎರಡು ಟ್ರ್ಯಾಕ್ಟರ್, ಒಂದು ಟಿಪ್ಪರನ್ನು ಸ್ಥಳಕ್ಕೆ ತಂದು ಪತ್ತೆಯಾದ ಮರಳನ್ನು ಪತ್ರಕರ್ತರು ಮತ್ತು ಸಾರ್ವಜನಿಕರ ಎದುರಿನಲ್ಲಿ ವಶಕ್ಕೆ ಪಡೆದು ಸಾಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆದರೆ ಮೊದಲ ಒಂದು ಲೋಡ್ ತೆರಳುತ್ತಿದ್ದಂತೆ, ಸಾಗಿಸುವ ಕಾರ್ಯವನ್ನು ಲೋಕೋಪಯೋಗಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮೌಖಿಕವಾಗಿ ವಹಿಸಿ, ಮುಂದಿನ ಸ್ಥಳಗಳಿಗೆ ದಾಳಿ ನಡೆಸಲು ತೆರಳಲಾಯಿತು. ಪತ್ರಕರ್ತರು ಮತ್ತು ಸಾರ್ವಜನಿಕರು ಸ್ಥಳದಿಂದ ತೆರಳುತ್ತಿದ್ದಂತೆ ಟಿಪ್ಪರ್ ಕೆಟ್ಟುಹೋಗಿದೆ ಎಂಬ ಕಾರಣ ನೀಡಿ ಸಾಗಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ತಮ್ಮ ತಮ್ಮ ಮನೆಯ ಅಂಗಲದಲ್ಲಿದ್ದ ಮರಳನ್ನು ರಾತ್ರೋರಾತ್ರಿ ಬೇರೆ-ಬೇರೆ ಸ್ಥಳಗಳಿಗೆ ಮಾರಾಟ ಮಾಡಲಾಗಿದೆ ಎಂದು ಗ್ರಾಮಸ್ಥರೊಬ್ಬರು ದೂರವಾಣಿಯಲ್ಲಿ ಆರೋಪಿಸಿದ್ದಾರೆ.ನೂರಾರು ಲಾರಿಗಳಲ್ಲಿ ಸಾಗಣೆಯಾದ ಮರಳು: ಇತ್ತ ಶುಕ್ರವಾರ ಹಗಲಿನಲ್ಲಿ ಸಂಗ್ರಹವಾಗಿರುವ ಮರಳಿನ ತಾಣಗಳಿಗೆ ದಾಳಿ ನಡೆಸುತ್ತಿದ್ದಂತೆ ಜಾಗೃತರಾದ ಅಕ್ರಮ ಮರಳುದಾರರು, ಶುಕ್ರವಾರ ರಾತ್ರಿಯೆಲ್ಲಾ ಲಾರಿಗಳಲ್ಲಿ ಮರಳಿನ ಸಾಗಣೆ ನಡೆಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಶುಕ್ರವಾರದಂದು ದಾಳಿ ನಡೆಸಲು ಸಾಧ್ಯವಾಗದ ತಾಣಗಳಲ್ಲಿದ್ದ ಸಾವಿರಾರು ಲೋಡ್ ಅಕ್ರಮ ಮರಳು ರಾತ್ರೋರಾತ್ರಿ ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿಯೇ ಸಾಗಾಟವಾದರೂ ಯಾವೊಂದು ಇಲಾಖೆಯು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದ್ದು, ಅಕ್ರಮ ಮರಳು ದಂಧೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.ಶನಿವಾರವೂ ಸಾಗಣೆ ಆಗದ ಅಕ್ರಮ ಮರಳು: ಶುಕ್ರವಾರ ದಾಳಿ ನಡೆಸಲು ಸಾಧ್ಯವಾಗದ ತಾಣಗಳಿಗೆ ಶನಿವಾರ ಲೋಕೋಪಯೋಗಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಭೇಟಿ ನೀಡಿ ಮೂರು ಸ್ಥಳಗಳಲ್ಲಿದ್ದ 341 ಕ್ಯೂಬಿಕ್ ಮೀಟರ್ ಅಕ್ರಮ ಮರಳನ್ನು ಪತ್ತೆಯಚ್ಚಿದ್ದು, ಎರಡೂ ದಿನದಂದು ಪತ್ತೆಯಾಗಿರುವ ಮರಳನ್ನು ತಮ್ಮ ವಶಕ್ಕೆ ಪಡೆಯದೇ, ಸಂಗ್ರಹ ತಾಣಗಳಲ್ಲಿಯೇ ಬಿಡಲಾಗಿದೆ. ತಾಲ್ಲೂಕಿನಲ್ಲಿ ಜೆಸಿಬಿ ಯಂತ್ರಗಳು, ಇಟಾಚಿಗಳು ಲಭ್ಯವಿಲ್ಲದ ಕಾರಣ ಪತ್ತೆಯಾದ ಮರಳನ್ನು ವಶಕ್ಕೆ ಪಡೆದು ಸಾಗಾಟ ನಡೆಸಲು ಸಾಧ್ಯವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರೂ ಪತ್ರಿಕೆಗೆ ತಿಳಿಸಿದ್ದು, ಜೆಸಿಬಿ ಯಂತ್ರಗಳು ಸಿಗುತ್ತಿಲ್ಲ ಎಂಬ ಮಾತು ಸಾರ್ವಜನಿಕರಲ್ಲಿ ನಗೆಪಾಟಲಿಗೆ ಕಾರಣವಾಗಿದೆ.ಅಧಿಕಾರಿಗಳು ಭಾಗಿ ಆರೋಪ: ಈಗ ದಾಸ್ತಾನಾಗಿರುವ ಅಕ್ರಮ ಮರಳು ಸಂಗ್ರಹದಲ್ಲಿ ತಾಲ್ಲೂಕಿನ ಕೆಲವು ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದು, ಸಂಗ್ರಹಕ್ಕಾಗಿ ಮಾಲೀಕರಿಂದ ಹಣ ವಸೂಲಿ ಮಾಡಿಕೊಂಡಿದ್ದು, ಈಗ ವಶಕ್ಕೆ ಪಡೆದು ಬೇರೆಡೆಗೆ ಸಾಗಿಸಿದರೆ ಅಕ್ರಮ ಮರಳುದಾರರಿಗೆ ನಷ್ಟವಾಗುತ್ತದೆ ಎಂಬ ಉದ್ದೇಶದಿಂದ ಸ್ಥಳದಿಂದ ಮರಳನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದು, ಇದರ ಹಿಂದೆ ತಾಲ್ಲೂಕಿನ ಹಲವು ಇಲಾಖೆಗಳ ಅಧಿಕಾರಿಗಳು ಸೇರಿದಂತೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.ಕಳೆದ ವರ್ಷ ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆಗೆ ಅನುಮತಿಯಿದ್ದಾಗ ಎರಡೂವರೆ ಕೋಟಿ ರೂಪಾಯಿ ಸರ್ಕಾರಕ್ಕೆ ಸಂದಾಯವಾಗಿತ್ತು. ಆದರೆ ಈ ಬಾರಿ ಅನುಮತಿ ನೀಡದಿರುವುದರಿಂದ ಕಳೆದ ಬಾರಿಗಿಂತಲೂ ಹೆಚ್ಚಿನ ಪ್ರಮಾಣದ ಮರಳು ತಾಲ್ಲೂಕಿನಿಂದ ಸಾಗಣೆಯಾಗಿದ್ದು, ಸರ್ಕಾರಕ್ಕೆ ಮಾತ್ರ ಶೂನ್ಯ ಸಂದಾಯವಾಗಿದೆ. ಈಗಲಾದರೂ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ವಶಕ್ಕೆ ಪಡೆದು, ಹರಾಜು ಅಥವಾ ಸರ್ಕಾರಿ ಕಾಮಗಾರಿಗಳಿಗೆ ರಾಯಲ್ಟಿ ಪಡೆದು ನೀಡಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುತ್ತದೆ ಎಂದು ದಾಳಿಯ ವೇಳೆ ಚಿಂತಿಸಿದ್ದ ಸಾರ್ವಜನಿಕರಿಗೆ, ಮರಳನ್ನು ಸಾಗಣೆಗೊಳಿಸದೇ, ಸ್ಥಳದಲ್ಲಿಯೇ ಬಿಟ್ಟಿರುವ ಅಧಿಕಾರಿಗಳ ಕಾರ್ಯವೈಖರಿ, ಸಾರ್ವಜನಿಕರಿಗೆ ಅಧಿಕಾರಿಗಳ ಮೇಲಿದ್ದ ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಿದ್ದು, ಇನ್ನೆರಡು ರಾತ್ರಿಗಳಲ್ಲಿ ಪತ್ತೆಯಾದ ಮರಳು ನಾಪತ್ತೆಯಾದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚಿತ ಮಾತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.