ಶುಕ್ರವಾರ, ಮೇ 14, 2021
32 °C
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಗೃಹ ಸಚಿವರ ಗುಡುಗು ್ಞ ಎಸ್ಪಿಗೆ ಖಡಕ್ ನಿರ್ದೇಶನ

`ದಂಧೆ ನಡೆಸಿದರೆ ಗೂಂಡಾ ಕಾಯ್ದೆ ದಾಖಲಿಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: `ಜಿಲ್ಲೆಯಲ್ಲಿ ಮರಳುಗಣಿಗಾರಿಕೆ ನಿಷೇಧವಿದ್ದರೂ ಆ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು' ಎಂದು ಗೃಹ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದರು.ಜಿಲ್ಲಾ ಪಂಚಾಯತ್ ಭವನದ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.`ನಿಷೇಧವಿದ್ದರೂ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದನ್ನು ವಾರದಲ್ಲಿ ನಿಲ್ಲಿಸಲು ಸೂಕ್ತ ಕ್ರಮ ಕೈಗೊಂಡು, ವರದಿ ಸಲ್ಲಿಸಬೇಕು' ಎಂದು ಅವರು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಅವರಿಗೆ ಆದೇಶಿಸಿದರು.`ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಎಸ್ಪಿಗಳ ಸಭೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ತಾಕೀತು ಮಾಡಿದ್ದಾರೆ.ರಾಜಧಾನಿಗೆ ಹತ್ತಿರವಿರುವ, ಅದರಲ್ಲೂ ನಿಷೇಧಿತ ವಲಯ ಎಂದು ಘೋಷಿಸಿರುವ ಪ್ರದೇಶದಲ್ಲಿ ವ್ಯಾಪಕವಾಗಿ ಮರಳುಗಾರಿಕೆ ನಡೆಯುತ್ತಿದ್ದರೆ ಸಹಿಸಲು ಸಾಧ್ಯವಿಲ್ಲ. ಶೀಘ್ರವೇ ಈ ಕುರಿತು ಕ್ರಮ ತೆಗೆದುಕೊಳ್ಳಿ' ಎಂದು ಅವರು ಎಸ್ಪಿಗೆ ಸೂಚಿಸಿದರು.ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡಿ: `ಅಕ್ರಮ ಗಣಿಕಾರಿಕೆಗೆ ಸಹಕಾರ ನೀಡಿ, ಅದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡಿ. ಇದಕ್ಕೆ ನನ್ನಿಂದ ಎಲ್ಲ ರೀತಿಯ ಅಗತ್ಯ ಸಹಕಾರ ದೊರೆಯುತ್ತದೆ. ಭ್ರಷ್ಟರ ಜಾಗದಲ್ಲಿ ಖಡಕ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸೋಣ. ಆಗ ಅಕ್ರಮ ಮರಳುಗಾರಿಕೆ ತನ್ನಿಂತಾನೇ ನಿಯಂತ್ರಣಕ್ಕೆ ಬರುತ್ತದೆ' ಎಂದು ಗೃಹ ಸಚಿವರು ಗುಡುಗಿದರು.`ಒಂದು ವೇಳೆ ಅಕ್ರಮ ಮರಳು ಗಣಿಗಾರಿಕೆ ನಿಲ್ಲದಿದ್ದಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನೇ ಜವಾಬ್ದಾರರನ್ನಾಗಿ ಮಾಡಬೇಕಾಗುತ್ತದೆ' ಎಂದು ಅವರು ಎಚ್ಚರಿಸಿದರು.ಶಾಸಕರ ಅಸಮಾಧಾನ: ಜಿಲ್ಲೆಯ 4 ನಗರ-ಪಟ್ಟಣ ವ್ಯಾಪ್ತಿಗಳಲ್ಲಿ ಒಳಚರಂಡಿ ವ್ಯವಸ್ಥೆಗೆ 10 ವರ್ಷಗಳ ಹಿಂದೆಯೇ ಮಂಜೂರಾತಿ ನೀಡಿದ್ದರೂ ಇದುವರೆಗೂ ಯಾವುದೇ ನಗರಗಳಲ್ಲೂ ಶೇ 50 ರಷ್ಟು ಕಾಮಗಾರಿಗಳ ಪ್ರಗತಿ ಆಗಿಲ್ಲ ಎಂದು ಶಾಸಕರಾದ ಡಿ.ಕೆ.ಶಿವಕುಮಾರ್, ಸಿ.ಪಿಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, `ಅಧಿಕಾರಿಗಳು ನೀಡುವ ಮಾಹಿತಿಗಳನ್ನು ಕೇಳಲು ನಾನು ಸಭೆಗೆ ಬಂದಿಲ್ಲ. ಕಾಮಗಾರಿಗಳನ್ನು ತ್ವರಿತ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳಿ' ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರಿಗೆ ಸೂಚಿಸಿದರು.ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಮುದ್ದುರಾಜ್ ಯಾದವ್, ಉಪಾಧ್ಯಕ್ಷೆ  ಎಸ್.ಬಿ.ಗೌರಮ್ಮ, ಸಿಇಒ ಡಾ. ಎಂ.ವಿ.ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.`ಶೀಘ್ರವೇ 8000 ಪೊಲೀಸರ ನೇಮಕಕ್ಕೆ ಕ್ರಮ'

ಗೃಹ ಇಲಾಖೆಯಲ್ಲಿ ಇರುವ ಸಿಬ್ಬಂದಿ ಕೊರತೆ ನೀಗಿಸುವ ಉದ್ದೇಶದಿಂದ 8000 ಪೊಲೀಸರ ನೇಮಕಾತಿಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ಶೀಘ್ರವೇ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.ಇಲಾಖೆಯಲ್ಲಿ ಮಹಿಳೆಯರ ಈಗಿರುವ ಪ್ರಮಾಣವನ್ನು ಶೇ 6ರಿಂದ ಶೇ 20ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ನೇಮಕಾತಿ ಸಂದರ್ಭದಲ್ಲಿ ಬಡುಕಟ್ಟು ಪ್ರದೇಶಗಳ ವಾಸಿಗಳಿಗೆ ವಿಶೇಷ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಕೆಡಿಪಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.