ಭಾನುವಾರ, ಮೇ 9, 2021
19 °C

ದಯವಿಟ್ಟು ನಮ್ಮತ್ತ ಗಮನ ಹರಿಸಿ

ಕೆ. ಓಂಕಾರ ಮೂರ್ತಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೇರೆ ರಾಜ್ಯದ ಕ್ರೀಡಾಪಟುಗಳಿಗೆ ಅಲ್ಲಿನ ಸರ್ಕಾರಗಳು ಹಣಕಾಸಿನ ನೆರವು ನೀಡುತ್ತಿವೆ. ಉದ್ಯೋಗ ಕಲ್ಪಿಸಿಕೊಡುತ್ತಿವೆ. ಅದಕ್ಕೆ ಉದಾಹರಣೆ ತಮಿಳುನಾಡು, ಹರಿಯಾಣ ಹಾಗೂ ಪಂಜಾಬ್. ಆದರೆ ಕರ್ನಾಟಕ ಸರ್ಕಾರ ನಮ್ಮಂತಹ ಕ್ರೀಡಾಪಟುಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ನಾವು ಇನ್ನೆಷ್ಟು ಸಾಧನೆ ಮಾಡಬೇಕು?~-ಚೀನಾದ ಒರ್ಡೊಸ್‌ನಲ್ಲಿ ನಡೆದ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದ ಆಟಗಾರ ಎಸ್.ವಿ.ಸುನಿಲ್ ಅವರ ಪ್ರಶ್ನೆ ಇದು.

ಇದಕ್ಕೆ ಧ್ವನಿಗೂಡಿಸಿದ್ದು ಮತ್ತೊಬ್ಬ ಆಟಗಾರ ವಿ.ಆರ್.ರಘುನಾಥ್. ಇವರಿಬ್ಬರೂ ಕರ್ನಾಟಕದ ಆಟಗಾರರು.`ಭಾರತದಲ್ಲಿ ಹಾಕಿ ಸಂಕಷ್ಟಕ್ಕೆ ಸಿಲುಕಿದೆ. ಹಲವು ವಿವಾದಗಳು ಉದ್ಭವಿಸಿವೆ. ಆದರೂ ಅದನ್ನೆಲ್ಲಾ ಮೆಟ್ಟಿ  ನಿಂತು ನಾವು ಚಾಂಪಿಯನ್ ಆಗಿದ್ದೇವೆ. ಈ ಟೂರ್ನಿಯಲ್ಲಿ ನಾವು ಯಾವುದೇ ಪಂದ್ಯದಲ್ಲಿ ಸೋಲು ಕಂಡಿಲ್ಲ. ಈಗಲಾದರೂ ಸರ್ಕಾರ ನಮ್ಮತ್ತ ಗಮನ ಹರಿಸಬೇಕು. ಸಾಧನೆ ಮಾಡಿದವರನ್ನು ಹುರಿದುಂಬಿಸಬೇಕು~ ಎಂದು ಸುನಿಲ್ ಹಾಗೂ ರಘುನಾಥ್ `ಪ್ರಜಾವಾಣಿ~ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿನಂತಿಸಿಕೊಂಡಿದ್ದಾರೆ.`ತುಂಬಾ ವರ್ಷಗಳಿಂದ ನಾನು ಭಾರತ ತಂಡಕ್ಕಾಗಿ ಆಡುತ್ತಿದ್ದೇನೆ. ಆದರೆ ರಾಜ್ಯ ಸರ್ಕಾರ ನನಗೆ ಇನ್ನೂ ಏಕಲವ್ಯ ಪ್ರಶಸ್ತಿ ಕೂಡ ನೀಡಿಲ್ಲ. ಇನ್ನಾದರೂ ನನ್ನ ಸಾಧನೆ ಗುರುತಿಸುತ್ತಾರಾ ಕಾದು ನೋಡಬೇಕು~ ಎಂದು ಸುನಿಲ್ ನಿರಾಶೆ ವ್ಯಕ್ತಪಡಿಸಿದರು.ಸೆಪ್ಟೆಂಬರ್ ಮೂರರಿಂದ 11ರವರೆಗೆ ನಡೆದ ಈ ಟೂರ್ನಿಯಲ್ಲಿ ಭಾರತ ಫೈನಲ್ ಸೇರಿ ಆರು ಪಂದ್ಯ ಆಡಿತ್ತು. ಇದರಲ್ಲಿ ನಾಲ್ಕು ಗೆಲುವು ಹಾಗೂ ಎರಡರಲ್ಲಿ ಡ್ರಾ ಸಾಧಿಸಿದೆ. ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಆಗಿದೆ.`ಕೇಂದ್ರ ಸರ್ಕಾರ ನಮಗೆ ಅಭಿನಂದನೆ ಹೇಳಿತು ಅಷ್ಟೆ. ಆದರೆ ಯಾವುದೇ ಸಹಾಯದ ಭರವಸೆ ನೀಡಿಲ್ಲ. ಗೆದ್ದಿದ್ದಕ್ಕೆ ಹಣ ಕೂಡ ನೀಡಿಲ್ಲ. ಯಾವುದೇ ಕ್ರೀಡೆ ಇರಲಿ, ಸಾಧನೆ ಮಾಡಿದ ಎಲ್ಲಾ ಕ್ರೀಡಾಪಟುಗಳಿಗೆ ಸಹಾಯ ನೀಡಬೇಕು. ತಾರತಮ್ಯ ಎಸಗಬಾರದು. ಆಗ ಅದು ಮುಂದಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಲು ಸ್ಫೂರ್ತಿಯಾಗುತ್ತದೆ~ ಎಂದು ಕೊಡಗಿನ ಮೂಲದ ರಘುನಾಥ್ ನುಡಿದಿದ್ದಾರೆ.ಭಾರತ ತಂಡದ ಆಟಗಾರರು ಮಂಗಳವಾರ ಮುಂಜಾನೆ ಎರಡು ಗಂಟೆಗೆ ಚೀನಾದಿಂದ ನವದೆಹಲಿಗೆ ಆಗಮಿಸಿದರು. ಸಂಜೆ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಅಭಿನಂದನಾ ಸಮಾರಂಭ ಆಯೋಜಿಸಿದ್ದರು.`ಟೂರ್ನಿಗೆ ತೆರಳುವ ಮೊದಲೇ ತಂಡ ವಿವಾದಕ್ಕೆ ಸಿಲುಕಿತ್ತು. ತಂಡದಲ್ಲಿದ್ದ ಹಿರಿಯ ಆಟಗಾರರಾದ ಸರ್ದಾರ್ ಸಿಂಗ್ ಹಾಗೂ ಸಂದೀಪ್ ಸಿಂಗ್ ಹಿಂದೆ ಸರಿದರು. ಹಾಗಾಗಿ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟು ಬಿದ್ದಿತ್ತು. ಆದರೆ ನಾವು ಈ ಸಮಸ್ಯೆಗಳನ್ನೆಲ್ಲಾ ಹಿಮ್ಮೆಟ್ಟಿ ನಿಂತು ಗೆದ್ದು ಬಂದೆವು~ ಎಂದು ಕೊಡಗಿನ ಕುವರ ಸುನಿಲ್ ವಿವರಿಸಿದರು.`ಇದೊಂದು ಯುವಕರಿಂದ ಕೂಡಿದ್ದ ತಂಡ. ಹೊಸ ಕೋಚ್ ಮೈಕಲ್ ನಾಬ್ಸ್ ಅತ್ಯುತ್ತಮ ಯೋಜನೆ ರೂಪಿಸಿದರು. ಆಸ್ಟ್ರೇಲಿಯಾ ತಂಡದಲ್ಲಿ ಈ ರೀತಿಯ ಯೋಜನೆಗಳನ್ನು ಕಾಣಬಹುದು. ನಾಯಕ ರಾಜ್ಪಾಲ್ ಸಿಂಗ್ ಹಾಗೂ ಕೋಚ್ ನಡುವಿನ ಹೊಂದಾಣಿಕೆ ಚೆನ್ನಾಗಿದೆ~ ಎಂದರು.`ಪಾಕ್ ಎದುರಿನ ಫೈನಲ್ ಸ್ಮರಣೀಯ. ಈ ಪಂದ್ಯಕ್ಕೆ ನಾವು ಉತ್ತಮ ಯೋಜನೆ ರೂಪಿಸಿದ್ದೆವು. ಭಾರತ-ಪಾಕ್ ಮುಖಾಮುಖಿ ಎಂದರೆ ಒತ್ತಡ ಸಹಜ. ಆದರೆ ನಾವು ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿದೆವು. ಈ ಗೆಲುವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪ್ರೇರಣೆಯಾಗಲಿದೆ~ ಎಂದು ಅವರು ತಿಳಿಸಿದರು. ಸುನಿಲ್ ಹಾಗೂ ರಘುನಾಥ್ ಬುಧವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.