ದರೋಜಿ ಕರಡಿ ಧಾಮ ಸುರಕ್ಷತೆ ಪರಿಶೀಲನೆ

7

ದರೋಜಿ ಕರಡಿ ಧಾಮ ಸುರಕ್ಷತೆ ಪರಿಶೀಲನೆ

Published:
Updated:
ದರೋಜಿ ಕರಡಿ ಧಾಮ ಸುರಕ್ಷತೆ ಪರಿಶೀಲನೆ

ಬಳ್ಳಾರಿ: ಜಿಲ್ಲೆಯಲ್ಲಿರುವ ದರೋಜಿ ಕರಡಿ ಧಾಮದ ಅನತಿ ದೂರದಲ್ಲೇ ಸ್ಥಾಪಿಸಲು ಉದ್ದೇಶಿಸಲಾಗಿರುವ ಭೂಷಣ್ ಉಕ್ಕು ಕಾರ್ಖಾನೆಯಿಂದ ಕರಡಿ ಧಾಮದಲ್ಲಿರುವ ಕರಡಿ ಮತ್ತಿತರ ವನ್ಯಜೀವಿಗಳಿಗೆ ತೊಂದರೆ ಎದುರಾಗಲಿರುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ನೇಮಕಗೊಂಡಿರುವ ರಾಜ್ಯ ವನ್ಯಜೀವಿ ಮಂಡಳಿಯ ಉಪಸಮಿತಿಯ ಅಧ್ಯಕ್ಷ, ಖ್ಯಾತ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಸದಸ್ಯರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಜಿಲ್ಲೆಯ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ ಸುಮಾರು ಐದು ಸಾವಿರ ಎಕರೆ ಭೂ ಪ್ರದೇಶದಲ್ಲಿ, ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ಸ್ಥಾಪಿಸಲು ಉದ್ದೇಶಿಸಲಾಗಿರುವ ಈ ಉಕ್ಕಿನ ಕಾರ್ಖಾನೆಗಾಗಿ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. 13 ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ದರೋಜಿ ಕರಡಿಧಾಮವು ಈ ಉದ್ದೇಶಿತ ಕಾರ್ಖಾನೆಯ ಎರಡು ಕಿಮೀ ಅಂತರದಲ್ಲಿ ಇದೆ.ಈ ಕಾರ್ಖಾನೆಯ ತ್ಯಾಜ್ಯದಿಂದ ಅಲ್ಲಿರುವ 150 ಕರಡಿಗಳು, 200ಕ್ಕೂ ಅಧಿಕ ಪ್ರಭೇದದ ಪಕ್ಷಿ ಸಂಕುಲ ಹಾಗೂ ಇತರ ಪ್ರಾಣಿಗಳ ಇರುವಿಕೆಗೆ ಧಕ್ಕೆ ಎದುರಾಗಬಹುದು ಎಂದು ಕೆಲವು ವನ್ಯಜೀವಿಪ್ರಿಯರು ಕಳಕಳಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಪರಿಶೀಲನೆ ಕಾರ್ಯ ಆರಂಭಿಸಲಾಗಿದೆ.ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕೊಟಗಿನಹಾಳ್, ಗಾದಿಗನೂರು, ಧರ್ಮಸಾಗರ ಮತ್ತಿತರ ಗ್ರಾಮಗಳ ಆಸುಪಾಸಿನಲ್ಲಿ ಹಾಗೂ ಸಂಡೂರು ತಾಲ್ಲೂಕಿನ ತೋರಣಗಲ್ಲು ಬಳಿ ಸಂಚರಿಸಿದ ಕುಂಬ್ಳೆ ಹಾಗೂ ಇತರ ನಾಲ್ವರು ಸದಸ್ಯರ ತಂಡ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಕೊಟಗಿನಹಾಳ್ ಗ್ರಾಮದ ರೈತರೊಂದಿಗೆ ಮಾತುಕತೆ ನಡೆಸಿದ ಅನಿಲ್ ಕುಂಬ್ಳೆ, ಮಳೆ-ಬೆಳೆಯ ಪ್ರಮಾಣ, ಕೃಷಿ ಚಟುವಟಿಕೆ ಹಾಗೂ ಆದಾಯದ ವಿವರ ಪಡೆದರು.ವನ್ಯಜೀವಿಗಳಿಗೆ ಮೀಸಲಿರುವ ಜಾಗೆಯ ಬಳಿ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ನೀಡುವ ಮುನ್ನ ರಾಜ್ಯ ವನ್ಯಜೀವಿ ಮಂಡಳಿ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಗಳ ಅನುಮತಿ ಪಡೆಯುವುದು ಮುಖ್ಯವಾಗಿದ್ದು, ಸಾಧಕ- ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಲೆಂದೇ ಮಂಡಳಿಯು ಉಪಸಮಿತಿಯನ್ನು ರಚಿಸಿದೆ.ಕರಡಿಧಾಮಕ್ಕೆ ಎದುರಾಗುವ ಧಕ್ಕೆ ಕುರಿತು ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅನಿಲ್ ಕುಂಬ್ಳೆ ಸುದ್ದಿಗಾರರಿಗೆ ತಿಳಿಸಿದರು.

ಸಮಿತಿಯ ಸದಸ್ಯರಾಗಿರುವ ಗಿರಿಜಾ ಶಂಕರ್, ಸಂಜಯ್ ಗುಬ್ಬಿ, ರಾಜ್ಯ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್, ಉಪ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿನಾಥನ್ ಅವರು ಪರಿಶೀಲನೆ ಸಂದರ್ಭ ಉಪಸ್ಥಿತರಿದ್ದರು.ದರೋಜಿ ಕರಡಿ ಧಾಮವು ಏಷ್ಯದಲ್ಲೇ ಅತ್ಯಂತ ದೊಡ್ಡ ಹಾಗೂ ಮೊದಲ ಕರಡಿ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಧಾಮದಿಂದ ಕನಿಷ್ಠ 1ರಿಂದ 10 ಕಿಲೋ ಮೀಟರ್ ದೂರದಲ್ಲಿ ಗಣಿಗಾರಿಕೆ ನಡೆಸಬಾರದು, ಕಾರ್ಖಾನೆಗಳು ಸ್ಥಾಪನೆ ಮಾಡಬಾರದು ಎಂಬ ನಿಯಮಗಳಿವೆ.ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸುವುದರಿಂದ ಕರಡಿ ಧಾಮದಲ್ಲಿನ ಪ್ರಾಣಿ ಸಂಕುಲಕ್ಕೆ ಧಕ್ಕೆ ಉಂಟಾಗಲಿದೆ ಎಂದು ವನ್ಯಜೀವಿ ಪ್ರೇಮಿಗಳು ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆ ಸಚಿವ ಜೈರಾಮ್ ರಮೇಶ್ ಅವರಿಗೆ ಇತ್ತೀಚೆಗೆ ಪತ್ರ ಬರೆದು ದೂರು ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry