ಭಾನುವಾರ, ಜೂನ್ 13, 2021
22 °C

ದರೋಡೆ: 6 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕ್ಲಬ್ ಹಾಗೂ ಮನೋರಂಜನಾ ಕೇಂದ್ರಗಳ ಮೇಲೆ ದಾಳಿ ನಡೆಸಿ ದರೋಡೆ ಮಾಡುತ್ತಿದ್ದ 6 ದುಷ್ಕರ್ಮಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಬಿಡದಿಯ ಕುಂಬಳಗೂಡು ನಿವಾಸಿಗಳಾದ ವಿ.ಮನುಕುಮಾರ್ (22), ಎಸ್.ನಿಖಿಲ್ (19), ನಗರದ ವಿದ್ಯಾರಣ್ಯಪುರ ನಿವಾಸಿ ರಾಜೇಂದ್ರ (23), ಲಗ್ಗೆರೆ ನಿವಾಸಿ ಭಾನುಪ್ರಕಾಶ್(20) ಹಾಸನ ಜಿಲ್ಲೆಯ ನುಗ್ಗೇಹಳ್ಳಿ ನಿವಾಸಿಗಳಾದ ಗಿರೀಶ್ (24) ಹಾಗೂ ಕೆ.ಎ.ದಿಲೀಪ್ (25) ಬಂಧಿತರು.ಆರೋಪಿಗಳು, ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್‌ಐಜಿ ಬಡಾವಣೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿ ದರೋಡೆ ಮಾಡಲು ಹೊಂಚು ಹಾಕಿದ್ದರು. ಖಚಿತ ಮಾಹಿತಿಯಿಂದ ಆರೋಪಿಗಳನ್ನು ಬಂಧಿಸಿ, ಒಂದು ಕತ್ತಿ, ಎರಡು ಮಚ್ಚು, ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿರುವ ಆರೋಪಿ ವಿ.ಮನುಕುಮಾರ ವಿರುದ್ದ ಕೆ.ಜಿ.ನಗರ, ಯಶವಂತಪುರ, ಬಾಣಸವಾಡಿ, ಜಾಲಹಳ್ಳಿ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ದರೋಡೆ ಯತ್ನ, ಕೊಲೆಯತ್ನ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ. ದಯಾನಂದ ಹಾಗೂ ಡಿಸಿಪಿ ಡಿ.ಎಂ ಕೃಷ್ಣಂರಾಜು ಅವರ ಮಾರ್ಗದರ್ಶನದಲ್ಲಿ, ಎಸಿಪಿ ಎಸ್.ವೈ ಹಾದಿಮನಿ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಎನ್.ಬಿ ಸಕ್ರಿ, ಎಸ್.ಆರ್. ತನ್ವೀರ್ ಹಾಗೂ ಸಿಬ್ಬಂದಿ ತಂಡ ಪ್ರಕರಣ ಬೇಧಿಸಿದೆ.ಕಳವು : ಬಂಧನ  ಮನೆ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿರುವ ಗಿರಿನಗರ ಠಾಣೆ ಪೊಲೀಸರು, ಆರೋಪಿಗಳಿಂದ 14 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕತ್ರಿಗುಪ್ಪೆ ನಿವಾಸಿ ನವೀನ (21) ಹಾಗೂ ಹೊಸಕೆರೆಹಳ್ಳಿ ನಿವಾಸಿ ಸುನಿಲ್ ಕುಮಾರ್ (21) ಬಂಧಿತರು.ಆರೋಪಿಗಳಿಂದ 477 ಗ್ರಾಂ ಚಿನ್ನ ಹಾಗೂ 55 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಮಾರ್ಗದರ್ಶನದಲ್ಲಿ ಎಸಿಪಿ ವೀರಭದ್ರೇಗೌಡ, ಇನ್‌ಸ್ಪೆಕ್ಟರ್ ಬಿ.ಎಸ್.ಶ್ರೀನಿವಾಸ್ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.ವೇಶ್ಯಾವಾಟಿಕೆ: 9ಮಂದಿ ಬಂಧನ

ವೇಶ್ಯವಾಟಿಕೆ ದಂಧೆಯಲ್ಲಿ ತೊಡಗಿದ್ದ ಒಂಬತ್ತು ಮಂದಿಯನ್ನು ಯಶವಂತಪುರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಬಂಧಿತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಕಿರಣ್ (29), ಹಾಗೂ ರಾಜು (30) ಎಂಬುವರು ಹೊರರಾಜ್ಯದ ಮಹಿಳೆಯರನ್ನು ಇಟ್ಟುಕೊಂಡು ಯಶವಂತಪುರ ಸಮೀಪದ ಸುಬೇದಾರ ಪಾಳ್ಯದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಖಚಿತ ಮಾಹಿತಿಯಿಂದ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದರು.ಆರ್.ಬಿ.ಶೆಟ್ಟಿ, ರಘುರಾಮ್, ಸಂತೋಷ್, ಅಬ್ದುಲ್, ಉಮೇಶ್ ಇತರೆ ಬಂಧಿತರು. ಆರೋಪಿಗಳಿಂದ 18500 ರೂ. ನಗದು, 12 ಮೊಬೈಲ್ ಹಾಗೂ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.