ಸೋಮವಾರ, ಮಾರ್ಚ್ 1, 2021
24 °C
ಹೈದರಾಬಾದ್‌ ಕೇಂದ್ರೀಯ ವಿ.ವಿಗೆ ರಾಜಕೀಯ ಮುಖಂಡರ ದೌಡು

ದಲಿತ, ದಲಿತೇತರರ ಸಂಘರ್ಷವಲ್ಲ: ಸ್ಮೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತ, ದಲಿತೇತರರ ಸಂಘರ್ಷವಲ್ಲ: ಸ್ಮೃತಿ

ನವದೆಹಲಿ/ಹೈದರಾಬಾದ್‌ (ಪಿಟಿಐ): ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ವೇಮುಲ ರೋಹಿತ್‌  ಆತ್ಮಹತ್ಯೆ ಪ್ರಕರಣ ದಲಿತ ಮತ್ತು  ದಲಿತೇತರರ ನಡುವಣ ಸಂಘರ್ಷವಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಪ್ರತಿಪಾದಿಸಿದ್ದಾರೆ.ಇದೊಂದು ಜಾತಿ ಸಂಘರ್ಷ ಪ್ರಕರಣ ಎಂದು ಬಿಂಬಿಸುತ್ತಿರುವ ಕೆಲವು ಶಕ್ತಿಗಳು ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಟೀಕಿಸಿದರು.ದಲಿತ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ವಿಶ್ವವಿದ್ಯಾಲಯದ ಮೇಲೆ ತಾವು ಯಾವುದೇ ರೀತಿಯ ಒತ್ತಡ ಹೇರಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಸಂಶೋಧನಾ ವಿದ್ಯಾರ್ಥಿ  ವೇಮುಲ ರೋಹಿತ್‌  ಆತ್ಮಹತ್ಯೆಗೂ ಮುನ್ನ ಬರೆದ ಪತ್ರದಲ್ಲಿ ಯಾವುದೇ ಸಂಸದರ ಅಥವಾ ರಾಜಕೀಯ ಪಕ್ಷದ ಹೆಸರು ಪ್ರಸ್ತಾಪಿಸಿಲ್ಲ ಎಂದರು.ರಾಜಕೀಯ ಲಾಭಕ್ಕೆ ಕಾಂಗ್ರೆಸ್‌ ಪಕ್ಷ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. 2014ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ ಸಂಸದ ಹನುಮಂತರಾವ್‌ ಅವರೇ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ  ಘಟನೆಗಳ ಬಗ್ಗೆ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ನಾಲ್ಕು ವರ್ಷಗಳಿಂದ ಕೆಳ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಸಮಸ್ಯೆಯನ್ನು ಕಾಂಗ್ರೆಸ್ ಆಗ ಬಗೆಹರಿಸಿದ್ದರೆ ರೋಹಿತ್‌ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದರು.ಮುಂದುವರಿದ ಪ್ರತಿಭಟನೆ: ದಲಿತ  ವಿದ್ಯಾರ್ಥಿ ಆತ್ಯಹತ್ಯೆ ಪ್ರಕರಣ ಖಂಡಿಸಿ   ದೇಶದ ವಿವಿಧೆಡೆ ನಡೆಯತ್ತಿರುವ ಪ್ರತಿಭಟನೆಗಳು ತೀವ್ರಗೊಳುತ್ತಿವೆ. ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು  ವಿದ್ಯಾರ್ಥಿಗಳ ಜತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಇಡೀ ಪ್ರಕರಣ ರಾಜಕೀಯ ಸ್ವರೂಪ ಪಡೆದಿದ್ದು, ವಿವಿಧ ಪಕ್ಷಗಳ ನಾಯಕರ ದಂಡು ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿದೆ.ಈ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜೀನಾಮೆ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಟಿಎಂಸಿ ವಕ್ತಾರ ಡೆರೆಕ್‌ ಒಬ್ರಿಯನ್‌ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ ವೈ.ಎಸ್‌. ಜಗನಮೋಹನ್‌ ರೆಡ್ಡಿ  ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿದರು.ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ರಾಜೀನಾಮೆ ನೀಡಬೇಕು ಹಾಗೂ ಇಡೀ ಪ್ರಕರಣದ ಸ್ವತಂತ್ರ ತನಿಖೆ ನಡೆಸಬೇಕು ಎಂದು  ಸೀತಾರಾಂ ಯಚೂರಿ ಈ ಸಂದರ್ಭದಲ್ಲಿ ಒತ್ತಾಯಿಸಿದರು. ಶೀಘ್ರದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಗುವುದು ಮತ್ತು ಯಾವ ಕಾರಣಕ್ಕೆ ಕಳೆದ ವರ್ಷ ಈ ಸಂಸ್ಥೆಯನ್ನು ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಘೋಷಿಸಲಾಗಿತ್ತು ಎನ್ನುವ ವಿವರ ಕೋರಲಾಗುವುದು ಎಂದರು.ಪ್ರಸ್ತುತ ಪರಿಸ್ಥಿತಿಯಲ್ಲಿ ಕುಲಪತಿ ಅವರನ್ನು ವಜಾ ಮಾಡುವವರೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯೆಯಾಗಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ಸಂಸದೆ ಟಿ.ಎನ್‌. ಸೀಮಾ ಅವರು ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು.ವರದಿ ಸಲ್ಲಿಕೆಗೆ ಸೂಚನೆ: ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಪ್ರಕರಣದ ವರದಿ ಸಲ್ಲಿಸುವಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತೆಲಂಗಾಣ ಸರ್ಕಾರಕ್ಕೆ ಸೂಚಿಸಿದೆ.

ವಿಚಾರಣೆ ಮುಕ್ತಾಯ: ಮತ್ತೊಂದೆಡೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕಳುಹಿಸಿದ್ದ ದ್ವಿಸದಸ್ಯ ತನಿಖಾ ಸಮಿತಿ ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿ ದೆಹಲಿಗೆ ತೆರಳಿದೆ.

ವೇಮುಲ ರೋಹಿತ್‌ ಹಿನ್ನೆಲೆ ಪರಿಶೀಲನೆ: 

ರೋಹಿತ್‌ ಜಾತಿ ಬಗ್ಗೆ ಅನುಮಾನ ಮೂಡಿ ಬಂದ ಕಾರಣ ಆಂಧ್ರ ಪ್ರದೇಶ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ವೇಮುಲ ರೋಹಿತ್‌ ಅವರ ಹಿನ್ನೆಲೆಯ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಎಬಿವಿಪಿ ಮತ್ತು ದಲಿತ ಸಂಘಟನೆಗಳು ರೋಹಿತ್‌ ಜಾತಿ ಬಗ್ಗೆ ಬೇರೆ ಬೇರೆ ಪ್ರಮಾಣಪತ್ರಗಳನ್ನು ಬಿಡುಗಡೆ ಮಾಡಿದ್ದರಿಂದ ಪರಿಶೀಲನೆ ನಡೆಸಲಾಗುತ್ತಿದೆ. ರೋಹಿತ್‌ ಮೂಲತಃ ಗುಂಟೂರು ಜಿಲ್ಲೆಯ ಗುರಜಲಾ ಪಟ್ಟಣದವರಾಗಿದ್ದು,  ಅಲ್ಲಿನ ಶಾಲೆಯಲ್ಲಿ ಓದಿರುವ  ವಿವರಗಳನ್ನು ಅವರ ತಾತನಿಂದ ಅಧಿಕಾರಿಗಳು ಪಡೆದರು.ಎಬಿವಿಪಿ ನಾಯಕರು  ಪತ್ರಿಕಾಗೋಷ್ಠಿಯಲ್ಲಿ ರೋಹಿತ್‌ ಸಹೋದರ ವೇಮುಲ ರಾಜ ಚೈತನ್ಯ ಕುಮಾರ್‌ ಅವರ ಜಾತಿ ಪ್ರಮಾಣಪತ್ರಗಳನ್ನು ಬಿಡುಗಡೆ ಮಾಡಿದ್ದರು. ಈ ಪ್ರಮಾಣಪತ್ರದಲ್ಲಿ ಚೈತನ್ಯ ಕುಮಾರ್‌ ಅವರ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿದ ವಡ್ಡರ (ಕಲ್ಲು ಒಡೆಯುವ ಸಮುದಾಯ) ಎಂದು ನಮೂದಿಸಲಾಗಿದೆ. ಹೀಗಾಗಿ ಉದ್ದೇಶಪೂರ್ವಕವಾಗಿ ರೋಹಿತ್‌ ದಲಿತ ಸಮುದಾಯಕ್ಕೆ ಸೇರಿರುವುದಾಗಿ ಪ್ರತಿಪಾದಿಸಿದ್ದ ಎಂದು ದೂರಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ರೋಹಿತ ಕುಟುಂಬದ ಸದಸ್ಯರು, ತಾಯಿ ರಾಧಿಕಾ  ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದ್ದು, ತಂದೆ ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂದು ಸ್ಪಷ್ಟನೆ ನೀಡಿದರು.ಅಂಬೇಡ್ಕರ್‌ ವಿದ್ಯಾರ್ಥಿ ಸಂಘಟನೆಯೂ ರೋಹಿತ್‌ ಜಾತಿ ಪ್ರಮಾಣಪತ್ರವನ್ನು ಬಿಡುಗಡೆ ಮಾಡಿದೆ. ರೋಹಿತ್‌ಗೆ ಸಾಮಾನ್ಯ ವರ್ಗದಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರೆತಿತ್ತು. ಆದರೆ, ಎಬಿವಿಪಿ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಸಂಘಟನೆ ಅಧ್ಯಕ್ಷ ರಾಮಜಿ ತಿಳಿಸಿದ್ದಾರೆ.ಸಚಿವರ ಒತ್ತಡ ಇರಲಿಲ್ಲ: ಕುಲಪತಿ

ವೇಮುಲ ರೋಹಿತ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಯಾವುದೇ ಕೇಂದ್ರ ಸಚಿವರಿಂದ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಒತ್ತಡ ಇರಲಿಲ್ಲ ಎಂದು ವಿಶ್ವವಿದ್ಯಾಲಯದ ಕುಲಪತಿ ಅಪ್ಪಾರಾವ್‌  ಸ್ಪಷ್ಟನೆ ನೀಡಿದ್ದಾರೆ.‘ಸಚಿವರಿಂದ ಬಂದ ಪತ್ರಗಳನ್ನು ನಾವು ಸಾಮಾನ್ಯ ಪತ್ರಗಳ ರೀತಿಯಲ್ಲಿ ಪರಿಗಣಿಸಿದ್ದೇವೆ ಮತ್ತು ಸಚಿವರಿಂದ ಅಥವಾ ಯಾವುದೇ ಸಚಿವಾಲಯದ ಅಧಿಕಾರಿಗಳಿಂದ ದೂರವಾಣಿ ಕರೆ ಸಹ  ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.ಆತ್ಮಹತ್ಯೆಗೆ ಮುನ್ನ ಬರೆದ ಪತ್ರದಲ್ಲೂ ತನ್ನ ಸಾವಿಗೆ ಅಮಾನತು ಕಾರಣ ಎಂದು ರೋಹಿತ್‌ ಬರೆದಿಲ್ಲ ಎಂದು  ತಿಳಿಸಿದ್ದಾರೆ.

‘ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಎಲ್ಲ ರಾಜಕಾರಣಿಗಳೂ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಪ್ರಕರಣವನ್ನು ರಾಜಕೀಯಕ್ಕೆ ಏಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ನಾನು ಯಾವುದೇ ಪಕ್ಷ ಅಥವಾ ಸಂಘಟನೆ ಜತೆಯೂ ಗುರುತಿಸಿಕೊಂಡಿಲ್ಲ. ನಾನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಸೇರಿದವನು ಎನ್ನುವ ಬಗ್ಗೆ ಒಂದಾದರೂ ಸಾಕ್ಷ್ಯ ತೋರಿಸಲಿ’ ಎಂದು ಸವಾಲು ಹಾಕಿದ್ದಾರೆ.‘ಸುದೀರ್ಘ ಪ್ರಕ್ರಿಯೆ ಮೂಲಕ ತಮ್ಮನ್ನು ಆಯ್ಕೆ ಮಾಡಿದ್ದು, ನಾನು ಯಾವುದೇ ರೀತಿಯ ನಿಯಮಗಳನ್ನು ಉಲ್ಲಂಘಿಸಿಲ್ಲ. ಹೀಗಾಗಿ ರಾಜೀನಾಮೆ ನಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಹೇಳಿದರು.ರೋಹಿತ್‌ ಮತ್ತು ಇತರರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಆದರೆ, ಆವರ ಕೌಟುಂಬಿಕ ಪರಿಸ್ಥಿತಿ ಮತ್ತು  ಕೆಳವರ್ಗಕ್ಕೆ ಸೇರಿದ ಅಂಶಗಳನ್ನು ಗಮನಿಸಿ  ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲಾಯಿತು.  ಜತೆಗೆ ಅಧ್ಯಯನಕ್ಕೆ ತೊಂದರೆಯಾಗದಂತೆ ವಿದ್ಯಾರ್ಥಿ ವೇತನ ದೊರೆಯುವಂತೆ ಕ್ರಮಕೈಗೊಳ್ಳಲಾಗಿತ್ತು ಎಂದರು.130 ಶಿಕ್ಷಣ ತಜ್ಞರಿಂದ ಪತ್ರ

ಹೈದರಾಬಾದ್ (ಪಿಟಿಐ): ರೋಹಿತ್‌ ಆತ್ಯಹತ್ಯೆ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೇಶವಿದೇಶಗಳ 130 ಶಿಕ್ಷಣ ತಜ್ಞರು, ಈ ಬಗ್ಗೆ ಕ್ರಮಕೈಗೊಂಡು ಸೂಕ್ತ ನ್ಯಾಯ ಒದಗಿಸುವಂತೆ ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಅವರಿಗೆ ಪತ್ರ ಬರೆದಿದ್ದಾರೆ. ರೋಹಿತ್‌ ಪ್ರಕರಣ ಭಾರತದ ಉನ್ನತ ಶಿಕ್ಷಣದಲ್ಲಿನ ಜಾತಿ ತಾರತಮ್ಯಕ್ಕೆ ಸಾಕ್ಷಿಯಾಗಿದೆ ಎಂದು ಮೂರು ಪುಟಗಳ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.