ಗುರುವಾರ , ಮೇ 6, 2021
32 °C

ದಲಿತ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಪರಿಶಿಷ್ಟ ಮಕ್ಕಳಿಗೆ ವಿತರಿಸಬೇಕಿದ್ದ ಸ್ಕೂಲ್‌ಬ್ಯಾಗ್ ಹಾಗೂ ನೋಟ್‌ಬುಕ್ ವಿತರಣೆಯಲ್ಲಿ ಆದ ಅವ್ಯವಹಾರದ ತನಿಖೆಯನ್ನು ಲೋಕಾಯುಕ್ತ ರಿಗೆ ವಹಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್‌ನವರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ 1 ರಿಂದ 10ನೇ ತರಗತಿವರೆಗಿನ ಎಲ್ಲ ಶಾಲೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರ ಕೊಡಬೇಕಾಗಿದ್ದ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆಯಲ್ಲಿ ನಡೆದ ಅವ್ಯವಹಾರವನ್ನು  ದಲಿತ ವಿದ್ಯಾರ್ಥಿಗಳು ಖಂಡಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಗರದ ಹಲವಾರು ವಿದ್ಯಾರ್ಥಿಗಳು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಎಸ್.ಸಿ./ಎಸ್.ಟಿ ಹಾಗೂ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹೆಚ್ಚಳ ಮಾಡಬೇಕು. ಶಿಷ್ಯವೇತನವನ್ನು ನೇರವಾಗಿ ವಿದ್ಯಾರ್ಥಿಗಳಿಗೆ ನೀಡಬೇಕು. ಅವರು ಬಯಸಿದ  ವಸತಿ ನಿಲಯಗಳಲ್ಲಿ ಪ್ರವೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಹುಬ್ಬಳ್ಳಿಯ ಕಾನೂನು ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದಿಂದ ಏಕರೂಪದ ಶುಲ್ಕ ವಿಧಿಸುತ್ತಿದ್ದು, ಇದು ಸಾಮಾಜಿಕ ನ್ಯಾಯದ ಸ್ಪಷ್ಟ ಉಲ್ಲಂಘನೆಯಾಗುತ್ತದೆ, ಇದನ್ನು ಬೇಗನೆ ಸರ್ಕಾರ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಘಟಕ ಅಧ್ಯಕ್ಷ ಶ್ರೀನಾಥ ಪೂಜಾರಿ  ಮಾತನಾಡಿ, ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್‌ಬುಕ್, ಸ್ಕೂಲ್‌ಬ್ಯಾಗ್ ವಿತರಣೆಯಲ್ಲಿ ಅವ್ಯವಹಾರ ನಡೆದರೂ ಜನಪ್ರತಿನಿಧಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ.  ಸರ್ಕಾರ ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಶಿಷ್ಯ ವೇತನ ನೀಡುತ್ತಿಲ್ಲ. ಒಂದು ಕೈಯಿಂದ ಈ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡುತ್ತಿರುವ ಸರ್ಕಾರ, ಇನ್ನೊಂದು ಕೈಯಿಂದ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.ದಲಿತ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ ವಗ್ಯಾನವರ ಹಾಗೂ ಶಾಂತು ಶಹಾಪೂರ ಮಾತನಾಡಿದರು.ಇದಕ್ಕೂ ಮುನ್ನ ನಗರದ ಸರ್ಕಾರಿ ಪದವಿ ಕಾಲೇಜು, ಜಗಜ್ಯೋತಿ ಬಸವೇಶ್ವರ ಕಾಲೇಜು, ಸರ್ಕಾರಿ ಬಾಲಕರ ಹಾಗೂ ಬಾಲಕೀಯರ ಪದವಿ ಪೂರ್ವ ಕಾಲೇಜು, ಅಂಜುಮನ್ ಹೈಸ್ಕೂಲ್, ಬಂಜಾರ ಹೈಸ್ಕೂಲ್, ಎಂ.ಎಸ್. ಖೇಡ ಕಾಲೇಜ್, ಬಿ.ಎಲ್.ಡಿ.ಇ. ವುಮನ್ಸ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ವಿ.ಭ. ದರಬಾರ ಕಾಲೇಜಿನ ಹಲವಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಕಾಲೇಜಿನಿಂದ ಅಂಬೇಡ್ಕರ್ ಸರ್ಕಲ್‌ವರೆಗೆ ತೆರಳಿ ಅಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಕಾಸ ಹೊಸಮನಿ, ತಾಲೂಕು ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ರಾಠೋಡ, ಸಂತೋಷ ಆಲ್ಯಾಳ, ಸಂಜೋತ ಅವದಿ, ಸಚಿನ ಸವನಳ್ಳಿ, ಪ್ರಿಯಾಂಕಾ ರಾಠೋಡ, ಪುಷ್ಪಾ ಛಲವಾದಿ ಹಾಗೂ ಶ್ರೀದೇವಿ ಮಾದರ, ಸೇರಿದಂತೆ ಸಂಘಟನೆಯ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.