ಭಾನುವಾರ, ಮೇ 16, 2021
28 °C

ದಸರಾ ಉತ್ಸವಕ್ಕೆ ಮಡಿಕೇರಿ ಸಜ್ಜು

ಶ್ರೀಕಾಂತ ಕಲ್ಲಮ್ಮನವರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಪ್ರಸಿದ್ಧ ದಸರಾ ಉತ್ಸವಕ್ಕೆ ಮಡಿಕೇರಿ ನಗರ ಸಜ್ಜುಗೊಳ್ಳುತ್ತಿದೆ. ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳನ್ನು ತಯಾರು ಮಾಡಲು ಕಲಾವಿದರು ನಿರತವಾಗಿರುವಂತೆ ನಗರವನ್ನು ಸುಂದರಗೊಳಿಸಲು ನಗರಸಭೆಯು ಕ್ರಮಕೈಗೊಳ್ಳುತ್ತಿದೆ.ಮುಖ್ಯವಾಗಿ ದಶಮಂಟಪಗಳು ಸಾಗಿಬರುವ ಮಾರ್ಗದ ರಸ್ತೆಗಳನ್ನು ದುರಸ್ತೆ ಮಾಡುವುದು ಹಾಗೂ ದಸರಾ ಕಾರ್ಯಕ್ರಮಗಳು ನಡೆಯುವ ಟೌನ್‌ಹಾಲ್ ಮತ್ತು ಗಾಂಧಿ ಮಂಟಪ ಮೈದಾನವನ್ನು ಸಿಂಗಾರಗೊಳಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಿದೆ.ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ದೂರದೂರುಗಳಿಂದ ಆಗಮಿಸುವ ವೀಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ರಾಜ್ಯ ಸರ್ಕಾರದಿಂದ ಬಂದಿರುವ ರೂ 50 ಲಕ್ಷ ಅನುದಾನ ಹಾಗೂ ಸ್ಥಳೀಯರಿಂದ ಸಂಗ್ರಹಿಸಲಾಗುವ ಹಣದ ಸಂಪೂರ್ಣ ಸದ್ಬಳಕೆಯಾಗಲಿದೆ. ವಿಶೇಷವಾಗಿ ಈ ಬಾರಿ ಹಲವು ಖ್ಯಾತ ಕಲಾವಿದರನ್ನು ಕರೆಸಿಕೊಳ್ಳುತ್ತಿರುವುದರಿಂದ ಖರ್ಚು ಕೊಂಚ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.ರಸ್ತೆ ದುರಸ್ತಿಗೆ ಆದ್ಯತೆ

ಇತ್ತೀಚಿನ ದಿನಗಳಲ್ಲಿ ಮಡಿಕೇರಿಯಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿರುವ ಕಾರಣ ರಸ್ತೆಗಳು ಹಾಳಾಗಿ ಹೋಗಿವೆ. ಇವುಗಳನ್ನು ದುರಸ್ತಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ದಶಮಂಟಪ ಮೆರವಣಿಗೆ ಹೋಗುವ ಮಾರ್ಗಕ್ಕೆ ಮೊದಲ ಆದ್ಯತೆ ನೀಡಲಾಗಿದೆ.ಸುದರ್ಶನ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗಿನ ರಸ್ತೆಯ ದುರಸ್ತಿ ಕಾಮಗಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮಾಡಿಸಲಾಗುತ್ತಿದೆ. ಬಹುಶಃ ಸೋಮವಾರದಿಂದ ಈ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.ಜನರಲ್ ತಿಮ್ಮಯ್ಯ ವೃತ್ತದಿಂದ ನಗರಸಭೆ ಕಾರ್ಯಾಲಯದವರೆಗಿನ ರಸ್ತೆಯನ್ನು ನಗರಸಭೆ ವತಿಯಿಂದಲೇ ದುರಸ್ತಿ ಮಾಡಿಸಲಾಗುವುದು. ಮುಂದಿನ ವಾರದಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದರು.ಉಳಿದಂತೆ ನಗರದೊಳಗೆ ದಶಮಂಪಟಗಳು ಮೆರವಣಿಗೆ ಹೋಗುವ ರಸ್ತೆಯು ಬಹುತೇಕ ಚೆನ್ನಾಗಿದೆ. ಮಹದೇವ ಪೇಟೆಯ ಒಂದೆಡೆ ಹಾಗೂ ಇತರೆಡೆ ಸಣ್ಣಪುಟ್ಟ ಗುಂಡಿಗಳು ಬಿದ್ದಿದ್ದು, ಇವುಗಳನ್ನು ಮುಚ್ಚಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಕಾಲೇಜ್ ರಸ್ತೆ ತುಂಬಾ ಹದೆಗೆಟ್ಟಿದೆ. ಇದನ್ನು ತಾತ್ಕಾಲಿಕವಾಗಿ ಮಣ್ಣು, ಮರಳು ಹಾಕಿ ದುರಸ್ತಿ ಮಾಡಲಾಗುವುದು. ಇಲ್ಲಿ ದಶಮಂಟಪಗಳ ಮೆರವಣಿಗೆ ಹೋಗುವುದಿಲ್ಲ. ಆದರೂ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ದುರಸ್ತಿ ಮಾಡಲಾಗುವುದು ಎಂದು ಹೇಳಿದರು.ಮಳೆಗಾಲ ಕಳೆದ ಮೇಲೆ ಈ ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ಮಾಡುವ ಯೋಜನೆ ನಗರಸಭೆಗೆ ಇದೆ. ಆದ್ದರಿಂದ ಈಗ ತಾತ್ಕಾಲಿಕವಾಗಿ ರಿಪೇರಿ ಮಾಡಿ, ನಂತರ ಪಕ್ಕಾ ಕಾಮಗಾರಿ ಕೈಗೆತ್ತಿಕೊಂಡು, ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನುಡಿದರು.ಟೌನ್‌ಹಾಲ್ ರಿಪೇರಿ

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವ ಟೌನ್‌ಹಾಲ್ ಹಾಗೂ ಗಾಂಧಿ ಮಂಟಪ ಮೈದಾನವನ್ನು ಸಿಂಗಾರ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಟೌನ್‌ಹಾಲ್‌ನಲ್ಲಿ ಕೆಲವೊಂದು ದುರಸ್ತಿ ಮಾಡಲಾಗುತ್ತಿದೆ.ಮಳೆಯ ನೀರು ಸೋರುವಿಕೆಯನ್ನು ತಡೆಗಟ್ಟುವುದು ಹಾಗೂ ವೇದಿಕೆಯನ್ನು ಮತ್ತಷ್ಟು ಸುಂದರಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ.ಇದರಂತೆ ಗಾಂಧಿ ಮಂಟಪದಲ್ಲಿ ಶಾಮಿಯಾನ ಹಾಕುವ ಕೆಲಸವನ್ನೂ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಸುಮಾರು ರೂ4.5 ಲಕ್ಷ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.ಈ ಬಾರಿಯ ಮಡಿಕೇರಿ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಗರಸಭೆ ತೀರ್ಮಾನಿಸಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಕೋರಿದರು.

ಪ್ರತಿ ಮಂಟಪಕ್ಕೆ ರೂ 1.75 ಲಕ್ಷ

ದಶಮಂಟಪ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರತಿ ಮಂಟಪಕ್ಕೆ ರೂ 1.75 ಲಕ್ಷ ನೀಡಲಾಗುವುದು. ಒಟ್ಟು ಹತ್ತು ದಶಮಂಟಪಗಳಿಗೆ ಸುಮಾರು ರೂ 20 ಲಕ್ಷ ನೀಡಲಾಗುವುದು. ಇದಲ್ಲದೇ, ನಿಗದಿತ ಸಮಯದೊಳಗೆ ಮೆರವಣಿಗೆ ಪೂರೈಸಿ ಬರುವ ಮಂಟಪಕ್ಕೆ ರೂ 5,000 ವಿಶೇಷ ಕೊಡುಗೆಯೂ ಇದೆ ಎಂದು ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ತಿಳಿಸಿದರು.ಇದರ ಜೊತೆಗೆ 4 ಕರಗಕ್ಕೆ ಹಣ ನೀಡಲಾಗುವುದು. ಪ್ರತಿ ಕರಗಕ್ಕೆ ರೂ. 80,000  ಒಟ್ಟು ರೂ 3.20 ಲಕ್ಷ ನೀಡಲಾಗುವುದು ಎಂದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.