ಬುಧವಾರ, ಜೂನ್ 23, 2021
30 °C
ಎಸ್‌ಬಿಐ ಎಟಿಎಂಗೆ ಸಾಗಿಸುತ್ತಿದ್ದ ₨ 30 ಲಕ್ಷ

ದಾಖಲೆ ಇಲ್ಲದಕ್ಕೆ ವಶ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಭಾರತೀಯ ಸ್ಟೇಟ್ ಬ್ಯಾಂಕಿನ ಎಟಿಎಂಗೆ ಜಮಾ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ₨ 30 ಲಕ್ಷ ಮೊತ್ತವನ್ನು ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದಾಖಲೆ ಇಲ್ಲದ ಕಾರಣ ಕಮಲಾಪುರ ಪೊಲೀಸರು ವಶಪಡಿಸಿಕೊಂಡು ದಾಖಲೆ ಒದಗಿಸಿದ ನಂತರ ಹಣ ಬಿಡುಗಡೆ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಎಸ್‌ಬಿಐ ಬ್ಯಾಂಕಿನ ಎಟಿಎಂಗಳಿಗೆ ಹಣ ರವಾನಿಸುವ ಖಾಸಗಿ ಸಂಸ್ಥೆ ಸಿಬ್ಬಂದಿ ಬಳಿ ದಾಖಲೆಗಳು ಇಲ್ಲದ ಕಾರಣ ಅನುಮಾನಗೊಂಡ ಪೊಲೀಸರು ವಾಹನ ಹಾಗೂ ಹಣವನ್ನು ತಮ್ಮ ವಶಕ್ಕೆ ಪಡೆದಿದ್ದರು.ನಂತರ ಹೊಸಪೇಟೆ ನಗರದ ಎಸ್‌ಬಿಐ ಮುಖ್ಯ ಶಾಖೆಯ ಹಿರಿಯ ವ್ಯವಸ್ಥಾಪಕ ಎಸ್‌.ಕೆ.ಶ್ರೀನಿವಾಸ್‌ ಅವರು ಎಟಿಎಂಗಳಿಗೆ ಹಣ ಸಾಗಿಸುವ ಕುರಿತು ಸಮರ್ಪಕ ದಾಖಲೆ ಪೂರೈಸಿದ ನಂತರ ಚುನಾವಣಾಧಿಕಾರಿಗಳು ಹಣ ಬಿಡುಗಡೆ ಮಾಡಿದರು.  ನಗರದ ಭಾರತೀಯ ಸ್ಟೇಟ್‌ ಬ್ಯಾಂಕಿನ ಎಟಿಎಂಗಳಿಗೆ ಹಣ ಜಮಾ ಮಾಡಲು ಹೊರಗುತ್ತಿಗೆ ಪಡೆದಿರುವ ಸಿಎಂಎಸ್‌ (ಕರೆಸ್ಸಿ ಮ್ಯಾನೇಜ್‌ಮೆಂಟ್‌ ಸರ್ವಿಸ್‌) ಸಂಸ್ಥೆ ಸಿಬ್ಬಂದಿ ಸಿಬ್ಬಂದಿ ₨ 45 ಲಕ್ಷವನ್ನು ಕಮಲಾಪುರ, ಗಂಗಾವತಿ ಹಾಗೂ ಕಾರಟಗಿ ಎಟಿಎಂಗಳಿಗೆ ಜಮಾ ಮಾಡಲು ಶುಕ್ರವಾರ ಮಧ್ಯಾಹ್ನ ತಮ್ಮ ಟಾಟಾ–207 ವಾಹನ (ಕೆಎ–08, 5078)ದಲ್ಲಿ ಹೊರಟಿದ್ದರು.ಕಮಲಾಪುರದಲ್ಲಿರುವ ಎಟಿಎಂಗೆ ₨ 15 ಲಕ್ಷ ಜಮಾ ಮಾಡಿ ಗಂಗಾವತಿಯತ್ತ ಸಾಗುತ್ತಿದ್ದ ವಾಹನವನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ₨ 30 ಲಕ್ಷ ಇರುವುದು ಗೊತ್ತಾಗಿದೆ. ಪೊಲೀಸರು ಹಣಕ್ಕೆ ದಾಖಲೆ ಕೇಳಿದಾಗ ಸಿಎಂಎಸ್‌ ಸಿಬ್ಬಂದಿ ಬಳಿ ಹಣಕ್ಕೆ ಸಂಬಂಧಪಟ್ಟ ದಾಖಲೆಗಳು ಇರಲಿಲ್ಲ. ಈ ಕಾರಣದಿಂಧ ಪೊಲೀಸರು ಹಣ, ವಾಹನ ಹಾಗೂ ನಾಲ್ಕು ಮಂದಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ತಮ್ಮ ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ಪಿ.ಸುನೀಲಕುಮಾರ್‌, ತಹಶೀಲ್ದಾರ್‌ ರಮೇಶ ಕೋನರಡ್ಡಿ ಸೇರಿದಂತೆ ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಶ್ರೀನಿವಾಸ್ ಅವರು, ‘ಎಟಿಎಂಗಳಿಗೆ ಹಣ ಸಾಗಿಸುವ ಕುರಿತು ಸಿಎಂಎಸ್‌ ಸಿಬ್ಬಂದಿ ಬ್ಯಾಂಕಿನ ಪರವಾನಿಗೆ ಇಟ್ಟುಕೊಳ್ಳಬೇಕಿತ್ತು. ಹಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪೂರೈಸಿದ್ದರಿಂದ ಪೊಲೀಸರು ಹಣ, ವಾಹನ ಹಾಗೂ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.