ಶನಿವಾರ, ಮಾರ್ಚ್ 6, 2021
18 °C

ದಾಳಿಗೆ ಅಮೆರಿಕ ಕ್ಷಮಾಪಣೆ: ನ್ಯಾಟೊ ಮಾರ್ಗ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಳಿಗೆ ಅಮೆರಿಕ ಕ್ಷಮಾಪಣೆ: ನ್ಯಾಟೊ ಮಾರ್ಗ ಪುನರಾರಂಭ

ಇಸ್ಲಾಮಾಬಾದ್ (ಪಿಟಿಐ): ನ್ಯಾಟೊ ದಾಳಿಯ ಬಗ್ಗೆ ಅಮೆರಿಕ ಕ್ಷಮಾಪಣೆ ಕೋರಿದ ಹಿನ್ನೆಲೆಯಲ್ಲಿ ಪಾಕಿಸ್ತಾನವು ನ್ಯಾಟೊ ಪಡೆಗಳಿಗೆ ಸರಬರಾಜು ಮಾರ್ಗಗಳನ್ನು ಸಂಚಾರ ಮುಕ್ತಗೊಳಿಸಿದೆ.ವೈಮಾನಿಕ ದಾಳಿಯ ನಂತರ ನ್ಯಾಟೊ ಪಡೆಗಳಿಗೆ ಕಳೆದ ಏಳು ತಿಂಗಳಿನಿಂದ ಮುಚ್ಚಲಾಗಿದ್ದ ಸರಬರಾಜು ಮಾರ್ಗಗಳನ್ನು ಪುನರಾರಂಭಿಸುವುದಾಗಿ ಪಾಕ್ ಸರ್ಕಾರ ಮಂಗಳವಾರ ತಡ ರಾತ್ರಿ ಘೋಷಿಸಿದ ಬೆನ್ನಲ್ಲೇ ಕರಾಚಿಯ ಬಂದರಿನ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.ಮಾರಣಾಂತಿಕ ಶಸ್ತ್ರಾಸ್ತ್ರಗಳ ಸಾಗಾಣಿಕೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿರುವ ಪಾಕಿಸ್ತಾನ ಸರ್ಕಾರ, ಉಳಿದಂತೆ ಯಾವುದೇ ವಸ್ತುಗಳ ಸಾಗಾಣಿಕೆಗೆ ಸುಂಕ ವಿಧಿಸುವುದಿಲ್ಲ ಎಂದು ಘೋಷಿಸಿದೆ.ಕ್ಷಮಾಪಣೆ: ದೂರವಾಣಿಯಲ್ಲಿ ಹಿನಾ ರಬ್ಬಾನಿ ಅವರನ್ನು ಸಂಪರ್ಕಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ನ್ಯಾಟೊ ವೈಮಾನಿಕ ದಾಳಿಯ ಬಗ್ಗೆ ಕ್ಷಮಾಪಣೆ ಕೋರಿದರು.ಈ ಬೆಳವಣಿಗೆಯ ನಂತರ ಪ್ರಧಾನಿ ರಜಾ ಪರ್ವೆಜ್ ಅಶ್ರಫ್ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ರಕ್ಷಣಾ ವ್ಯವಹಾರಗಳ ಸಚಿವ ಸಂಪುಟ ಸಮಿತಿ ನಿರ್ಬಂಧವನ್ನು ಹಿಂತೆಗೆದುಕೊಳ್ಳುವ ಮಹತ್ವದ ನಿರ್ಧಾರವನ್ನು ಮಂಗಳವಾರ ತಡರಾತ್ರಿ ತೆಗೆದುಕೊಂಡಿರುವುದಾಗಿ ಪ್ರಕಟಿಸಿದೆ.ತಾಲಿಬಾನ್ ಬೆದರಿಕೆ: ಆಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿರುವ ನ್ಯಾಟೊ ಪಡೆಗಳ ಸರಬರಾಜು ವಾಹನಗಳ ಮೇಲೆ ದಾಳಿ ನಡೆಸುವುದಾಗಿ ಪಾಕಿಸ್ತಾನ  ತಾಲಿಬಾನ್ ಘಟಕ ಬೆದರಿಕೆ ಒಡ್ಡಿದೆ.ನ್ಯಾಟೊ ಪಡೆಗಳಿಗೆ ವಿಧಿಸಲಾಗಿದ್ದ ಸರಬರಾಜು ಮಾರ್ಗಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವ ಪಾಕಿಸ್ತಾನ ಸರ್ಕಾರದ ಘೋಷಣೆಯ ಬೆನ್ನಲ್ಲೇ ತಾಲಿಬಾನ್‌ನ ಈ ಹೇಳಿಕೆ ಹೊರಬಿದ್ದಿದೆ. ಸರ್ಕಾರದ ಈ ನಿರ್ಧಾರಕ್ಕೆ ಭಯೋತ್ಪಾದಕ ಸಂಘಟನೆ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದೆ.ಅಮೆರಿಕದಿಂದ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಪಾಕಿಸ್ತಾನದ ಆಡಳಿತಗಾರರು ಈ ನಾಟಕವಾಡುತ್ತಿದ್ದಾರೆ. ಜನತೆಯ ಬಗ್ಗೆ ಅವರಿಗೆ ನೈಜ ಕಾಳಜಿ ಇಲ್ಲ ಎಂದು ಅದು ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.