ಶುಕ್ರವಾರ, ಜೂನ್ 18, 2021
22 °C

ದಾವಣಗೆರೆ: ಬೆಂಕಿಗೆ 267 ಮನೆಗಳು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಎಪಿಎಂಸಿ ಹಿಂಭಾಗದಲ್ಲಿರುವ ಹಳೇ ಚಿಕ್ಕನಹಳ್ಳಿ ಬಡಾವಣೆಯಲ್ಲಿ ಶುಕ್ರವಾರ ಅಗ್ನಿ ಆಕಸ್ಮಿಕ ಸಂಭವಿಸಿ ಸುಮಾರು 267 ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಶ್ರಮಿಕ ಕುಟುಂಬಗಳು ಬೀದಿಗೆ ಬಿದ್ದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಸುಮಾರು ರೂ 10 ರಿಂದ 15 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಮಧ್ಯಾಹ್ನ ಸುಮಾರು 3.45ರ ವೇಳೆಗೆ, ಹಳ್ಳದ ಕಡೆಯಲ್ಲಿರುವ ಒಂದು ಮನೆಗೆ ಬೆಂಕಿ ಬಿದ್ದಿರುವುದು ಕಾಣಿಸಿಕೊಂಡಿದೆ. ಬಿಸಿಲಿನ ಝಳ ಹಾಗೂ ಗಾಳಿ ವೇಗವಾಗಿ ಬೀಸುತ್ತಿದ್ದ ಪರಿಣಾಮ, ಬೆಂಕಿಯ ಕೆನ್ನಾಲಿಗೆ ಕೆಲವೇ ನಿಮಿಷಗಳಲ್ಲಿ ಎಲ್ಲ ಮನೆಗಳಿಗೂ ವ್ಯಾಪಿಸಿದೆ. ಮನೆಗಳಲ್ಲಿ ಇದ್ದವರು ಗಾಬರಿಯಿಂದ ಹೊರ ಬಂದಿದ್ದಾರೆ.ಕೆಲವರು, ಮನೆಗಳಲ್ಲಿದ್ದ ಸಾಮಗ್ರಿಗಳು, ಬಟ್ಟೆ ಬರೆಗಳನ್ನು ಎತ್ತಿಕೊಂಡು ದೂರಕ್ಕೆ ಓಡಿ ಹೋಗಿದ್ದಾರೆ. ಕೆಲ ಮನೆಗಳಲ್ಲಿದ್ದ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಘಟನೆಯಲ್ಲಿ ಹತ್ತಾರು ಸೈಕಲ್‌ಗಳು, 40-45 ಟಿವಿ ಸೆಟ್‌ಗಳು, ಬಟ್ಟೆ ಬರೆ, ಆಹಾರ ಪದಾರ್ಥಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.ಗಂಜಿ ಕೇಂದ್ರ: ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಪಾಲಿಕೆ ಆಯುಕ್ತ ಪ್ರಸನ್ನಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ನಂತರ ಮುಖಂಡರ ಜತೆ ಸಭೆ ನಡೆಸಿದರು. ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲು ಮತ್ತು ಮೂರು ದಿನಗಳ ಕಾಲ ಗಂಜಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ.ಬಡಾವಣೆಯ ಪಕ್ಕದಲ್ಲಿದ್ದ ಶಾಲೆಯಲ್ಲಿ ಹಾಗೂ ಎಪಿಎಂಸಿ ಗೋದಾಮಿನಲ್ಲಿ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.