ಮಂಗಳವಾರ, ಮೇ 24, 2022
23 °C

ದಿಗ್ಗಜ ಮರಾಠಿ ಮಾಣುಸ್ಗಳ ವಾಕ್ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): `ಸುಖಾಸುಮ್ಮನೆ ನಮ್ಮ ಜೊತೆ ವೈರತ್ವ ಕಟ್ಟಿಕೊಳ್ಳಬೇಡಿ.~ ಇದು ಗಾಂಧಿವಾದಿ ಅಣ್ಣಾ ಹಜಾರೆ ಅವರಿಗೆ ಶಿವಸೇನಾ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ನೀಡಿರುವ ಎಚ್ಚರಿಕೆ.ಮಹಾರಾಷ್ಟ್ರದ ಈ ಎರಡೂ ಹಿರಿಯ `ಮರಾಠಿ ಮಾಣುಸ್~ (ಮರಾಠಿ ಮನುಷ್ಯ) ಗಳು ಈಗ ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದು ಮಹಾರಾಷ್ಟ್ರದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದಾರೆ.ದಸರಾ ಹಬ್ಬದ ಪ್ರಯುಕ್ತ ಗುರುವಾರ ಮುಂಬೈನಲ್ಲಿ ನಡೆದ ರ‌್ಯಾಲಿಯಲ್ಲಿ ಶಿವಸೇನಾ ಪ್ರಮುಖ ಬಾಳಾ ಠಾಕ್ರೆ ಅವರು ಅಣ್ಣಾ ಅವರನ್ನು ಕಟು ಮಾತುಗಳಿಂದ ಇರಿದಿದ್ದರು.ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ `ಒಂದು ದೊಡ್ಡ ಜೋಕ್~ ಎಂದು ಬಣ್ಣಿಸಿದ್ದ ಠಾಕ್ರೆ, “ಅಣ್ಣಾ ಅವರೇ ಈ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ. ಇದರಲ್ಲಿ ದೊಡ್ಡ ದೊಡ್ಡ ತಿಮಿಂಗಲುಗಳು ಸೇರಿಕೊಂಡಿವೆ. ಇವುಗಳನ್ನು ಹಿಡಿಯಲು ಹೋಗಿ ನಿಮ್ಮ ಬಲೆಯೇ ಹಾಳಾಗುತ್ತದೆ” ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಯಾಗಿ ಅಣ್ಣಾ ಅವರು, “ಠಾಕ್ರೆ ಅವರಿಗೆ ವಯಸ್ಸಾಗುತ್ತಿದೆ. ಅದಕ್ಕೇ ಈ ರೀತಿ ಮಾತನಾಡುತ್ತಿದ್ದಾರೆ” ಎಂದು ಹಂಗಿಸಿದ್ದರು.ಈ ಮಾತುಗಳನ್ನೇ ಗುರಿಯಾಗಿಸಿಕೊಂಡು ಶುಕ್ರವಾರ ಹೇಳಿಕೆಯೊಂದನ್ನು ಹೊರಡಿಸಿರುವ ಶಿವಸೇನೆ, “ಅಣ್ಣಾ ಅವರಿಗೆ ನಾವು ತಕ್ಕ ಉತ್ತರ ಕೊಡಬಲ್ಲೆವು. ನಾವೇನೂ ಗಾಂಧಿವಾದಿಗಳಲ್ಲ” ಎಂದು ಕ್ರೋಧ ವ್ಯಕ್ತಪಡಿಸಿದ್ದಾರೆ.`ಅಣ್ಣಾ ಅವರೇ ನೀವು ನನಗಿಂತಲೂ ಚಿಕ್ಕವರು. ಚಿಕ್ಕವರ ಈ ಹುಡುಗಾಟ ನನಗೆ ಹಿಡಿಸುವುದಿಲ್ಲ. ಸುಮ್ಮಸುಮ್ಮನೇ ನಮ್ಮ ಜೊತೆ ವೈರತ್ವ ಕಟ್ಟಿಕೊಳ್ಳಬೇಡಿ~ ಎಂದು ಎಚ್ಚರಿಸಿದ್ದಾರೆ.`ಅಣ್ಣಾ ರಾಮಲೀಲಾ ಮೈದಾನದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ಒಂದು ಪ್ರಹಸನ. ರಾಮಲೀಲಾ ಮೈದಾನದಲ್ಲಿ 35 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದು ಪಂಚತಾರಾ ಉಪವಾಸ! ಅಣ್ಣಾ ಏನೋ ಪ್ರಾಮಾಣಿಕವಾಗಿ ಭ್ರಷ್ಟಾಚಾರ ವಿರುದ್ಧ ಸತ್ಯಾಗ್ರಹ ನಡೆಸಬಹುದು. ಆದರೆ ಈ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ~ ಎಂದು ಠಾಕ್ರೆ ಹೇಳಿದ್ದಾರೆ.ರಾಳೆಗಣ ಸಿದ್ಧಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, `ಅವರು ಏನು ಹೇಳುತ್ತಿದ್ದಾರೊ ಅದು ಅವರಿಗೆ ಮಾತ್ರವೇ ಸರಿ ಎನಿಸಬಲ್ಲುದು. ಆದರೆ ನಾವು ನಮಗೆ ಏನು ಸರಿ ಎನಿಸುತ್ತಿದೆಯೊ ಅದನ್ನು ಮಾಡುತ್ತಿದ್ದೇವೆ ಅಷ್ಟೇ. ಪ್ರತಿಯೊಬ್ಬರಿಗೂ ಅವಮಾನಗಳನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು~ ಎಂದು ನುಡಿದಿದ್ದಾರೆ.ವಿಚಿತ್ರವೆಂದರೆ ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟ ಆರಂಭಿಸಿದ ಮೊದಲ ದಿನಗಳಲ್ಲಿ ಶಿವಸೇನೆ ಅವರನ್ನು ಬೆಂಬಲಿಸಿತ್ತು. ಅಂದು ಅಣ್ಣಾ ಅವರು ಉಪವಾಸ ಕುಳಿತಿದ್ದ ರಾಮಲೀಲಾ ಮೈದಾನಕ್ಕೆ ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಕೂಡಾ ಭೇಟಿ ನೀಡಿ ಸಹಮತ ವ್ಯಕ್ತಪಡಿಸಿದ್ದರು.ಆರ್‌ಎಸ್‌ಎಸ್ ಸಂಪರ್ಕ ಇಲ್ಲ: ಅಣ್ಣಾ

ರಾಳೆಗಣ ಸಿದ್ಧಿ/ನವದೆಹಲಿ:
ತಮ್ಮ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಆರ್‌ಎಸ್‌ಎಸ್ ಕೈಜೋಡಿಸಿದೆ ಎಂಬ ಹೇಳಿಕೆಗಳನ್ನು ಗಾಂಧಿವಾದಿ ಅಣ್ಣಾ ಹಜಾರೆ ಅಲ್ಲಗಳೆದಿದ್ದಾರೆ.ದಸರಾ ಹಬ್ಬದ ಪ್ರಯುಕ್ತ ಗುರುವಾರ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರು, `ಸಂಘದ ಸ್ವಯಂ ಸೇವಕರು ಈ ದೇಶದ ಎಲ್ಲ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ~ ಎಂದು ಹೇಳಿದ್ದರು. ಇದನ್ನೇ ಗುರಿಯಾಗಿಸಿಕೊಂಡ ಕಾಂಗ್ರೆಸ್, `ನಾವು ಮೊದಲೇ ಹೇಳಿದಂತೆ ಅಣ್ಣಾ ಅವರ ಹೋರಾಟಗಳು ಆರ್‌ಎಸ್‌ಎಸ್‌ನ ಪೂರ್ವಯೋಜಿತ ಕಾರ್ಯಕ್ರಮಗಳು~ ಎಂದು ಪುನರುಚ್ಚರಿಸಿದೆ. ಆದರೆ ಅಣ್ಣಾ ಈ ಮಾತುಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.