ಗುರುವಾರ , ಮೇ 6, 2021
32 °C

ದೀರ್ಘದಂಡ ನಮಸ್ಕಾರ ಹಾಕಿದ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ತಮ್ಮ ನಾಯಕ ಶಾಸಕನಾದರೆ ಬೆಂಬಲಿಗರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸುವುದು ಸಾಮಾನ್ಯ. ಆದರೆ, ಸಿಂದಗಿ ಕ್ಷೇತ್ರದ (ಬಿಜೆಪಿ) ಶಾಸಕ ರಮೇಶ ಭೂಸನೂರ ಸ್ವತಃ ಹರಕೆ ಪೂರೈಸಿದ ಅಪರೂಪದ ಘಟನೆ ನಡೆದಿದೆ.ಶಾಸಕ ರಮೇಶ ಭೂಸನೂರ ತಮ್ಮ ಸ್ವಗ್ರಾಮ ದೇವಣಗಾಂವದಲ್ಲಿ ಭಾನುವಾರ ನಡೆದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತಮ್ಮ ಮನೆಯಿಂದ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು. ಈ ಜಾತ್ರೆ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ.

ತಾವು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಅವರು ಈ ಹರಕೆ ಹೊತ್ತಿದ್ದರು ಎನ್ನಲಾಗಿದೆ.`ದೇವಣಗಾಂವ ಗ್ರಾಮದ ಲಕ್ಷ್ಮಿದೇವಿ ಬೇಡಿದವರ ಇಷ್ಟಾರ್ಥ ಈಡೇರಿಸುವ ಶಕ್ತಿದೇವತೆ' ಎಂಬುದು  ಗ್ರಾಮಸ್ಥರ ನಂಬಕೆ. ಹೀಗಾಗಿ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಇದೇ ಹರಕೆ ತೀರಿಸಿದರು.`ಶಾಸಕರು ಸಹ ಅದೇ ದಿನ ನಸುಕಿನ ಜಾವದಲ್ಲಿ ಯಾರಿಗೂ ಗೊತ್ತಾಗದಂತೆ ತಮ್ಮ ಕುಟುಂಬದ ಕೆಲವೇ ಸದಸ್ಯರೊಂದಿಗೆ ಈ ಹರಕೆ ತೀರಿಸಿದ್ದಾರೆ' ಎಂದು ಅವರ ಬೆಂಬಲಿಗರೊಬ್ಬರು ತಿಳಿಸಿದ್ದಾರೆ.ದೇವರು, ಜ್ಯೋತಿಷದಲ್ಲಿ ಅಪಾರ ನಂಬಿಕೆ ಹೊಂದಿರುವ ಶಾಸಕ ಭೂಸನೂರ, `ಸಿಂದಗಿ ಮತಕ್ಷೇತ್ರದ ವಾಸ್ತು ಸರಿಯಿರಲಿಲ್ಲ. ಹೀಗಾಗಿ ಒಮ್ಮೆ ಆಯ್ಕೆಯಾದ ಶಾಸಕ ಮತ್ತೆ ಆಯ್ಕೆಯಾಗುತ್ತಿರಲಿಲ್ಲ. ಆದರೆ, ಈ ಸಲ ವಾಸ್ತುದೋಷ ನಿವಾರಣೆ ಮಾಡಿದ್ದೇನೆ. ಹೀಗಾಗಿ ಎರಡನೇ ಬಾರಿಗೆ ಆಯ್ಕೆಯಾದ ಪ್ರಥಮ ಶಾಸಕ ಎಂಬ ದಾಖಲೆ ನಿರ್ಮಿಸುವೆ' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.