ಶನಿವಾರ, ಮೇ 21, 2022
23 °C

ದುತ್ತರಗಿ ರಂಗಮಂದಿರಕ್ಕೆ 10 ಲಕ್ಷ ಅನುದಾನ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಳೇಭಾವಿ (ಗುಳೇದಗುಡ್ಡ): ಕೇವಲ ಶಿಕ್ಷಣದಿಂದ ಕಲಾವಿದರಾಗಲು ಸಾಧ್ಯವಿಲ್ಲ, ಅದಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು. ಸಮೀಪದ ಸೂಳೇಭಾವಿ ಗ್ರಾಮದಲ್ಲಿ ದಿ.ಪಿ.ಬಿ. ದುತ್ತರಗಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಿಂದ ಭಾನುವಾರ ನಡೆದ ಪಿ.ಬಿ. ದುತ್ತರಗಿ ರಂಗಮಂದಿರದ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಲಾವಿದರ ಜೀವನವನ್ನು ಪ್ರತ್ಯಕ್ಷವಾಗಿ ಅವಲೋಕಿಸಿದಾಗ ಅವರ ಜೀವನ ಬಹಳ ಕಷ್ಟವಾಗಿದೆ. ರಂಗಭೂಮಿಯಲ್ಲಿ ಸೇವೆ ಸಲ್ಲಿಸುವವರು ಆರ್ಥಿಕವಾಗಿ ತೊಂದರೆ ಅನುಭವಿಸಿದವರಲ್ಲಿ ಪಿ.ಬಿ. ದುತ್ತರಗಿ ಒಬ್ಬರು. ಅವರು ಜೀವನದುದ್ದಕ್ಕೂ ರಂಗಭೂಮಿ ಕಲೆಗಾಗಿ ದುಡಿದವರು. ಕಲಾವಿದರಿಗೆ ಸರಕಾರ ಆರ್ಥಿಕ ನೆರವುಗಳನ್ನು ನೀಡುವ ಮೂಲಕ ಸಹಕರಿಸಿದೆ. ದುತ್ತರಗಿ ಅವರ ಹೆಸರಿನಲ್ಲಿ ಪ್ರಾರಂಭಿಸಿದ ರಂಗಮಂದಿರಕ್ಕೆ ಈಗಾಗಲೇ ಇಲಾಖೆಯಿಂದ 5 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಇನ್ನೂ 10 ಲಕ್ಷ ರೂ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಜಿಲ್ಲೆಯಲ್ಲಿ ಸ್ಥಳದ ಅಭಾವ ವಿರುವುದರಿಂದ ಹಾವೇರಿಯಲ್ಲಿ 500 ಎಕರೆ ಜಾಗೆಯಲ್ಲಿ ಜಾನಪದ ವಿಶ್ವವಿದ್ಯಾಲಯ ನಿರ್ಮಿಸಲು ಚಾಲನೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ರೂ. 10 ಲಕ್ಷ ವೆಚ್ಚದಲ್ಲಿ 100 ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸರಕಾರ ಮಂಜೂರಿ ನೀಡಲಾಗಿದೆ. ಅದರಲ್ಲಿ ಬಾಗಲಕೋಟೆ ಜಿಲ್ಲೆಯು ಸಿಂಹಪಾಲು ಪಡೆದಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಪಿ.ಬಿ. ದುತ್ತರಗಿ ಹಾಗೂ ಬಿ.ಆರ್. ಅರಿಷಿಣಗೋಡಿ ಅವರು ನಮ್ಮ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು. ಪ್ರತಿಷ್ಠಾನದ ಅಧ್ಯಕ್ಷ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಮಾತನಾಡಿ, ದುತ್ತರಗಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಲು ಅನೇಕ ರಚನಾತ್ಮಕ ಚಟುವಟಿಕೆಗಳ ಮೂಲಕ ಅವರ ಹೆಸರನ್ನು ಉಳಿಸಿ ಬೆಳೆಸುವ ಪ್ರಯತ್ನ ಪ್ರಾಮಾಣಿಕವಾಗಿ ಪ್ರತಿಷ್ಠಾನ ಮಾಡಲು ಸಿದ್ಧವಿದೆ ಎಂದರು.ಅಮೀನಗಡದ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುನಗುಂದ ಪ.ಪಂ. ಅಧ್ಯಕ್ಷ ಬಸಪ್ಪ ಆಲೂರ, ತಾ.ಪಂ ಸದಸ್ಯರಾದ ಚಿದಾನಂದ ದೂಪದ, ಬಸವರಾಜ ನಾಡಗೌಡ, ಸೂಳೇಭಾವಿ ಗ್ರಾ.ಪಂ. ಅಧ್ಯಕ್ಷ ಪಿ.ಎಸ್. ಕುರಿ, ಪ್ರತಿಷ್ಠಾನದ ಸದಸ್ಯರು ವಿಶ್ವನಾಥ ವಂಶಾಕೃತಿಮಠ, ಮಹಾಂತೇಶ ಗಜೇಂದ್ರಗಡ, ಗೋಪಾಲ ದುತ್ತರಗಿ, ಜವಳಿ ಇಲಾಖೆ ಉಪನಿರ್ದೇಶಕ ದೊಡ್ಡಬಸವರಾಜ ಉಪಸ್ಥಿತರಿದ್ದರು. ರಾಜು ಪಲ್ಲೇದ, ಹನಮಂತಪ್ಪ ರಾಮದುರ್ಗ ಅವರಿಂದ ರಂಗಗೀತೆ ಕಾರ್ಯಕ್ರಮ ನಡೆಯಿತು. ರವೀಂದ್ರ ಕಲಬುರ್ಗಿ ಸ್ವಾಗತಿಸಿದರು. ಹೇಮಂತ ದುತ್ತರಗಿ ನಿರೂಪಿಸಿದರು. ಆರ್. ನರಸಿಂಹಮೂರ್ತಿ ವಂದಿಸಿದರು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.