ಶುಕ್ರವಾರ, ಏಪ್ರಿಲ್ 23, 2021
22 °C

ದೂರವಾಣಿ ಸಂಪರ್ಕ 95 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದಲ್ಲಿನ ಒಟ್ಟು ದೂರವಾಣಿ ಸಂಪರ್ಕಗಳ ಸಂಖ್ಯೆ 2011-12ನೇ ಹಣಕಾಸು ವರ್ಷದ ಕಡೆಯ ತೈಮಾಸಿಕದಲ್ಲಿ ಶೇ 2.68ರಷ್ಟು ಹೆಚ್ಚಿದೆ.2011ರ ಡಿಸೆಂಬರ್ ಅಂತ್ಯದಲ್ಲಿ ದೇಶದಲ್ಲಿ ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್ ಬಳಕೆದಾರರು 92.65 ಕೋಟಿಯಷ್ಟಿದ್ದರು. 2012ರ ಜನವರಿ-ಮಾರ್ಚ್ ಅವಧಿಯಲ್ಲಿ ಶೇ 2.68ರಷ್ಟು ಮಂದಿ ಹೊಸದಾಗಿ ಸೇರ್ಪಡೆಯಾದರು. ಆ ಮೂಲಕ ಮಾರ್ಚ್ 31ರ ವೇಳೆಗೆ ದೇಶದಲ್ಲಿನ ಫೋನ್ ಸಂಪರ್ಕಗಳ ಸಂಖ್ಯೆ 95.13 ಕೋಟಿಗೆ ಮುಟ್ಟಿತು.ಮೊಬೈಲ್ ಫೋನ್ ಸಮೂಹಕ್ಕಂತೂ ನಿತ್ಯ ಹೊಸಬರ ಸೇರ್ಪಡೆ ನಡೆದೇ ಇದೆ. ದೇಶದಲ್ಲಿನ ಒಟ್ಟು ಮೊಬೈಲ್ (ಜಿಎಸ್‌ಎಂ ಮತ್ತು ಸಿಡಿಎಂಎ) ಫೋನ್ ಚಂದಾದಾರರ ಸಂಖ್ಯೆಯಲ್ಲಿ ಶೇ 2.83ರ ಏರಿಕೆಯಾಗಿದ್ದು, ಮಾರ್ಚ್ 31ರ ವೇಳೆಗೆ 91.91 ಕೋಟಿಗೆ ಹೆಚ್ಚಿದೆ.ಒಂದೆಡೆ ಮೊಬೈಲ್ ಫೋನ್ ಸಂಖ್ಯೆ ಹೆಚ್ಚುತ್ತಿದ್ದರೆ, ಸ್ಥಿರ ದೂರವಾಣಿಗೆ ಬೇಡಿಕೆ ಕಡಿಮೆ ಆಗಿದೆ. 2011ರ ಡಿಸೆಂಬರ್ 31ರ ವೇಳೆ 3.27 ಕೋಟಿಯಷ್ಟಿದ್ದ ಸ್ಥಿರ ದೂರವಾಣಿ ಸಂಪರ್ಕ 2012ರ ಮಾರ್ಚ್ 31ರ ವೇಳೆಗೆ 3.21 ಕೋಟಿಗೆ ತಗ್ಗಿವೆ.ಇದೇ ಅವಧಿಯಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಶೇ 2.10ರಷ್ಟು ಹೆಚ್ಚಿದೆ. ಅಂತರ್ಜಾಲ ಸಂಪರ್ಕ ಡಿಸೆಂಬರ್‌ನಲ್ಲಿ 2.24 ಕೋಟಿಯಷ್ಟಿದ್ದರೆ, ಮಾರ್ಚ್ 31ರ ವೇಳೆಗೆ 2.28 ಕೋಟಿಗೆ ಹೆಚ್ಚಿದ್ದಿತು.2011-12ರ 4ನೇ ತ್ರೈಮಾಸಿಕದಲ್ಲಿ ದೂರವಾಣಿ ಕ್ಷೇತ್ರದ ಒಟ್ಟಾರೆ ವರಮಾನ ರೂ. 49,243 ಕೋಟಿಯಷ್ಟಿದ್ದಿತು. ಪ್ರತಿ ಜಿಎಸ್‌ಎಂ ಸೇವೆ ಬಳಕೆದಾರರಿಂದ ಬಂದಿರುವ ಮಾಸಿಕ ವರಮಾನವೂ ಶೇ 1.66ರಷ್ಟು ಹೆಚ್ಚಿದೆ. ಅಂದರೆ ಸೆಲ್ಯು ಲರ್ ಕಂಪೆನಿಗಳು ಪ್ರತಿ ಚಂದಾದಾರ ರಿಂದ ಗಳಿಸುತ್ತಿದ್ದ ಹಣ ರೂ. 96ರಿಂದ ರೂ. 97ಕ್ಕೆ ಹೆಚ್ಚಿದೆ.ಐಡಿಯಾ ನಂ. 1: ಐಡಿಯಾ ಸೆಲ್ಯುಲರ್ ಜನವರಿ-ಮಾರ್ಚ್ ನಡುವೆ ಅತಿ ಹೆಚ್ಚು (63.40 ಲಕ್ಷ) ಸದಸ್ಯರನ್ನು ತನ್ನ ಜಾಲಕ್ಕೆ ಸೇರಿಸಿಕೊಂಡಿದೆ. 61.30 ಲಕ್ಷ ಹೊಸ ಚಂದಾದಾರರನ್ನು ಹೊಂದುವ ಮೂಲಕ ಯುನಿನಾರ್ ಕಂಪೆನಿ ಎರಡನೇ ಸ್ಥಾನಕ್ಕೇರಿದೆ. ಆದರೆ ಬಿಎಸ್‌ಎನ್‌ಎಲ್, 12.20 ಲಕ್ಷ ಹೊಸ ಗ್ರಾಹಕರನ್ನಷ್ಟೇ ಪಡೆದುಕೊಂಡಿದೆ.ಇನ್ನೊಂದೆಡೆ, ಕೆಲ ಕಂಪೆನಿಗಳು ಇದ್ದ ಸದಸ್ಯರನ್ನೂ ಕಳೆದುಕೊಂಡಿವೆ. ಟಾಟಾ 17 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದರೆ, ಎಸ್-ಟೆಲ್ ಕಂಪೆನಿಯಿಂದ 1.20 ಲಕ್ಷ ಚಂದಾದಾರರು ಹೊರ ಹೋಗಿದ್ದಾರೆ. `ಎಟಿಸಲಾಟ್~ ಸಹ 8.90 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.