ಭಾನುವಾರ, ಮೇ 22, 2022
27 °C

ದೃಷ್ಟಿಮಾಪನ: ಬನ್ನಿ ಕಲಿಯೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೃಷ್ಟಿಮಾಪನ: ಬನ್ನಿ ಕಲಿಯೋಣ

ದೃಷ್ಟಿದೋಷಗಳನ್ನು ಪತ್ತೆ ಹಚ್ಚುವ ಪ್ರಾಥಮಿಕ ತರಬೇತಿ ಪಡೆದ ಆರೋಗ್ಯ ತಜ್ಞರೇ ದೃಷ್ಟಿಮಾಪಕರು. ಇವರನ್ನು ಆಪ್ತಲ್ಮಿಕ್ ಆಪ್ಟೀಷಿಯನ್ ಎಂದೂ ಕರೆಯುತ್ತಾರೆ. ಇವರು ದೃಷ್ಟಿಯ ಸಂಪೂರ್ಣ ಪರೀಕ್ಷೆ, ಅಧಿಕ ರಕ್ತದೊತ್ತಡ, ಮಧುಮೇಹ ಮೊದಲಾದವುಗಳ ತಪಾಸಣೆ ನಡೆಸುವ ತರಬೇತಿ ಪಡೆದಿರುತ್ತಾರೆ. ದೃಷ್ಟಿಗೆ ಸಂಬಂಧಿಸಿದ ಪ್ರಾಥಮಿಕ ಸಮಸ್ಯೆಗಳನ್ನು ಹೋಗಲಾಡಿಸುವ ಚಿಕಿತ್ಸೆ, ಕನ್ನಡಕಗಳ ಬಗ್ಗೆ ಸಲಹೆ ನೀಡುವ ಪರಿಣತಿಯೂ ಇವರಿಗೆ ಇರುತ್ತದೆ.ದೃಷ್ಟಿಮಾಪನ ತರಬೇತಿ ಅಥವಾ ಆಪ್ಟೋಮೆಟ್ರಿ 3 ವರ್ಷದ ಕೋರ್ಸ್. ಜೊತೆಗೆ ಒಂದು ವರ್ಷ ಪೂರ್ಣ ತರಬೇತಿ, ಪರಿವೀಕ್ಷಣೆ ಹೊಂದಿರುತ್ತದೆ. ಇದನ್ನು ಪ್ರಿ ರಿಜಿಸ್ಟ್ರೆಷನ್ ವರ್ಷ ಎನ್ನುತ್ತಾರೆ. ವೃತ್ತಿ ಅರ್ಹತೆಗೂ ಮೊದಲಿನ ಈ ವರ್ಷದಲ್ಲಿ ಒಂದಷ್ಟು ತರಬೇತಿಗಳಿರುತ್ತವೆ.

ಒಮ್ಮೆ ಅರ್ಹತೆ ಪಡೆದರೆ ಅವರು ಕಣ್ಣಿನ ತಪಾಸಣೆ ಅವಕಾಶ ಪಡೆಯುತ್ತಾರೆ.ಈ ಕೋರ್ಸ್‌ಗೆ ಬ್ಯಾಚ್ಯುಲರ್ ಆಫ್ ಸೈನ್ಸ್ ಇನ್ ಆಪ್ಟಿಮೆಟ್ರಿ ಅಥವಾ ಬ್ಯಾಚ್ಯುಲರ್ ಆಫ್ ಆಪ್ಟಿಮೆಟ್ರಿ (ಬಿಎಸ್‌ಸಿ ಆಪ್ಟಿಮೆಟ್ರಿ) ಎಂದು ಹೆಸರು.ಮೊದಲ ಮತ್ತು ಎರಡನೇ ವರ್ಷದಲ್ಲಿ ವೃತ್ತಿಪರ ಕಾರ್ಯಕ್ರಮಗಳು, ಪ್ರಾಥಮಿಕ ಆರೋಗ್ಯ ವಿಜ್ಞಾನ ಸಂಬಂಧಿ ಕೋರ್ಸ್, ಆಪ್ಟಿಕ್ಸ್ ಮತ್ತು ವಿಷನ್ ಸೈನ್ಸ್ ಕಲಿಕೆ ಇರುತ್ತದೆ.

ವಿದ್ಯಾರ್ಥಿಗಳು ಕ್ಲಿನಿಕಲ್ ಅನುಭವವನ್ನು ಕ್ಲಿನಿಕಲ್ ಲ್ಯಾಬ್‌ಗಳಲ್ಲಿ ಪಡೆಯುತ್ತಾರೆ. ಮೊದಲು ಸಹಪಾಠಿಗಳೇ ರೋಗಿಗಳು. ಅವರನ್ನೇ ತಪಾಸಣೆ ಮಾಡಬೇಕು. ನಂತರ ನೈಜ ರೋಗಿಗಳ ತಪಾಸಣೆ ಇರುತ್ತದೆ. ಕಾಯಿಲೆಯ ಇತಿಹಾಸ, ಪರೀಕ್ಷೆಗಳು, ಚಿಕಿತ್ಸಾ ತಂತ್ರಜ್ಞಾನ ಕಲಿಕೆ ಮತ್ತು ಚಿಕಿತ್ಸೆ ಸೇವೆ ಚರ್ಚೆ ಇರುತ್ತದೆ.3ನೇ ವರ್ಷ ವಿದ್ಯಾರ್ಥಿಗಳು ಅರ್ಧ ಸಮಯವನ್ನು ತರಗತಿಯಲ್ಲಿ, ಉಳಿದ ವೇಳೆಯನ್ನು ಕ್ಲಿನಿಕ್‌ಗಳಲ್ಲಿ ರೋಗಿಗಳ ಪರೀಕ್ಷೆಯಲ್ಲಿ ಕಳೆಯುತ್ತಾರೆ. 4ನೇ ವರ್ಷ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಹೊರಗಿನ ಕ್ಲಿನಿಕ್‌ಗಳಲ್ಲಿ ತರಬೇತಿ ಇರುತ್ತದೆ.ಏಕೆ ಆಯ್ಕೆ ಮಾಡಬೇಕು?

ನಿಮ್ಮ ಇಷ್ಟದ ಪ್ರಕಾರ ಕೆಲಸ, ನಿಗದಿತ ಕಾರ್ಯವೇಳೆ, ತುರ್ತು ಕರೆಗಳ ಪ್ರಮಾಣ ತೀರಾ ಕಮ್ಮಿ ಇರುವುದು ಈ ಕ್ಷೇತ್ರದಲ್ಲಿ ಕಲಿಯಲು ಬಯಸುವವರಿಗೆ ದೊಡ್ಡ ಆಕರ್ಷಣೆ.

ಭವಿಷ್ಯ ರೂಪಿಸಿಕೊಳ್ಳಬಹುದಾದ, ಬದುಕಲು ಮತ್ತು ಪ್ರಾಕ್ಟೀಸ್‌ಗೆ ಸೂಕ್ತ ಸ್ಥಳ ಆಯ್ಕೆ ಮಾಡಿಕೊಳ್ಳಬಹುದಾದ ಅವಕಾಶ ಇದರಲ್ಲಿದೆ.

 

ಜನಸಂಖ್ಯೆ ಏರಿಕೆಯೊಂದಿಗೆ ದೃಷ್ಟಿಮಾಪನದ ಬೇಡಿಕೆ ಕೂಡ ಏರಿಕೆಯಾಗುತ್ತದೆ. ಏಕೆಂದರೆ ಎಷ್ಟೋ ಜನ ಕಡಿಮೆ ದೃಷ್ಟಿ, ಬೈನಾಕ್ಯುಲರ್ ದೃಷ್ಟಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಕೈತುಂಬ ಕೆಲಸದ ಬಾಗಿಲು ಸದಾ ತೆರೆದಿದೆ.ದೃಷ್ಟಿಮಾಪನ ವೃತ್ತಿ ನಿಮಗೆ ಹಣಕಾಸು ಭದ್ರತೆ, ಸ್ವಾವಲಂಬಿತನ ಮತ್ತು ಸಮುದಾಯದಲ್ಲಿ ಗೌರವ ಒದಗಿಸುತ್ತದೆ. ಕ್ಲಿನಿಕಲ್ ಪ್ರಾಕ್ಟೀಸ್‌ನಿಂದ ಹಿಡಿದು, ಬೋಧನೆ, ಸಂಶೋಧನೆ ವರೆಗೆ ವೈವಿಧ್ಯಮಯ ಅವಕಾಶವನ್ನು ನೀಡುತ್ತದೆ. ಖಾಸಗಿಯಾಗಿ ಸೇವೆ ಕೊಡಬಹುದು.ನಿತ್ಯ ದೃಷ್ಟಿ ತಪಾಸಣೆ, ಪ್ರಾಥಮಿಕ ದೃಷ್ಟಿ ಆರೈಕೆ, ಕಾಂಟ್ಯಾಕ್ಟ್ ಲೆನ್ಸ್, ಪಿಡಿಯಾಟ್ರಿಕ್ಸ್, ಲೊ ವಿಷನ್/ ಜಿರಿಯಾಟ್ರಿಕ್ ಪತ್ತೆ ಇತ್ಯಾದಿ ಸೇವೆ ನೀಡಬಹುದು.ಇದಲ್ಲದೆ ಬೃಹತ್ ರಿಟೇಲ್, ಆಪ್ಟಿಕಲ್ ಸೆಟ್ಟಿಂಗ್ಸ್ ವಲಯದಲ್ಲಿ ಉದ್ಯೋಗ ಅಥವಾ ಗುತ್ತಿಗೆ ಆಧಾರದಲ್ಲಿ ಕೆಲಸ, ವೃತ್ತಿಪರ ನೇತ್ರ ತಜ್ಞರಿಗೆ ಸಹಾಯಕ, ವಿವಿಧ ಆಸ್ಪತ್ರೆಗಳಲ್ಲಿ ಕೆಲಸದ ಅವಕಾಶ ದೊರೆಯುತ್ತದೆ.ಕಣ್ಣಿನ ಆರೋಗ್ಯ ಸಂಸ್ಥೆಗಳಲ್ಲಿ ಬೋಧನೆ, ವಿವಿಗಳಲ್ಲಿ ಸಂಶೋಧನೆ ಮಾಡಬಹುದು. ಎಂಎಸ್ ಅಥವಾ ಪಿಎಚ್‌ಡಿ ಪದವಿ ಪೂರೈಸಬಹುದು. ದೊಡ್ಡ ಸಂಸ್ಥೆಗಳಲ್ಲಿ ಕ್ಲಿನಿಕಲ್ ಸಂಶೋಧಕ, ನೇತ್ರ ಆರೈಕೆ ಕ್ಷೇತ್ರದಲ್ಲಿ ಸಲಹೆಗಾರ ಆಗಬಹುದು.

ವಿದ್ಯಾರ್ಹತೆ: 10+2 ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ/ ಗಣಿತ. ಜೊತೆಗೆ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತೇರ್ಗಡೆಯಾಬೇಕು.

(ಲೇಖಕರು ಬೆಂಗಳೂರಿನ ಶಂಕರ ದೃಷ್ಟಿಮಾಪನ ಕಾಲೇಜು ಪ್ರಾಚಾರ್ಯರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.