ಮಂಗಳವಾರ, ಮೇ 11, 2021
26 °C

ದೆಹಲಿಯತ್ತ ಸೇನಾ ತುಕಡಿ; ಜನರಲ್ ವಿ.ಕೆ. ಸಿಂಗ್ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು (ಪಿಟಿಐ):  ಜನವರಿ ಮಧ್ಯಭಾಗದಲ್ಲಿ ಸೇನೆಯ ಎರಡು ತುಕಡಿಗಳು ದೆಹಲಿಯತ್ತ ದೌಡಾಯಿಸಿದ್ದವು ಎಂಬ ಸುದ್ದಿಯನ್ನು ಅಲ್ಲಗಳೆದಿರುವ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಇದೊಂದು `ಶುದ್ಧ ಮೂರ್ಖತನ~ದಿಂದ ಕೂಡಿದ ವರದಿಯಾಗಿದೆ ಎಂದು ಖಂಡಿಸಿದ್ದಾರೆ.ಈ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಇದೇ ಮೊದಲ ಬಾರಿ ಮೌನ ಮುರಿದ ವಿ.ಕೆ. ಸಿಂಗ್, ಸರ್ಕಾರ ಮತ್ತು ಸೇನೆಯ ಮೇಲೆ ಕೆಸರೆರೆಚುವ ಯತ್ನಗಳು ನಡೆಯುತ್ತಿವೆ ಎಂದು ಟೀಕಿಸಿದರು.ಸರ್ಕಾರ ಮತ್ತು ಸೇನೆಗೆ ಕಳಂಕ ಹಚ್ಚಲು ಕೆಲ ವ್ಯಕ್ತಿಗಳು ಯತ್ನಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕಿದೆ ಎಂದು ಅವರು ಹೇಳಿದರು.ಸಿಂಗ್ ಪ್ರಸ್ತುತ ಮೂರು ದಿನಗಳ ನೇಪಾಳ ಭೇಟಿಗಾಗಿ ಕಠ್ಮಂಡುಗೆ ಆಗಮಿಸಿದ್ದಾರೆ. `ನೈಸರ್ಗಿಕ ವಿಕೋಪ ನಿರ್ವಹಣೆ ಹಾಗೂ ಮಾನವೀಯ ನೆರವು~ ಕುರಿತಾದ ಪ್ರಾದೇಶಿಕ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಾರೆ.`ಜನವರಿ 16-17ರ ಮಧ್ಯರಾತ್ರಿ ಹರಿಯಾಣಾದ ಹಿಸ್ಸಾರ್‌ನಿಂದ ಪದಾತಿ ದಳದ ಸೈನಿಕರು ಹಾಗೂ 50 ಪ್ಯಾರಾ ಬ್ರಿಗೇಡ್‌ನ ಕೆಲ ಸೈನಿಕರು ದೆಹಲಿಯತ್ತ ಧಾವಿಸಿದ್ದರು. ಇದರಿಂದ ಸರ್ಕಾರ ಗಾಬರಿಗೊಂಡಿತ್ತು~ ಎಂಬ ವರದಿ ದೆಹಲಿ ಮೂಲದ ಆಂಗ್ಲ ಪತ್ರಿಕೆಯಲ್ಲಿ ಬುಧವಾರ ಪ್ರಕಟಗೊಂಡಿತ್ತು.ಈ ವರದಿಯ ಕುರಿತು ಪ್ರತಿಕ್ರಿಯಿಸುವಂತೆ ಕೇಳಿದಾಗ, ಇದೊಂದು ಸಂಪೂರ್ಣ ಮೂರ್ಖತನದ ವರದಿ ಎಂದು ಕಿಡಿಕಾರಿದರು. ಸೇನಾ ಮುಖ್ಯಸ್ಥರ ವಿರುದ್ಧ ಸುದ್ದಿ ಹಬ್ಬಿಸುತ್ತಿರುವವರೆಲ್ಲ ಖಂಡನೆಗೆ ಅರ್ಹರು ಎಂದೂ ಸಿಂಗ್ ಹೇಳಿದರು.ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ್ದ ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಸೇನಾ ಅಧಿಕಾರಿಗಳು ಈ ವರದಿ ಕಳವಳಕ್ಕೆ ಕಾರಣವಾಗಿದೆ ಹಾಗೆಯೇ ಇದು ಸಂಪೂರ್ಣ ಆಧಾರರಹಿತವಾಗಿದೆ ಎಂದು ಖಂಡಿಸಿದ್ದರು.

 

ನೇಪಾಳ ನಾಯಕರ ಭೇಟಿ

ಕಠ್ಮಂಡು (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, ಗುರುವಾರ ನೇಪಾಳ ರಾಷ್ಟ್ರಪತಿ ಯಾದವ್ ಹಾಗೂ ಪ್ರಧಾನಿ ಬಾಬುರಾಮ್ ಭಟ್ಟಾರೈ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.ರಾಷ್ಟ್ರಪತಿ ಯಾದವ್ ಜತೆಗಿನ ಭೇಟಿಯಲ್ಲಿ ಸಿಂಗ್ ನೇಪಾಳದ ಶಾಂತಿ ಮತ್ತು ಸಮೃದ್ಧಿಗಾಗಿ ಶುಭ ಹಾರೈಸಿದರು.

ಪ್ರಧಾನಿ ಬಾಬುರಾಮ್ ಭಟ್ಟಾರೈ ಜತೆಗಿನ ಮಾತುಕತೆಯಲ್ಲಿ ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಲಾಯಿತು ಎಂದು ಸಿಂಗ್ ತಿಳಿಸಿದರು.ನೇಪಾಳದಲ್ಲಿ ಭಾರತದ ರಾಯಭಾರಿಯಾಗಿರುವ ಜಯಂತ್ ಪ್ರಸಾದ್ ಈ ಸಂದರ್ಭದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.