ಗುರುವಾರ , ಮೇ 28, 2020
27 °C

ದೆಹಲಿಯಲ್ಲಿ ರಾಜ್ಯಪಾಲರ ವಿರುದ್ಧ ಸಿಎಂ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭೂ ಹಗರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಮೊಕದ್ದಮೆ ಹೂಡಲು ಅನುಮತಿ ನೀಡಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಸಂಸತ್ ಸದಸ್ಯರು ರಾಷ್ಟ್ರಪತಿ ಭವನದಲ್ಲಿ ಸೋಮವಾರ ಪೆರೇಡ್ ನಡೆಸಲಿದ್ದಾರೆ.ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿ, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಎಸ್.ಈಶ್ವರಪ್ಪ, 19 ಲೋಕಸಭೆ ಸದಸ್ಯರು, ಐವರು ರಾಜ್ಯಸಭೆ ಸದಸ್ಯರು ಬೆಳಿಗ್ಗೆ 11.30 ಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.‘ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿರುವ ತೀರ್ಮಾನ ರಾಜಕೀಯ ಪ್ರೇರಿತವಾದುದು. ರಾಜಕೀಯ ಒಳಸಂಚಿಗೆ ರಾಜಭವನ ದುರುಪಯೋಗ ಮಾಡಿಕೊಳ್ಳುತ್ತಿರುವ  ರಾಜ್ಯಪಾಲ ಭಾರದ್ವಾಜ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಒತ್ತಾಯಿಸುವ 50 ಪುಟಗಳ ಮನವಿಯನ್ನು ಬಿಜೆಪಿ ಸಂಸದರ ನಿಯೋಗ ರಾಷ್ಟ್ರಪತಿಗಳಿಗೆ ಸಲ್ಲಿಸಲಿದೆ.ಈ ಮನವಿ ಪತ್ರ ಹಾಗೂ ರಾಜ್ಯಪಾಲರ ನಿರ್ಧಾರದ ವಿರುದ್ಧ ನಡೆಸಲಿರುವ ಕಾನೂನು ಸಮರ ಕುರಿತು ಚರ್ಚಿಸಲು ಮುಖ್ಯಮಂತ್ರಿ ಭಾನುವಾರ ಮಧ್ಯಾಹ್ನ ದೆಹಲಿಗೆ ಭೇಟಿ ನೀಡಿದ್ದರು. ಅರುಣ್ ಜೇಟ್ಲಿ, ಅಡ್ವಾಣಿ ಹಾಗೂ ಖ್ಯಾತ ವಕೀಲರಾದ ರಾಂಜೇಠ್ಮಲಾನಿ, ಸತ್ಯಪಾಲ್ ಜೈನ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ರಾತ್ರಿ ಬೆಂಗಳೂರಿಗೆ ಹಿಂತಿರುಗಿದರು.ರಾಷ್ಟ್ರಪತಿಗೆ ಸಲ್ಲಿಸುವ ಮನವಿ ಪತ್ರದಲ್ಲಿ ‘ಭಾರದ್ವಾಜ್ ರಾಜ್ಯಪಾಲರಾಗಿ ಕರ್ನಾಟಕಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್ ಮೇಲೆ ನಿಷ್ಠೆ ಪ್ರದರ್ಶಿಸುತ್ತಿದ್ದಾರೆ. ರಾಜಭವನದ ಘನತೆ- ಗೌರವವನ್ನು ಗಾಳಿಗೆ ತೂರಿ ಆ ಪಕ್ಷದ ಏಜೆಂಟರಾಗಿ ವರ್ತಿಸುತ್ತಿದ್ದಾರೆ. ಹೆಜ್ಜೆಹೆಜ್ಜೆಗೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪ ಮಾಡಲಾಗುತ್ತಿದೆ.ರಾಜ್ಯಪಾಲರ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ಸಾಬೀತುಪಡಿಸಲು ಪತ್ರಿಕೆಗಳಲ್ಲಿ ಪ್ರಕಟ ಆಗಿರುವ ವರದಿಗಳನ್ನು ಪ್ರಸ್ತಾಪಿಸಲಾಗುತ್ತಿದೆ. ರಾಜ್ಯಪಾಲರ ಮೇಲೆ ಜನ ಅಸಮಾಧಾನಗೊಂಡಿದ್ದು ಅವರನ್ನು ತಕ್ಷಣ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಲಿದೆ.ರಾಜೀನಾಮೆ ಇಲ್ಲ: ಈ ಮಧ್ಯೆ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ‘ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿದ್ದು ನೈತಿಕವಾಗಿ ಸರಿಯಾದ ಕ್ರಮವಲ್ಲವೆಂದು ಬಿಜೆಪಿ ಅಧ್ಯಕ್ಷ ನಿತಿನ್‌ಗಡ್ಕರಿ ಹೇಳಿದ್ದರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ’ ಎಂದು ಪುನರುಚ್ಚರಿಸಿದರು.ಬಿಜೆಪಿ ಅಧ್ಯಕ್ಷರು ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆಂಬುದು ಗೊತ್ತಿಲ್ಲ. ಸದ್ಯ ಚೀನಾ ಪ್ರವಾಸದಲ್ಲಿರುವ ಅವರು 25ರ ಬಳಿಕ ಹಿಂತಿರುಗಲಿದ್ದಾರೆ. ಅನಂತರ ಅವರನ್ನು ಭೇಟಿ ಮಾಡಿ ತಮ್ಮ ಮೇಲಿನ ಆರೋಪ, ರಾಜ್ಯಪಾಲರ ನಡವಳಿಕೆ ಸೇರಿದಂತೆ ಎಲ್ಲ ಬೆಳವಣಿಗೆ ಕುರಿತು ವಿವರಿಸುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದರು.‘ಜಮೀನು ಡಿನೋಟಿಫೈ ಮಾಡಿರುವುದು ಕಾನೂನು ದೃಷ್ಟಿಯಿಂದ ತಪ್ಪಲ್ಲದಿದ್ದರೂ ನೈತಿಕವಾಗಿ ಸರಿಯಲ್ಲ ಎಂದು ನಿತಿನ್ ಗಡ್ಕರಿ ಹೇಳಿರುವ ಹಿನ್ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವಿರಾ’ ಎಂಬ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದರು.‘ಭೂ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಮೊಕದ್ದಮೆ ಹೂಡಲು ಅನುಮತಿ ನೀಡಿರುವ ರಾಜ್ಯಪಾಲರ ತೀರ್ಮಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಿಲ್ಲ. ವಕೀಲರಿಬ್ಬರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ’ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.‘ರಾಜ್ಯಪಾಲರು ಆತುರದ ತೀರ್ಮಾನ ಮಾಡಿದ್ದಾರೆ. ವಕೀಲರ ದೂರು ಗೊಂದಲದಿಂದ ಕೂಡಿದೆ. ಹಲವು ಆಯಾಮಗಳನ್ನು ಒಳಗೊಂಡಿರುವ ದೂರು ಪರಿಶೀಲಿಸಲು ಸಾಕಷ್ಟು ಸಮಯ ಹಾಗೂ ಪರಿಣಿತಿ ಅಗತ್ಯವಿದೆ ಎಂದು ಮೊದಲಿಗೆ ಹೇಳಿದ್ದ ರಾಜ್ಯಪಾಲರು ಕೇವಲ ಮೂರೇ ದಿನದಲ್ಲಿ ತರಾತುರಿ ನಿರ್ಧಾರ ಮಾಡಿದ್ದಾರೆ’ ಎಂದು ದೂರಿದರು.‘ಬಿಜೆಪಿ ಸರ್ಕಾರ ಉರುಳಿಸಿ ತಾವು ದರ್ಬಾರು ನಡೆಸಬೇಕೆಂಬ ರಾಜಕೀಯ ಮಹಾದಾಸೆಯಿಂದ ಈ ತೀರ್ಮಾನ ಮಾಡಿದ್ದಾರೆ.ಆ ಮೂಲಕ ರಾಜಭವನದ ಪಾವಿತ್ರ್ಯತೆ ಮಣ್ಣುಪಾಲು ಮಾಡಿದ್ದಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.ಮೂರ್ನಾಲ್ಕು ದಿನದಲ್ಲಿ ಪುನ:
ದೆಹಲಿಗೆ ಆಗಮಿಸಿ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.