ದೇವಯಾನಿಗೆ ರಾಜತಾಂತ್ರಿಕ ವಿನಾಯ್ತಿ ಇಲ್ಲ

ನ್ಯೂಯಾರ್ಕ್ (ಪಿಟಿಐ): ವೀಸಾ ವಂಚನೆ ಮತ್ತು ಸುಳ್ಳು ಹೇಳಿಕೆ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರಿಗೆ ರಾಜತಾಂತ್ರಿಕ ವಿನಾಯ್ತಿ ಇಲ್ಲ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯವು ಕೋರ್ಟ್ಗೆ ಸಲ್ಲಿಸಿರುವ ಘೋಷಣಾಪತ್ರದಲ್ಲಿ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ಕಾನೂನು ಸಲಹಾ ವಿಭಾಗದ ಅಟಾರ್ನಿ ಸ್ಟೀಫನ್ ಕೆರ್ ಅವರು ಸಹಿ ಮಾಡಿರುವ ಲಿಖಿತ ಘೋಷಣಾಪತ್ರವನ್ನು ಮ್ಯಾನ್ಹಟನ್ ಫೆಡರಲ್ ಪ್ರಾಸಿಕ್ಯೂಟರ್ ಪ್ರೀತ್ ಭರಾರ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ತಮ್ಮ ವಿರುದ್ಧ ಮಾಡಲಾಗಿರುವ ವೀಸಾ ವಂಚನೆ ಮತ್ತು ಸುಳ್ಳು ಹೇಳಿಕೆ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಖೋಬ್ರಾಗಡೆ ಸಲ್ಲಿಸಿರುವ ಕೋರಿಕೆಗೆ ಪ್ರತಿಯಾಗಿ ಅಮೆರಿಕ ವಿದೇಶಾಂಗ ಕಚೇರಿಯು ಈ ಘೋಷಣಾಪತ್ರ ಸಲ್ಲಿಸಿದೆ.
ಭಾರತದ ಡೆಪ್ಯೂಟಿ ಕಾನ್ಸುಲ್ ಜನರಲ್ ಆಗಿದ್ದ ಖೋಬ್ರಾಗಡೆ ಅವರಿಗೆ ಸಂಪೂರ್ಣ ರಾಜತಾಂತ್ರಿಕ ವಿನಾಯ್ತಿ ಸೌಲಭ್ಯ ಇಲ್ಲದಿರುವುದರಿಂದ ಕಳೆದ ಡಿ. 12ರಂದು ಫೆಡರಲ್ ಪೊಲೀಸರು ಅವರನ್ನು ಬಂಧಿಸಿರುವುದು ಸರಿಯಾದ ಕ್ರಮ ಎಂದು ಘೋಷಣಾಪತ್ರ ದಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಕ್ರಿಮಿನಲ್ ಪ್ರಕರಣದ ವಿಚಾರಣೆಯಿಂದ ಸಹ ಅವರಿಗೆ ವಿನಾಯ್ತಿ ಸೌಲಭ್ಯವಿಲ್ಲ. ಆದ್ದರಿಂದ ಖೋಬ್ರಾಗಡೆ ಅವರ ಮನವಿಯನ್ನು ಮಾನ್ಯ ಮಾಡಬಾರದು ಎಂದು ತಿಳಿಸಲಾಗಿದೆ.
ವಿಶ್ವಸಂಸ್ಥೆಯ ಕಚೇರಿಗೆ ವರ್ಗಾವಣೆ ಮಾಡಿದ ನಂತರ ಖೋಬ್ರಾಗಡೆ ಅವರು ಅಲ್ಲಿ ಎರಡು ದಿನ ಕೆಲಸ ಮಾಡಿದ ಮಾತ್ರಕ್ಕೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದು ವಾದಿಸಲಾಗಿದೆ.
ಪ್ರತಿಕ್ರಿಯೆ: ಈ ಮಧ್ಯೆ, ದೇವಯಾನಿ ಅವರಿಗೆ ರಾಜತಾಂತ್ರಿಕ ವಿನಾಯಿತಿ ಇಲ್ಲವೆಂದು ಸರ್ಕಾರಿ ವಕೀಲ ಪ್ರೀತ್ ಭರಾರ ಅವರು ನ್ಯಾಯಾಲಯಕ್ಕೆ ಘೋಷಣಾಪತ್ರ ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಖೋಬ್ರಾಗಡೆ ವಕೀಲರು, ಇಂತಹ ವಿಷಯಗಳನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಭಾರತದ ವಿರುದ್ಧ ಸೇಡಿನ ಕ್ರಮವಲ್ಲ: ಸ್ಪಷ್ಟನೆ
ವಾಷಿಂಗ್ಟನ್ (ಐಎಎನ್ಎಸ್): ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯವನ್ನು ಸುರಕ್ಷತಾ ವಿಚಾರದಲ್ಲಿ ಒಂದನೇ ವರ್ಗದಿಂದ ಎರಡನೇ ವರ್ಗಕ್ಕೆ ಇಳಿಸಿದ ಅಮೆರಿಕದ ಫೆಡರಲ್ ವಿಮಾನಯಾನ ಪ್ರಾಧಿಕಾರದ ಕ್ರಮವು ಭಾರತದ ವಿರುದ್ಧ ಸೇಡಿನ ಕ್ರಮ ಎಂಬ ಟೀಕೆಗಳು ಕೇಳಿ ಬರುತ್ತಿವೆ.
ರಾಜತಾಂತ್ರಿಕ ಅಧಿಕಾರಿ ಖೋಬ್ರಾಗಡೆ ಪ್ರಕರಣದ ಹಿನ್ನೆಲೆಯಲ್ಲಿ ಭಾರತದ ವಿಮಾನಯಾನ ನಿರ್ದೇಶನಾಲಯವನ್ನು ಸುರಕ್ಷತೆ ವಿಚಾರದಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲಾಗಿದೆ ಎಂಬ ವಾದವನ್ನು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರೆ ಮೇರಿ ಹಾರ್ಫ್ ತಳ್ಳಿಹಾಕಿದ್ದಾರೆ. ಅಂತರರಾಷ್ಟ್ರೀಯ ವಿಮಾನಯಾನ ಸುರಕ್ಷತೆಯ ನಿಯಮಗಳಿಗೆ ಅನುಸಾರವಾಗಿ ಫೆಡರಲ್ ವಿಮಾನಯಾನ ಸಂಸ್ಥೆ ನಿರ್ಧಾರ ತೆಗೆದುಕೊಂಡಿದ್ದು, ಖೋಬ್ರಾಗಡೆ ಪ್ರಕರಣಕ್ಕೂ ಈ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭರವಸೆ: ಈ ಮಧ್ಯೆ, ಅಮೆರಿಕವು ಭಾರತದ ವಿಮಾನ ಸುರಕ್ಷತಾ ದರ್ಜೆಯನ್ನು ಪಾಕಿಸ್ತಾನಕ್ಕಿಂತ ಕೆಳಗೆ ಮತ್ತು ಬಾಂಗ್ಲಾದೇಶ, ಘಾನಾ ಇನ್ನಿತರ ಬಡ ರಾಷ್ಟ್ರಗಳ ಸ್ಥಾನಮಾನಕ್ಕೆ ಇಳಿಸಿದ ಮಾರನೇ ದಿನವಾದ ಶನಿವಾರ ಪ್ರತಿಕ್ರಿಯಿಸಿ, ಆದಷ್ಟು ಬೇಗ ಭಾರತಕ್ಕೆ ನೆರವಾಗಿ ವಿಮಾನ ಸುರಕ್ಷತೆಮೇಲ್ದರ್ಜೆಗೇರಿಸುವ ಭರವಸೆ ನೀಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.