ದೇವಸ್ಥಾನದ ಕಲ್ಯಾಣಿ ಸ್ವಚ್ಛತೆಗೆ ಶ್ರಮದಾನ

7

ದೇವಸ್ಥಾನದ ಕಲ್ಯಾಣಿ ಸ್ವಚ್ಛತೆಗೆ ಶ್ರಮದಾನ

Published:
Updated:
ದೇವಸ್ಥಾನದ ಕಲ್ಯಾಣಿ ಸ್ವಚ್ಛತೆಗೆ ಶ್ರಮದಾನ

ಬೆಂಗಳೂರು: ಸುಬ್ರಹ್ಮಣ್ಯಪುರ-ಉತ್ತರಹಳ್ಳಿ ಆಸುಪಾಸಿನ ಕೆರೆ ಅಭಿವೃದ್ಧಿ ಟ್ರಸ್ಟ್ (ಸನ್‌ಲಿಟ್) ಸದಸ್ಯರು ಭಾನುವಾರ ವಸಂತಪುರದ ವಸಂತವಲ್ಲಭ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು.ಸನ್‌ಲಿಟ್ ಸದಸ್ಯರಲ್ಲದೆ ಅಕ್ಕ-ಪಕ್ಕದ ನಿವಾಸಿಗಳು, ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಬೆಳಿಗ್ಗೆ 7.30ರ ಸುಮಾರಿಗೆ ಆರಂಭವಾದ ಸ್ವಚ್ಛತಾ ಕಾರ್ಯ ನಾಲ್ಕು ಗಂಟೆಗಳ ಕಾಲ ನಡೆಯಿತು. ಸಾವಿರ ವರ್ಷದಷ್ಟು ಹಳೆಯದಾದ ಕಲ್ಯಾಣಿ, ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.ಮೂರು ವರ್ಷಗಳಿಂದ ಕಲ್ಯಾಣಿಯಲ್ಲಿ ನೀರೇ ಇಲ್ಲ. ಕಲ್ಯಾಣಿಗೆ ನೀರು ತರುತ್ತಿದ್ದ ಕಾಲುವೆಗಳು ಮುಚ್ಚಿಹೋಗಿದ್ದೇ ಅದು ಬತ್ತಿಹೋಗಲು ಕಾರಣ ಎಂದು ಸನ್‌ಲಿಟ್ ಸದಸ್ಯರು ದೂರಿದರು.`ಕಲ್ಯಾಣಿಗೆ ಜಲಮೂಲವಾದ ಜನಾರ್ದನ ಕೆರೆ ಸಹ ಎರಡು ವರ್ಷಗಳಿಂದ ಒಣಗಿಹೋಗಿದೆ. ನೀರಿಲ್ಲದೆ ಕೆರೆಗೆ ಮರುಜೀವ ಬರುವುದಾದರೂ ಹೇಗೆ' ಎಂದು ಪ್ರಶ್ನಿಸಿದ ಸನ್‌ಲಿಟ್ ಟ್ರಸ್ಟಿ ಮಹೇಶಕುಮಾರ್, `ಮುಂದಿನ ಶ್ರಮದಾನದಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುವುದು. ಪ್ರತಿ ಭಾನುವಾರವೂ ಶ್ರಮದಾನ ಮಾಡಲು ನಿರ್ಧರಿಸಲಾಗಿದೆ' ಎಂದರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಕಲ್ಯಾಣಿ ಅಭಿವೃದ್ಧಿಗೆ ರೂ 50 ಲಕ್ಷವನ್ನು ಮೀಸಲಿಟ್ಟಿತ್ತು. ಬೊಮ್ಮನಹಳ್ಳಿ ವಲಯ ಎಂಜನಿಯರ್‌ಗಳು ಆ ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದರು. ಬಿಬಿಎಂಪಿ ಆಯುಕ್ತರ ತಾಂತ್ರಿಕ ತನಿಖಾ ಕೋಶ (ಟಿವಿಸಿಸಿ) ಈ ಅಕ್ರಮವನ್ನು ಬಯಲಿಗೆ ತಂದಿತ್ತು.`ಸಾಮಾಜಿಕ ಕಾರ್ಯಕರ್ತರೊಬ್ಬರು ಈ ಸಂಬಂಧ ಅಧಿಕಾರಿಗಳ ವಿರುದ್ಧ ಏಪ್ರಿಲ್‌ನಲ್ಲಿ ದೂರು ನೀಡಿದ್ದಾರೆ. ತಪ್ಪು ಮಾಡಿದ ಅಧಿಕಾರಿಗಳು ರಾಜಾರೋಷವಾಗಿ ಓಡಾಡುತ್ತಿದ್ದು, ಕ್ರಮ ಕೈಗೊಂಡಿಲ್ಲ' ಎಂದು ಸನ್‌ಲಿಟ್‌ನ ವ್ಯವಸ್ಥಾಪಕ ಟ್ರಸ್ಟಿ ಫಣಿಸಾಯಿ ಭಾರದ್ವಾಜ್ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry