ಗುರುವಾರ , ಜುಲೈ 29, 2021
25 °C

ದೇವಿ ಜಾತ್ರೆಯಲ್ಲಿ ಹೊನ್ನಾಟ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ತಾಲ್ಲೂಕಿನ ಇಟಗಿ ಗ್ರಾಮದೇವಿಯ ಜಾತ್ರೆಯ ಪ್ರಯುಕ್ತ ಎರಡು ದಿನಗಳ ಕಾಲ ನಡೆದ ಅದ್ದೂರಿ ಹಾಗೂ ವೈಭವದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.  ಭಾನುವಾರ ಮಧ್ಯಾಹ್ನ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ವೃತ್ತದಿಂದ ಪ್ರಾರಂಭವಾದ ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಯ್ದು ಸಾಯಂಕಾಲ ಊರಿನ ಗೌಡರ ಮನೆಯವರೆಗೆ ಬಂದು ತಂಗಿತ್ತು.ಸೋಮವಾರ ಮಧ್ಯಾಹ್ನ ಗೌಡರ ಮನೆಯಿಂದ ಶುರುವಾದ ರಥೋತ್ಸವ ದೇವಿಯ ಪಾದಗಟ್ಟೆಗೆ ಬಂದು ಮತ್ತೊಮ್ಮೆ ಹೊನ್ನಾಟದ ಮೂಲಕ ದೇವಿಯನ್ನು ರಥದಿಂದ ಕೆಳಗಿಳಿಸಿ ಪಾದಗಟ್ಟೆಯಲ್ಲಿ ಕೂಡಿಸಲಾಯಿತು.ಮಧ್ಯಾಹ್ನ ನಂದಗಡದ ಫಾಲಾಕ್ಷ ಸ್ವಾಮಿಗಳು ಮತ್ತು ಮುತ್ನಾಳದ ಶಿವಾನಂದ ಸ್ವಾಮಿಗಳು ರಥೋತ್ಸವಕ್ಕೆ ಸಾಂಪ್ರದಾಯಿಕ ಚಾಲನೆ  ನೀಡಿದರು. ಅಲ್ಲಿಂದ ಭಕ್ತ ಸಮೂಹದ ಹರ್ಷೋದ್ಘಾರಗಳ ಮಧ್ಯೆ ಡೊಳ್ಳು, ಮದ್ದಳೆ ಹಾಗೂ ವಾದ್ಯಮೇಳಗಳೊಂದಿಗೆ ಸಾಗಿದ ರಥವು ಊರಗೌಡರ ಮನೆಗೆ ಬಂದಾಗ ಕೊಂಚ ಮಳೆಸುರಿದು ಬಿಸಿಲಿನಿಂದ ಬಸವಳಿದಿದ್ದ ಜನರನ್ನು ತಂಪಾಗಿಸಿತು.ಸೋಮವಾರದಿಂದ ಐದು ದಿನಗಳ ಕಾಲ ದೇವಿಯು ಪಾದಗಟ್ಟೆಯಲ್ಲಿ ಆಸೀನಳಾಗುವ ಕಾರಣ ಗ್ರಾಮಸ್ಥರು ಹಾಗೂ ಭಕ್ದಾದಿಗಳು ದೇವಿಯ ಉಡಿ ತುಂಬುವರು ಮತ್ತು ದೇವಿಗೆ ಹಣ್ಣು, ಕಾಯಿ ಅರ್ಪಿಸುವರು.ದೇವಿಯ ಪಾದಗಟ್ಟೆಯ ಪಕ್ಕದಲ್ಲಿ ಹಾಕಿದ ಭವ್ಯ ಮಂಟಪದಲ್ಲಿ ಮಂಗಳವಾರದಿಂದ ವಿವಿಧ ಸಾಂಕೃತಿಕ ಕಾರ್ಯಕ್ರಮಗಳು, ನಾಟಕ-ಬಯಲಾಟಗಳು, ಅನುಭಾವ ಸಭೆಗಳು ಮತ್ತು ಧರ್ಮಸಭೆಗಳು ಜರುಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.