ಗುರುವಾರ , ಜೂನ್ 17, 2021
21 °C

ದೇವೇಗೌಡರ ಗೆಲುವು ಖಚಿತ– ವೈ.ಎಸ್‌.ವಿ.ದತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಗೆಲುವು ಖಚಿತವಾಗಿದ್ದು ಕಾರ್ಯ­ಕರ್ತರು ಹೆಚ್ಚಿನ ಬಹುಮತ ದೊರಕಿಸಿಕೊಡಲು ಶ್ರಮಿಸಬೇಕಿದೆಯಷ್ಟೇ ಎಂದು ಶಾಸಕ ವೈ.ಎಸ್‌.ವಿ.ದತ್ತ ತಿಳಿಸಿದರು.ಪಟ್ಟಣದ ಶೃಂಗೇರಿ ಶಾರದಾ ಸಭಾ ಭವನದಲ್ಲಿ ಬುಧವಾರ ಜೆಡಿಎಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ದೇವೇಗೌಡರು ಈ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸುವವರು ರಾಜ್ಯದ ಅಡಿಕೆ ಮತ್ತು ತೆಂಗು ಬೆಳೆಗಾರರ ಸಂಕಷ್ಟಕ್ಕೆ ಪುನಶ್ಚೇತನ ಒದಗಿಸಲು ಗೋರಖ್‌ಸಿಂಗ್‌ ನಿಯೋಗ ರಚನೆಗೆ ಯಾರು ಕಾರಣ ಎಂಬುದನ್ನು ಕೇಂದ್ರ ಕೃಷಿ ಸಚಿವ ಶರದ್‌ಪವಾರ್‌ ಅವರಿಂದ ತಿಳಿಯಲಿ. ದೇವೇ­ಗೌಡರು ಕಡೂರು ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಣಗಿದ ತೆಂಗಿನ ತೋಟಗಳಿಗೆ ಭೇಟಿ ನೀಡಿ ಕೃಷಿ ಸಚಿವರ ಗಮನ ಸೆಳೆದ ಪರಿಣಾಮವಾಗಿ ಇಂದು ತೆಂಗು ಬೆಳೆ ಪುನಶ್ಚೇತನ ನಿಧಿಯಾಗಿ ತಾಲ್ಲೂಕಿಗೆ 1.95ಕೋಟಿ ರೂ ಬಿಡುಗಡೆಯಾಗಿದೆ. ಸಾವಿರಾರು ರೈತರು ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಸಹಾಯಧನ ದೊರೆಯಲಿದೆ. ತಾವು ಶಾಸಕರಾದ ಮೇಲೆ ಕೇವಲ 9 ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ 35ಕೋಟಿ ರೂ ರಸ್ತೆ ಮತ್ತು ಸೇತುವೆ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದು ಕಾಂಗ್ರೆಸ್‌ನವರು ಬೇಕಿದ್ದರೆ ಚರ್ಚೆಗೆ ಬರಲಿ ಎಂದು ಸವಾಲೆಸೆದರು.ಕ್ಷೇತ್ರದ ಅದೃಶ್ಯ ಮತದಾರರು ತಮ್ಮ ಪಕ್ಷದ ಶಕ್ತಿಯಾಗಿದ್ದು ಜೆಡಿಎಸ್‌ ವಸ್ತುನಿಷ್ಠವಾಗಿ ಜಾತ್ಯತೀತ ಪಕ್ಷವೂ ಹೌದು. ಈ ಕಾರಣಕ್ಕಾಗಿಯೇ ರಾಜಕುಮಾರ್‌ ಕುಟುಂಬ ಜೆಡಿಎಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿದೆ. ಕ್ಷೇತ್ರದ ಜನರ ಪ್ರೀತಿ,ವಿಶ್ವಾಸವನ್ನು ನಮ್ಮಿಂದ ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಮಾಜಿ ಪ್ರಧಾನಿಯ ಹೆಗ್ಗಳಿಕೆ ಇದ್ದರೂ ದೇವೇಗೌಡರು ರಾಷ್ಟ್ರೀಯ ಮುಖಂಡರುಗಳ ಜೊತೆಯಲ್ಲಿ ಇದ್ದ ಸಮಯದಲ್ಲಿಯೂ ಕಾಳಜಿಯಿಂದ ಕಡೂರಿನ ಕುಗ್ರಾಮಗಳ ಕಾರ್ಯಕರ್ತರೊಂದಿಗೂ ಅದೇ ಸಮಯದಲ್ಲಿ ಸಂವಹನ ನಡೆಸಬಲ್ಲರು.ಕಾರ್ಯಕರ್ತರ ಪ್ರೀತಿ ಮತ್ತು ಬಲದಿಂದ ನಾವು ಈ ಚುನಾವಣೆ ಸಮರ್ಥವಾಗಿ ಎದುರಿಸಲಿದ್ದು ಗೆಲುವಿನ ಬಗ್ಗೆ ಸಂದೇಹವಿಲ್ಲ. ತೃತೀಯ ರಂಗ ಏನಾದರೂ ಪ್ರಬಲವಾಗಿ ಹೊರಹೊಮ್ಮಿದರೆ ದೇವೇಗೌಡರಿಗೆ ಪ್ರಧಾನಿ ಆಗಬಹುದಾದ ಅವಕಾಶಗಳ ಸಾಧ್ಯತೆಯೂ ಇದೆ. ನಾನು ಕ್ಷೇತ್ರದ ಬಹುತೇಕ ಹಳ್ಳಿಗಳನ್ನೂ ಭೇಟಿ ಮಾಡಿದ್ದು ಹಳ್ಳಿಗಳಲ್ಲಿ ಮೋದಿ ಹೆಸರೇ ಇಲ್ಲ, ದೇವೇಗೌಡರ ಗೆಲುವು ನಮ್ಮೆಲ್ಲರ ಗೆಲುವಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಪಕ್ಷದ ಮುಖಂಡ ವೈ.ಎಸ್‌.ರವಿಪ್ರಕಾಶ್‌ ಮಾತನಾಡಿ ದೇವೇಗೌಡರು ಶಾಸಕ ದತ್ತರಂತೆಯೇ ನಮ್ಮ ಜನರ ಸಮಸ್ಯೆಗಳನ್ನು ದೆಹಲಿ ಮಟ್ಟದಲ್ಲಿ ಬಿಂಬಿಸಿ ಪರಿಹಾರವನ್ನೂ ದೊರಕಿಸಬಲ್ಲರು. ಕಾರ್ಯಕರ್ತರು ಪಕ್ಷದ ಆಧಾರಸ್ತಂಭವಾಗಿದ್ದು ಮತದಾರರನ್ನು ಭೇಟಿಯಾಗಿ ಮನವೊಲಿಸಿದರೆ ದೇವೇಗೌಡರ ಗೆಲುವು ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಾಗುವುದಿಲ್ಲ. ದೇವೇ­ಗೌಡರು ಗೆದ್ದರೆ ಶಾಸಕ ದತ್ತ ಅವರ ಕೈ ಬಲಪಡಿಸಿದಂತೆ ಎಂದರು.ಜಿ.ಪಂ. ಸದಸ್ಯ ಬಿ.ಪಿ.ನಾಗರಾಜ್‌ ಮಾತನಾಡಿ, ಶಾಸಕ ದತ್ತ ಅವರ ಗೆಲುವಿಗೆ ಸ್ಪಂದಿಸಿದಂತೆ ಕಾರ್ಯಕರ್ತರು ದೇವೇಗೌಡರ ಗೆಲುವಿಗೂ ಶ್ರಮಿಸಬೇಕು. ನಮ್ಮ ವಿರೋಧಿಗಳು ದೇವೇಗೌಡರ ಕೊಡುಗೆ ಏನು ಎನ್ನುತ್ತಾರೆ, ಕ್ಷೇತ್ರಕ್ಕೆ ಈಗ ತಾನೇ ಬಂದವರಿಗೆ ಮತ್ತು ಎಲ್ಲೋ ಕುಳಿತವರಿಗೆ ಇಲ್ಲಿನ ವಿಷಯ ಹೇಗೆ ತಿಳಿಯಲು ಸಾಧ್ಯ? ಚುನಾವಣೆಗೆ ಮುನ್ನವೇ ನಾವು ಗೆದ್ದಿದ್ದು ವಿರೋಧಿಗಳ ಹತಾಶೆಯ ಪ್ರತೀಕ ಇದು ಎಂದರು.ತಾ.ಪಂ ಸದಸ್ಯ ನಿಂಗಪ್ಪ, ಭಂಡಾರಿ ಶ್ರೀನಿವಾಸ್‌, ಯಶೋದಮ್ಮ, ವಕೀಲ ತಿಪ್ಪೇಶ್‌, ಪಂಚನಹಳ್ಳಿಪಾಪಣ್ಣ, ಶೂದ್ರಶ್ರೀನಿವಾಸ್‌, ಸತೀಶ್‌ ಮುಂತಾದವರು ಮಾತನಾಡಿದರು.ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಬಿ.ಟಿ.ಗಂಗಾಧರನಾಯ್ಕ, ತಮ್ಮಣ್ಣ, ವಸಂತಾ ರಮೇಶ್‌, ರುಕ್ಸಾನಾ ಪರ್ವೀನ್‌, ಸೀಗೇಹಡ್ಲು ಹರೀಶ್‌, ಸೋಮಶೇಖರಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.