ಶನಿವಾರ, ಮಾರ್ಚ್ 6, 2021
21 °C

ದೇಸಿ ಅಕ್ಕಿ ಮೇಳಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಸಿ ಅಕ್ಕಿ ಮೇಳಕ್ಕೆ ಚಾಲನೆ

ಬೆಂಗಳೂರು: `ರೈತರು ಬೆವರಿಳಿಸಿ ಬೆಳೆಯುವ ಕೃಷಿ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುವ ಮೂಲಕ ಅವರ ಶ್ರಮವನ್ನು ಗೌರವಿಸಬೇಕು~ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು.



ನಗರದ ಬಸವಭವನದಲ್ಲಿ ಶುಕ್ರವಾರ ಆರಂಭವಾದ `ದೇಸಿ ಅಕ್ಕಿ ಮೇಳ~ವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಭತ್ತ ಅಂದರೆ ಅದು ಬರೀ ಭತ್ತವಷ್ಟೇ ಅಲ್ಲ. ಅದು `ಅನ್ನ ದೇವರು...~ ಎಂದು ಕವಿ ಬೇಂದ್ರೆಯವರು  ಕವಿತೆಯೊಂದರಲ್ಲಿ ಬಣ್ಣಿಸಿದ್ದಾರೆ~ ಎಂದರು.



ಪ್ರದರ್ಶನದಲ್ಲಿ ಇರಿಸಿದ್ದ ನೂರಾರು ವೈವಿಧ್ಯಮಯ ದೇಸಿ ಅಕ್ಕಿ ತಳಿಗಳ ಬಗ್ಗೆ ಪ್ರಸ್ತಾಪಿಸಿದ ಕಾಯ್ಕಿಣಿ, `ಅಕ್ಕಿಯಲ್ಲಿ ಇಷ್ಟೆಲ್ಲ ವೈವಿಧ್ಯವಿದೆ. ಅನ್ನದಲ್ಲಿ ಜೀವನದ ಸಹಜ ಮೌಲ್ಯಗಳಿವೆ. ಒಂದೊಂದು ವ್ಯಾಧಿಯ ಉಪಶಮನಕ್ಕೂ ಒಂದೊಂದು ತಳಿಯಿದೆ ಎಂಬುದೇ ನಮ್ಮ ಕೃಷಿ ಸಂಸ್ಕೃತಿಯ ಅಗಾಧ ಸಂಪತ್ತನ್ನು ಬಿಂಬಿಸುತ್ತದೆ.



ಇವುಗಳನ್ನು ಸಂರಕ್ಷಿಸಬೇಕಾದರೆ ಗ್ರಾಹಕರು ರೈತರ ಉತ್ಪನ್ನವನ್ನು ಖರೀದಿಸಲು ಮುಂದಾಗಬೇಕು~ ಎಂದು ಅವರು ಹೇಳಿದರು.



`ನನ್ನದು ಸಾಹಿತ್ಯ ಕ್ಷೇತ್ರ. ಕೃಷಿ ಕ್ಷೇತ್ರದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆದರೂ ಒಬ್ಬ ಗ್ರಾಹಕನಾಗಿ, ಕೃಷಿ ಸಂಸ್ಕೃತಿಯ ಆರಾಧಕನಾಗಿ, ಅನ್ನದ ಋಣ ತೀರಿಸಲೆಂದು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ~ ಎಂದರು.



ದೇಸಿ ಆಹಾರದ ಜಾಗೃತಿ: ಮೇಳದ ಉದ್ದೇಶ ವಿವರಿಸಿದ `ಸಹಜ ಆರ್ಗಾನಿಕ್ಸ್~ನ ನಿರ್ದೇಶಕ ಜಿ.ಕೃಷ್ಣಪ್ರಸಾದ್, `ಬೆಂಗಳೂರು ರೋಗಗಳ ಗೂಡಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ನಗರದಲ್ಲಿ ಶೇ 21ರಷ್ಟು ಮಧುಮೇಹಿಗಳಿದ್ದಾರೆ. ಮೂಲವ್ಯಾಧಿಯಿಂದ ಬಳಲುತ್ತಿರುವವರ ಸಂಖ್ಯೆಯೂ ಈಗೀಗ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಬದಲಾದ ಜೀವನಶೈಲಿ ಹಾಗೂ ನಾವು ಬಳಸುತ್ತಿರುವ ಪೌಷ್ಟಿಕಾಂಶ ರಹಿತ ಆಹಾರ~ ಎಂದರು.



`ರಾಜ್ಯದ ವಿವಿಧ ಭಾಗಗಳಿಂದ ಮೂವತ್ತಕ್ಕೂ ಹೆಚ್ಚು ದೇಸಿ ತಳಿ ಭತ್ತ ಸಂರಕ್ಷಕರು ತಾವು ಬೆಳೆದಿರುವ ತಳಿಗಳೊಂದಿಗೆ ಮೇಳಕ್ಕೆ ಆಗಮಿಸಿದ್ದಾರೆ. ಬೆಳೆಯುವ ರೈತರು ಹಾಗೂ ಬಳಸುವ ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ತಂದು ಮಾಹಿತಿ ವಿನಿಯಮ ಮಾಡಿಸುವುದು ಈ ಮೇಳದ ಉದ್ದೇಶ~ ಎಂದು ಅವರು ಹೇಳಿದರು.



ಇದೇ ಸಂದರ್ಭದಲ್ಲಿ 700ಕ್ಕೂ ಹೆಚ್ಚು ದೇಸಿ ಭತ್ತದ ತಳಿಗಳ ಸಂರಕ್ಷಿಸಿರುವ ಪಶ್ಚಿಮ ಬಂಗಾಳದ ರೈತ ವಿಜ್ಞಾನಿ ಡಾ.ದೇಬಲ್ ದೇವ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ನಮ್ಮ ದೇಶದಲ್ಲಿ 70ರ ದಶಕದಲ್ಲಿ 1.10 ಲಕ್ಷ ದೇಸಿ ಭತ್ತದ ತಳಿಗಳಿದ್ದವು. ಹಸಿರು ಕ್ರಾಂತಿಯ ನಂತರ ಈಗ ಉಳಿದಿರುವುದು ಕೇವಲ 6000 ತಳಿಗಳು ಎಂದು ವಿಷಾದಿಸಿದರು.



`ಕಾರ್ಪೊರೇಟ್ ವಲಯಗಳು ರೈತರ ಆಹಾರ ಮತ್ತು ಬೀಜ ಸಾರ್ವಭೌಮತ್ವವನ್ನು ನಾಶ ಮಾಡುತ್ತಿವೆ. ಈ ನಿಟ್ಟಿನಲ್ಲಿ ರೈತರು ಮತ್ತು ಗ್ರಾಹಕರು ಜಾಗೃತರಾಗಬೇಕು~ ಎಂದು ಕರೆ ನೀಡಿದರು.



`ಹಿರಿಯರು ಭತ್ತದ ಲಕ್ಷಾಂತರ ತಳಿಗಳನ್ನು ಸಂರಕ್ಷಿಸಿದ್ದರು. ಅವರ ಮುಂದೆ ನನ್ನ 700 ತಳಿಗಳ ಸಂರಕ್ಷಣೆ ಬಹು ದೊಡ್ಡ ಕೆಲಸವೇನಲ್ಲ~ ಎಂದು ಅವರು ವಿನಮ್ರತೆಯಿಂದ ನುಡಿದರು.



`ನಬಾರ್ಡ್~ನ ಭರತ್‌ಕುಮಾರ್ ಮಾತನಾಡಿ, `ರೈತ- ಗ್ರಾಹಕರ ನಡುವೆ ಉತ್ತಮ ಸೇತುವೆಯಾಗುವಂಥ ಇಂಥ ಮೇಳಗಳನ್ನು ಆಯೋಜಿಸಲು ನಬಾರ್ಡ್ ಸದಾ ಸಿದ್ಧ ಎಂದು ಭರವಸೆ ನೀಡಿದರು.



ತಳಿ ವೈವಿಧ್ಯ: ಮೂರು ದಿನಗಳ ಕಾಲ ನಡೆಯುವ `ದೇಸಿ ಅಕ್ಕಿ ಮೇಳದಲ್ಲಿ 17 ತಳಿಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. 200ಕ್ಕೂ ಹೆಚ್ಚು ದೇಸಿ ಭತ್ತದ ತಳಿಗಳು ಪ್ರದರ್ಶನದಲ್ಲಿದ್ದವು. ಸಿರಿಧಾನ್ಯಗಳಾದ ನವಣೆ, ಸಾಮೆ, ಸಜ್ಜೆ, ಹಾರಕ, ಬರಗು, ಊದಲು, ರಾಗಿ, ಜೋಳ ಹಾಗೂ ಅವುಗಳಿಂದ ತಯಾರಿಸಿದ ರುಚಿಕಟ್ಟಾದ ಖಾದ್ಯಗಳು ಪ್ರದರ್ಶನದಲ್ಲಿದ್ದವು. ಗುಲ್ಬರ್ಗ, ದಾವಣಗೆರೆ, ಹರಿಹರ, ಬಿಜಾಪುರ, ಮೈಸೂರು ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳಿಂದ ದೇಸಿ ಭತ್ತದ ತಳಿ ಸಂರಕ್ಷಕರು ಮೇಳದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.