ಮಂಗಳವಾರ, ಮೇ 18, 2021
30 °C

ದೇಸಿ ಬೀಜ ಬ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಕೃಷಿಕರು ಸ್ವಾವಲಂಬಿಗಳಾಗಿದ್ದರು. ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿಯೇ ಒಂದಷ್ಟನ್ನು ಬೀಜವಾಗಿ, ದನ ಕರುಗಳ ಸೆಗಣಿಯನ್ನು ಗೊಬ್ಬರವಾಗಿ ಬಳಸುತ್ತಿದ್ದರು.ಕ್ರಮೇಣ ಇಳುವರಿ ಹೆಚ್ಚಳ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ದೇಸಿ ಬೀಜಗಳ ಜಾಗವನ್ನು ಅಂತರರಾಷ್ಟ್ರೀಯ ಬೀಜ ಕಂಪೆನಿಗಳು ಆಕ್ರಮಿಸಿಕೊಂಡವು.

ಹೈಬ್ರಿಡ್ ಬೀಜಗಳ ಪರಿಣಾಮ ಒಂದಷ್ಟು ಇಳುವರಿ ಹೆಚ್ಚಳವಾಗಿದ್ದೇನೂ ನಿಜ.ಅವುಗಳ ಬೆನ್ನು ಹತ್ತಿದ ಪರಿಣಾಮ ಬಹುತೇಕ ದೇಸಿ (ಜವಾರಿ) ತಳಿಗಳು ಕಾಣೆಯಾದವು. ಒಂದು ಕಾಲದಲ್ಲಿ ಬೀಜಗಳ ಮಾಲೀಕರಾಗಿದ್ದ ರೈತರು ವಿದೇಶಿ ಕಂಪೆನಿಗಳ ಬೀಜಗಳಿಗಾಗಿ ಕಾಯುವಂತಾಯಿತು.ಮುಂಗಾರು ಆರಂಭವಾಯಿತು ಎಂದರೆ ಬೀಜಕ್ಕಾಗಿ ರೈತರು ದೊಡ್ಡ ಹೋರಾಟವನ್ನೇ ನಡೆಸಬೇಕಾದ ಸ್ಥಿತಿ ಬಂದಿದೆ. ಜೊತೆಗೆ ಆಹಾರದಲ್ಲಿನ ಸತ್ವವೂ ಕಡಿಮೆಯಾಯಿತು. ಇದರ ಪರಿಣಾಮ ಮನುಷ್ಯನ ಆರೋಗ್ಯದ ಮೇಲೂ ಆಗಿದೆ.ರೈತರು ಬೀಜಕ್ಕಾಗಿ ಎದುರಿಸುತ್ತಿರುವ ಸಮಸ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗುವುದನ್ನು ಮನಗಂಡಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಗುಂಡೇನಟ್ಟಿಯ ರೈತರು ಸಿದ್ದಾರೂಢ ಸಾವಯವ ಕೃಷಿಕರ ಬಳಗ ಹಾಗೂ ದೇಸಿ ಬೀಜ ಬ್ಯಾಂಕ್ ಆರಂಭಿಸಿದ್ದಾರೆ.ಈ ಬ್ಯಾಂಕ್‌ನಲ್ಲಿ ಭತ್ತದ 70, ಜೋಳದ ಆರು, ರಾಗಿ, ಬದನೆಕಾಯಿ, ಸವತೆಕಾಯಿಯ ತಲಾ ಮೂರು ತಳಿಗಳಿವೆ. ಕಡಲೆ, ಅವರೆ, ಚನ್ನಂಗಿ, ಕರಿ ಹೆಸರು, ಕರಿ ಉದ್ದು, ಸಾಸಿವೆ, ಹುರಳಿ, ಅಲಸಂದಿ, ನವಣಿ, ತೊಗರಿ, ತರಕಾರಿಯಲ್ಲಿ ಹಿರೇಕಾಯಿ, ಹಾಗಲಕಾಯಿ, ಕುಂಬಳಕಾಯಿ, ಪಡುವಲಕಾಯಿ, ಟೊಮ್ಯಾಟೊ, ಪಾಲಕ, ರಾಜಗಿರಿ, ಕಿರಕಸಾಲಿ ಸೇರಿದಂತೆ ಹಲವು ಬಗೆಯ ಜವಾರಿ ಬೀಜಗಳಿವೆ.2009 ರಿಂದ ದೇಸಿ ಬೀಜಗಳ ಸಂಗ್ರಹಣೆಯನ್ನು ಆರಂಭಿಸಲಾಗಿತ್ತು. 2011ರಲ್ಲಿ ಬೀಜ ಬ್ಯಾಂಕ್ ಆರಂಭಿಸುವ ಮೂಲಕ ಅದಕ್ಕೊಂದು ಸ್ಪಷ್ಟ ರೂಪ ನೀಡಲಾಯಿತು. ಭತ್ತದ ತಳಿಗಳಲ್ಲಿ ಕುಂಕುಮಸಾವೆ, ಕೊಣಸಾವೆ, ಅಂತರಸಾವೆ, ಮೊಗದ ಸುಗಂಧ, ಮೊಗದ ಸಿರಿ, ಕರಿಅಕ್ಕಲ ಸಾವೆ ಮುಂತಾದವು ಇವೆ.

 

ಜೋಳದಲ್ಲಿ ಗಂಗಾವತಿ ಜೋಳ, ನಂದ್ಯಾಲ, ಮಾಲಗಂಡಿ, ಸಕ್ಕರಿ-ಮುಕ್ಕರಿ, ಕಡಬಿನ ಜೋಳ ಮುಂತಾದ ತಳಿಗಳು ಬ್ಯಾಂಕಿನಲ್ಲಿವೆ.ಬೀಜ ಬ್ಯಾಂಕಿನಿಂದ ಒಬ್ಬರು ಒಂದು ಕಿಲೊ ಬೀಜ ತೆಗೆದುಕೊಂಡರೆ, ಬ್ಯಾಂಕಿಗೆ ಮರಳಿ ಎರಡು ಕಿಲೋದಷ್ಟು ಕೊಡಬೇಕು. ಪ್ರತಿ ರೈತರಿಂದ ಸಂಘದ ನಿರ್ವಹಣೆಗಾಗಿ 2 ರೂಪಾಯಿಯನ್ನು ಪಡೆದುಕೊಳ್ಳಲಾಗುತ್ತದೆ ಎನ್ನುತ್ತಾರೆ ಬ್ಯಾಂಕ್ ಸಂಚಾಲಕ ಶಂಕರ ಲಂಗಟಿ.ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಪ್ರತಿ ಗುರುವಾರ ದೇಸಿ ಬೀಜಗಳ ಉತ್ಪನ್ನಗಳ ಮಾರಾಟ ಮಾಡಲಾಗುತ್ತದೆ. ಜೊತೆಗೆ ಬೆಂಗಳೂರಿನ ಗ್ರೀನ್ ಫೌಂಡೇಶನ್ ಸಹ ಮಾರ್ಗದರ್ಶನ ಜೊತೆಗೆ ಮಾರುಕಟ್ಟೆ ಒದಗಿಸಿಕೊಟ್ಟಿದೆ.ದೇಸಿ ಅಕ್ಕಿ ತಳಿಗಳು ಔಷಧೀಯ ಗುಣಗಳನ್ನು ಹೊಂದಿವೆ. ಬಾಣಂತಿ, ಮಧುಮೇಹ, ನರ ದೌರ್ಬಲ್ಯದಿಂದ ಬಳಲುವವರಿಗಾಗಿ ಔಷಧಿ ಗುಣ ಹೊಂದಿದ ಕೆಲವು ತಳಿಗಳಿವೆ.ಟೈಫಾಯಿಡ್‌ನಿಂದ ಬಳಲುತ್ತಿರುವವರು ಅಕ್ಕಲಸಾವೆ ಅಕ್ಕಿಯ ಗಂಜಿ ಕುಡಿದರೆ ಉತ್ತಮ. ಹೆರಿಗೆ ನಂತರ ದಿನದಲ್ಲಿ ಬಾಣಂತಿಯರು ಬರಮಾ ಕಪ್ಪು ಅಕ್ಕಿ ಅನ್ನ ತಿಂದರೆ ಶಕ್ತಿ ಬರುತ್ತದೆ. ಕುಂಕುಮಸಾವೆ ಅಕ್ಕಿಯ ಗಂಜಿಯನ್ನು ಮೂಲವ್ಯಾಧಿ ಗುಣಪಡಿಸಲು ಬಳಸಲಾಗುತ್ತದೆ. ಕೆಂಪು ಅಕ್ಕಿಯ ಅನ್ನ ಮಧುಮೇಹದಿಂದ ಬಳಲುವವರಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.ಸಾವಯವ ಪದ್ಧತಿಯಲ್ಲಿ ಈ ಬೀಜಗಳನ್ನು ಬೆಳೆಯಲಾಗುತ್ತಿದೆ. ರೈತರಿಗಾಗಿ ಶಿಬಿರಗಳನ್ನೂ ನಡೆಸಲಾಗುತ್ತಿದೆ. ಜನರಲ್ಲಿ ದೇಸಿ ಬೀಜಗಳ ಬಗೆಗೆ ಜಾಗೃತಿ ಮೂಡಿಸಲು ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಜಾಥಾ ನಡೆಸಲಾಗಿದೆ. ಜಾಗೃತಿ ಮೂಡಿಸುವ ಕೆಲಸ ತೀವ್ರಗೊಳ್ಳಬೇಕಿದೆ ಎನ್ನುತ್ತಾರೆ ಬ್ಯಾಂಕ್ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಗಂಗಾಧರ ಮಡ್ಡಿಮನಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.