ಶನಿವಾರ, ಜೂನ್ 19, 2021
22 °C

ದೊಡ್ಡಬಳ್ಳಾಪುರ: ಕುಡಿಯುವ ನೀರಿನ ಯೋಜನೆ ನೆನೆಗುದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಕುಡಿಯುವ ನೀರಿನ ಯೋಜನೆ ನೆನೆಗುದಿಗೆ

ದೊಡ್ಡಬಳ್ಳಾಪುರ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದರೂ ತಾಲ್ಲೂಕಿನ ಜನತೆಗೆ ಕುಡಿಯುವ ನೀರಿನ ಯೋಜನೆಗಳ ಪರ್ಯಾಯ ವ್ಯವಸ್ಥೆ ನೆನೆಗುದಿಗೆ ಬಿದ್ದಿದೆ.  ತಾಲ್ಲೂಕಿನಲ್ಲಿ ಸರ್ಕಾರಿ ಲೆಕ್ಕಾಚಾರದ ಪ್ರಕಾರ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 800 ಮಿ.ಮೀ. ಇದರಲ್ಲಿ ಕನಿಷ್ಠ ಮಳೆಯಾದರೂ ಸಹಾ 650 ಮಿ.ಮೀ ನಷ್ಟು ಆಗುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ಮಳೆಯಾದರೂ ಸಹ ಅಂತರ್ಜಲದ ಮಟ್ಟ ಈ ವರ್ಷ 850 ಅಡಿಗೆ ತಲುಪಿದೆ. ತಾಲ್ಲೂಕಿನ ಸಾಸಲು ಹೋಬಳಿಯ ಸಾಸಲು, ಆರೂಢಿ, ತೋಡಲಬಂಡೆ, ಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗುಂಡುಮಗೆರೆ, ಮಾಕಳಿ, ಸೊಣ್ಣೇನಹಳ್ಳಿ, ಓಜೇನಹಳ್ಳಿ, ಮಲ್ಲಸಂದ್ರ, ಹೊಸಹಳ್ಳಿ, ವಾಬಸಂದ್ರ, ಹೊಸಕೋಟೆ ಮತ್ತು ಬಂಕೇನಹಳ್ಳಿ ಗ್ರಾಮಗಳನ್ನು ಹೊರತು ಪಡಿಸಿದರೆ ಉಳಿದ ನಾಲ್ಕು ಹೋಬಳಿಗಳಲ್ಲಿ ಅಂತರ್ಜಲದ ಮಟ್ಟ ಅತ್ಯಂತ ಹದಗೆಟ್ಟಿದೆ.ತಾಲ್ಲೂಕಿನ ಜನತೆ ಕುಡಿಯುವ ನೀರಿಗಾಗಿ ಏನೆಲ್ಲಾ ಪರದಾಡುತ್ತಿದ್ದರೂ ಚುನಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ನಿರಮ್ಮಳವಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ಮುಖಂಡ ಮುತ್ತೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಬೇಸಿಗೆಯಲ್ಲಿ ಸರ್ಕಾರ ನೀಡುವ ಹಣದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿಯೋ ಅಥವಾ ನೀರಿನ ಕೊರತೆ ಉಂಟಾಗಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಯೊ ತಾತ್ಕಾಲಿಕ ಶಮನ ಮಾಡುತ್ತಾರೆ. ಒಮ್ಮೆ  ಮಳೆ ಬರುತ್ತಿದ್ದಂತೆ ನೀರಿನ ಬವಣೆ ನೀಗಿತು ಎಂದು ಸುಮ್ಮನಾಗುತ್ತಾರೆ. ಆದರೆ ಭವಿಷ್ಯದಲ್ಲೂ ನೀರಿನ ಬವಣೆ ನೀಗಿಸಲು ಮಾತ್ರ ಯಾವುದೇ ಯೋಜನೆಗಳನ್ನು ರೂಪಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.ಪರ್ಯಾಯ ಏನು?: ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಕಷ್ಟು ಅವಕಾಶಗಳಿವೆ. ಗಡಿಭಾಗದ ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿ ತಾಲ್ಲೂಕಿನ ಮೂಲಕ ಹಾದು ಹೋಗುವುದೇ ಸಾಲು ಸಾಲು ಕೆರೆಗಳ ಮೂಲಕ. ಈ ಕೆರೆಗಳ ಅಂಚಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಫಿಲ್ಟರ್ ದಂಧೆಯನ್ನು ತಡೆಯುವ ಹಾಗೂ ರಾಜ ಕಾಲುವೆಗಳ ಒತ್ತುವರಿ ಗುರುತಿಸಲು ಸರ್ವೇ ಕೆಲಸ ಮೊದಲು ನಡೆಯಲಾಗಿದೆ.ಇದನ್ನು ಅನುಷ್ಠಾನಕ್ಕೆ ತಂದು ಕೆರೆಗಳಿಗೆ ಮಳೆ ನೀರು ಸರಾಗವಾಗಿ ಹರಿದು ಬರಲು ಅವಕಾಶ ಕಲ್ಪಿಸಬೇಕೆಂಬುದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಎನ್.ವೆಂಕಟರೆಡ್ಡಿ ಅವರ ಅನಿಸಿಕೆ.

ದೊಡ್ಡಬೆಳವಂಗಲ ಹೋಬಳಿ ತಿಪ್ಪೂರು ಬಳಿ ಬೆಟ್ಟ ಪ್ರದೇಶದಲ್ಲಿನ ಗೊರವೆ ಹಳ್ಳದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುವುದರಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರು ಸಂಗ್ರಹಿಸಲು ಅನುಕೂಲವಾಗಿದೆ.

 

ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚುವುದರಿಂದ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಬವಣೆ ನೀಗಲಿದೆ. ಹಾಗೆಯೇ ಎಸ್.ಎಸ್. ಘಾಟಿ ಕ್ಷೇತ್ರದಲ್ಲಿ 1917ರಲ್ಲಿ  ನಿರ್ಮಿಸಲಾಗಿರುವ ವಿಶ್ವೇಶ್ವರಯ್ಯ  ಪಿಕಪ್ ಡ್ಯಾಂ ನಿರ್ವಹಣೆ ಇಲ್ಲದೆ  ಹಾಳಾಗಿದೆ.ಫಿಲ್ಟರ್ ಮರಳು ದಂಧೆಕೋರರು ಡ್ಯಾಂಗೆ ಅಳವಡಿಸಿದ್ದ ಕ್ರೆಸ್ಟ್ ಗೇಟ್‌ಗಳನ್ನು ಮುರಿದು ಹಾಕಿ ನೀರು ನಿಲ್ಲದಂತೆ ಮಾಡಿದ್ದಾರೆ. ಮರಳು ಫಿಲ್ಟರ್ ಮಾಡುವುದರಿಂದ ಬರುವ ಕೆಸರು ಮಣ್ಣು ವಿಶ್ವೇಶ್ವರಯ್ಯ ಡ್ಯಾಂನಲ್ಲಿ ತುಂಬಿಕೊಂಡಿದೆ. ಇದರಿಂದಾಗಿ ಇವತ್ತು ದನಗಳಿಗೂ ಸಹಾ ಕುಡಿಯಲು ನೀರು ನಿಲ್ಲದಂತಾಗಿದೆ ಎನ್ನುವ ಡಾ.ಎನ್.ವೆಂಕಟರೆಡ್ಡಿ, ತಾಲ್ಲೂಕಿನ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಒಂದು ಕೋಟಿ ರೂಗಳ ವೆಚ್ಚವಾಗಬಹುದು. ಇದರಿಂದ ಭವಿಷ್ಯದಲ್ಲಿ ತಾಲ್ಲೂಕಿನ ಬಹುತೇಕ ಗ್ರಾಮಗಳ ಕುಡಿಯುವ ನೀರಿನ ಬವಣೆ ನೀಗುತ್ತದೆ ಎನ್ನುತ್ತಾರೆ.ಪೂರ್ಣಗೊಳ್ಳದ ಜಕ್ಕಲಮಡಗು: ನಗರಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ 22 ಕೋಟಿ ರೂಗಳ ಜಕ್ಕಲಮಡಗು ಯೋಜನೆ ಕಾಮಗಾರಿ ಆರಂಭವಾಗಿ ಅರ್ಧ ದಶಕವೇ ಕಳೆದಿದ್ದರೂ ಕಾಮಗಾರಿ ಇನ್ನೂ ಮುಕ್ತಾಯವಾಗುವ ಸೂಚನೆಗಳೇ ಕಾಣುತ್ತಿಲ್ಲ.ತಜ್ಞರ ವರದಿಯಂತೆ ಜಲಾಶಯದ ಗೋಡೆಯನ್ನು 9 ಮೀಟರ್ ಎತ್ತರಿಸಲು ಹಾಗೂ ಜಲಾಶಯದಲ್ಲಿ 3 ಮೀಟರ್ ಹೂಳೆತ್ತುವ ಯೋಜನೆಯನ್ನು ಜಲಮಂಡಳಿಯವರು ಹಮ್ಮಿಕೊಂಡಿದ್ದಾರೆ.`ಕಾಮಗಾರಿ ಪೂರ್ಣವಾದ ನಂತರ 4120 ದಶ ಲಕ್ಷ ಲೀಟರ್ ನೀರು ಸಂಗ್ರಹವಾಗಲಿದ್ದು ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರಗಳಿಗೆ ನೀರು ದೊರೆಯುತ್ತದೆ ಎಂಬ ಭರವಸೆ ಇಡಲಾಗಿದೆ. ಆದರೆ ನಗರಕ್ಕೆ ಕುಡಿಯುವ ನೀರು ಮಾತ್ರ ಬರುವ ಯಾವ ಲಕ್ಷಣಗಳು ಕಾಣುತ್ತಿಲ್ಲ~ ಎನ್ನುತ್ತಾರೆ ನಗರಸಭಾ ಸದಸ್ಯ ವಡ್ಡರಹಳ್ಳಿ ರವಿ.`2011 ರ ಜನಗಣತಿಯಂತೆ 85 ಸಾವಿರ ಜನ ಸಂಖ್ಯೆ ಇರುವ ನಗರಕ್ಕೆ ಈಗ 90 ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಫೆಬ್ರುವರಿ ಮಾಹೆ ಅಂತ್ಯಕ್ಕೆ 16 ಕೊಳವೆ ಬಾವಿಗಳ ಅಂತರ್ಜಲ ಬತ್ತಿಹೋಗಿವೆ.ಇಂತಹ ಸ್ಥಿತಿಯಲ್ಲಿ ತಾಲ್ಲೂಕಿನಲ್ಲಿ ದೊರೆಯಬಹುದಾದ ಸಣ್ಣ ಪ್ರಮಾಣದ ನೀರು ಬಳಕೆಗೆ ತಾಲ್ಲೂಕು ಆಡಳಿತ ಮುಂದಾಗಬೇಕು ಹಾಗೂ ನಗರದಲ್ಲಿನ ಎಲ್ಲಾ ಕಟ್ಟಡಗಳಿಗೂ ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸಬೇಕು ಇಲ್ಲವಾದರೆ ಜಕ್ಕಲಮಡಗು ಕೆರೆಯಿಂದ ನೀರು ತಂದರೂ ಸಹ ನಗರದ ನೀರಿನ ಬವಣೆ ನೀಗಲು ಸಾಧ್ಯವೇ ಇಲ್ಲ~ ಎನ್ನುತ್ತಾರೆ ಅವರು.

  -

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.