ಭಾನುವಾರ, ಮೇ 16, 2021
21 °C

ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಘಂಟೆ, ಗೆಜ್ಜೆನಾದ ಪವಾಡ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನಗರದ ಕಲ್ಲು ಮಂಟಪ ರಸ್ತೆಯಲ್ಲಿನ ದೊಡ್ಡಬಸವೇಶ್ವರ ದೇವ ಸ್ಥಾನದಲ್ಲಿ ಭಾನುವಾರ ರಾತ್ರಿ ತನ್ನಿಂದ ತಾನೆ ಘಂಟೆ ಅಲುಗಾಡಿದ ಹಾಗೂ ಗೆಜ್ಜೆನಾದದ ಸದ್ದು ಕೇಳಿ ಬಂದಿದೆ ಎನ್ನುವ ಸುದ್ದಿ ನಗರದಾದ್ಯಂತ ಹಬ್ಬಿದ್ದರಿಂದ ಸೋಮವಾರ ಬೆಳಿಗ್ಗೆ ಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂದಿತು.ಕೇವಲ ಭಕ್ತರು ಅಷ್ಟೇ ಅಲ್ಲದೇ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಸಹ ಬೆಳಿಗ್ಗೆಯೇ ಬಸವೇಶ್ವರ ಮೂರ್ತಿಗೆ ವಿಶೇಷ ರುದ್ರಾಭಿಷೇಕ ಮಾಡಿಸಿದ್ದಾರಲ್ಲದೇ, ಸಾಯಂಕಾಲ ದಿಂದ ರಾತ್ರಿವರೆಗೆ ಭಜನೆ ಹಾಗೂ ಪ್ರಸಾದ ವಿತರಣೆ ಮಾಡಿದರು.ದೇವಸ್ಥಾನದಲ್ಲಿ ಘಂಟೆಗಳು ಅಲುಗಾಡಿದ ಹಾಗೂ ಗೆಜ್ಜೆನಾದ ಕೇಳಿ ಬಂದಿದ್ದನ್ನು ದೇವಸ್ಥಾನದ ಸೇವಾ ಸಮಿತಿಯವರು ಭಿತ್ತಿ ಪತ್ರದ ರೂಪ ದಲ್ಲಿ ದೇವಸ್ಥಾನದ ಹೊರ ಹಾಗೂ ಒಳಗೋಡೆಗೆ ಅಂಟಿಸಿದ್ದಾರೆ. ಭಕ್ತರು ಗುಂಪು ಗುಂಪಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಎದುರು ಪೆಂಡಾಲ್ ಹಾಕಲಾಗಿತ್ತಲ್ಲದೇ ತಳಿರು ತೋರಣದಿಂದ ದೇವಸ್ಥಾನವನ್ನು ಸಿಂಗರಿಸಲಾಗಿತ್ತು.ಭಾನುವಾರ ರಾತ್ರಿ ಘಂಟೆ ಹಾಗೂ ಗೆಜ್ಜೆನಾದ ಗಮನಿಸಿರುವ ಓಣಿಯ ಕೆಲ ಮಕ್ಕಳು, ಸೋಮವಾರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಹಿಂದಿನ ದಿನ ರಾತ್ರಿ ಕಂಡ ಹಾಗೂ ಕೇಳಿದ ಘಟನೆ ಯನ್ನು ವಿವರಿಸುತ್ತಿರುವುದು ಹಾಗೂ ಅದನ್ನು ಕುತೂಹಲದಿಂದ ಕೇಳಿ ಇದೊಂದು ಬಸವೇಶ್ವರನ ದೈವಿ ಪವಾಡ ಎಂದು ಹೇಳುತ್ತಿರುವುದು ಸಾಮಾನ್ಯವಾಗಿತ್ತು.ಆರತಿ, ಹೂವುಗಳೊಂದಿಗೆ ದೇವ ಸ್ಥಾನಕ್ಕೆ ಆಗಮಿಸಿದ ಮಹಿಳೆಯರು ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸುವುದರ ಜೊತೆಗೆ ಗೆಜ್ಜೆನಾದ ಕೇಳಿಬಂದ ಕೋಣೆಗೆ ತೆರಳಿ ಕಿವಿಗೊಟ್ಟು ಗೆಜ್ಜೆ ಸದ್ದು ಕೇಳಿಸುತ್ತಿದೆಯೇ ಎಂಬು ದನ್ನು ಪರೀಕ್ಷಿಸುತ್ತಿದ್ದರಲ್ಲೇ, ಭಕ್ತಿ ಭಾವದಿಂದ ದೇವಸ್ಥಾನದಲ್ಲಿ ಕೆಲ ಹೊತ್ತು ಕುಳಿತು ಹೋಗುತ್ತಿರುವ ದೃಶ್ಯ ಕಂಡು ಬಂದಿತು.ಘಟನೆ ಹಿನ್ನೆಲೆ: ನಗರದ ಕಲ್ಲು ಮಂಟಪ ರಸ್ತೆಯಲ್ಲಿರುವ ಪ್ರಾಚೀನ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಕೆಲ ಮಕ್ಕಳ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಒಂದು ಕೋಣೆ ಗೆಜ್ಜೆನಾದ ಕೇಳಿ ಬಂದಿದೆ. ಅದೇ ಸಮಯಕ್ಕೆ ದೇವಸ್ಥಾನದಲ್ಲಿರುವ ಮೂರು ಘಂಟೆಗಳು ತಮ್ಮಿಂದ ತಾವು ಅಲುಗಾಡಲು ಆರಂಭಿಸಿವೆ.ಈ ಘಟನೆಯಿಂದ ಹೆದರಿದ ಮಕ್ಕಳು ದೇವಸ್ಥಾನದಿಂದ ಹೊರಗೆ ಓಡಿ ಓಣಿಯಲ್ಲಿರುವ ಕೆಲ ಹಿರಿಯರಿಗೆ ತಿಳಿಸಿದ್ದಾರೆ. ಅವರು ಸಹ ದೇವಸ್ಥಾನಕ್ಕೆ ಆಗಮಿಸಿದಾಗ ಕಿಲಿ ಹಾಕಿರುವ ಕೋಣೆ ಯಿಂದ ಗಲ್ ಗಲ್ ಎನ್ನುವ ಗೆಜ್ಜೆ ಸದ್ದು ಕೇಳಿ ಬಂದಿದೆ. ಯಾರೂ ಮುಟ್ಟ ದಿದ್ದರೂ ಘಂಟೆಗಳು ಅಲುಗಾಡು ತ್ತಿರುವ ದೃಶ್ಯವನ್ನು ಅವರು ಕಂಡಿದ್ದಾರೆ.ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಕೋಣೆ ಎದುರು ನಿಂತುಕೊಂಡು `ಒಳಗೆ ಇರುವವರು ಯಾರು ಹೊರಗೆ ಬರ‌್ತಿರಾ ಇಲ್ಲಾ ನಾನೇ ಬರಲಾ~ ಎಂದು ಹೇಳಿದ್ದಾನೆ. ಆಗ ಕೋಣೆ ಒಳಗಿನಿಂದ ಹೆಣ್ಣು ಧ್ವನಿಯೊಂದು ಆ ವ್ಯಕ್ತಿಗೆ `ಬಾ ಒಳಗೆ ನೀ ಎನಾಗ್ತಿಯಾ ಅಂತಾ ಗೊತ್ತಾಗುತ್ತೆ~ ಎಂದು ಹೇಳಿದೆ.ಕೀಲಿ ಹಾಕಿರುವ ಕೋಣೆಯೊಳಗಿಂದ ಬರುವ ಧ್ವನಿಯಾರದು, ಯಾರಿದ್ದಾರೆ ಎಂದು ಹತ್ತಿರ ಹೋಗಿ ಕೋಣೆಯ ಬಾಗಿಲು ಬಡಿದಿದ್ದಾರೆ. ಆಗ ಗೆಜ್ಜೆಯ ಸದ್ದು ನಿಂತಿದೆ. ಸ್ವಲ್ಪ ಹೊತ್ತಿನಲ್ಲಿ ಮತ್ತೆ ಆರಂಭವಾಗಿದೆ. ನಂತರ ಕೋಣೆ ಕೀಲಿ ತೆಗೆದು ನೋಡಿದ್ದಾರೆ. ಆದರೆ, ಕೋಣೆಯಲ್ಲಿ ಯಾರೂ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಬಾಲಕ ಬಸವರಾಜ ತಿಳಿಸುತ್ತಾರೆ.ಈ ಸುದ್ದಿ ಆಗಲೇ ಓಣಿಯಲ್ಲಿ ಹರಡಿದ್ದರಿಂದ ಮಹಿಳೆಯರು ಮಕ್ಕಳು ಎನ್ನದೇ ನೂರಾರು ಜನರು ದೇವಸ್ಥಾನಕ್ಕೆ ಬಂದು ಘಂಟೆ ಅಲುಗಾಡುವುದನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಇನ್ನೂ ಕೆಲವರು ಗಾಳಿಗೆ ಘಂಟೆಗಳು ಅಲುಗಾಡುತ್ತಿರಬಹುದು ಎಂದು ಶಂಕಿಸಿ ದೇವಸ್ಥಾನದ ಕದಗಳನ್ನು ಹಾಕಿದ್ದಾರೆ. ಆಗಲೂ ಗಂಟೆಗಳು ಮತ್ತೆ ಜೋರಾಗಿ ಅಲುಗಾಡಲು ಆರಂಭಿಸಿವೆ. ಇದು ರಾತ್ರಿ 9.30ರಿಂದ ರಾತ್ರಿ 12 ರವರೆಗೆ ನಡೆದಿದೆ.ಆಗ ದೇವಸ್ಥಾನದ ಸೇವಾ ಸಮಿತಿ ಕೆಲ ಸದಸ್ಯರು ರಾತ್ರಿ ಸಮಯದಲ್ಲಿಯೇ ನಗರದ ಹರಸೂರ ಬಣ್ಣದ ಮಠದ ಶ್ರೀಗಳನ್ನು ದೇವಸ್ಥಾನಕ್ಕೆ ಕರೆಯಿಸಿ ಘಟನೆಯನ್ನು ವಿವರಿಸಿದ್ದಾರೆ. ಬಹಳಷ್ಟು ಜನರು ಕಣ್ಣಾರೆ ಘಟನೆಯನ್ನು ಕಂಡಿದ್ದಾರೆ. ಇದನ್ನು ವದಂತಿ ಎನ್ನಲಾಗುವುದಿಲ್ಲ.ಇದರಲ್ಲಿ ದೈವಿಶಕ್ತಿ ಇರಲೇಬೇಕು. ಆದರೆ, ಅದು ಒಳ್ಳೆದಕ್ಕೂ ಆಗಬಹುದು, ಕೆಟ್ಟದ್ದಕ್ಕೂ ಆಗಬಹುದು. ಸೋಮವಾರ ಬೆಳಿಗ್ಗೆ ಬಸವಣ್ಣನ ಮೂರ್ತಿಗೆ ರುದ್ರಾಭಿಷೇಕ ಮಾಡುವಂತೆ ಶ್ರೀಗಳು ಸಲಹೆ ಮಾಡಿದ್ದರು ಎಂದು ಸೇವಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಹತ್ತಿಮತ್ತೂರ ತಿಳಿಸಿದ್ದಾರೆ.ಅವರ ಸಲಹೆಯಂತೆ ಸೇವಾ ಸಮಿತಿ ಸೋಮವಾರ ಸಿಂದಗಿ ಮಠದ ಐವರು ವಟುಗಳನ್ನು ಕರೆಯಿಸಿ ಬಸವೇಶ್ವರ ಮೂರ್ತಿಗೆ ವಿಶೇಷ ರುದ್ರಾಭಿಷೇಕ ಮಾಡಿಸಲಾಗಿದೆ. ಸಂಜೆಯಿಂದ ರಾತ್ರಿವರೆಗೆ ಭಜನೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇದಷ್ಟೇ ಅಲ್ಲದೇ ದೇವಸ್ಥಾನದಲ್ಲಿ ರುವ ದೊಡ್ಡಬಸವೇಶ್ವರ ಹಾಗೂ ಕುರವತ್ತಿ ಬಸವಣ್ಣ ಇಬ್ಬರೂ ಅಣ್ಣ ತಮ್ಮಂದಿರು. ಪ್ರತಿ ವರ್ಷ ಕುರವತ್ತಿ ಬಸವೇಶ್ವರ ಜಾತ್ರೆ ದಿನದಂದೂ ಈ ದೇವಸ್ಥಾನದಲ್ಲಿ ತನ್ನಿಂದ ತಾಣೆ ಘಂಟೆ ಬಾರಿಸುವುದನ್ನು ಭಕ್ತರು ಕಂಡಿದ್ದಾರೆ ಎಂದು ಅವರು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.