`ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಯತ್ನ'
ಬೆಂಗಳೂರು: ರಾಜ್ಯದ ದ್ರಾಕ್ಷಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸಾಲ ಮನ್ನಾ ಮಾಡಲು ಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸಚಿವರಾದ ಎಂ.ಬಿ.ಪಾಟೀಲ, ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಸದಸ್ಯರು ಗುರುವಾರ ಸಲ್ಲಿಸಿದ ಮನವಿ ಸ್ವೀಕರಿಸಿದ ಅವರು, ಈ ಬಗ್ಗೆ ವಿವರವಾದ ಪ್ರಸ್ತಾವವನ್ನು ಸಿದ್ಧಪಡಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಸ್ತಾವ ಸಿದ್ಧವಾದ ತಕ್ಷಣ ಕೇಂದ್ರದ ಜತೆ ಮಾತನಾಡುವುದಾಗಿ ತಿಳಿಸಿದರು.
ಮನವಿ: ಸತತ 10 ವರ್ಷಗಳ ಬರ, ಒಂದು ವರ್ಷದ ಅತಿವೃಷ್ಟಿಯಿಂದ ದ್ರಾಕ್ಷಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅವರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು ಎಂದು ನಿಯೋಗ ಮನವಿ ಮಾಡಿತು. ವಿಶೇಷವಾಗಿ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರರು ಬೆಳೆಗೆ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗದೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ಸಂಘದ ಮುಖಂಡರು ಹೇಳಿದರು.
`ಈ ಹಿಂದೆ ಕೇಂದ್ರ ಸರ್ಕಾರ ರೂ70,000 ಕೋಟಿ ಮೊತ್ತದ ರೈತರ ಸಾಲ ಮನ್ನಾ ಮಾಡಿದ್ದರೂ ಅದರ ಲಾಭ ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ದೊರೆತಿಲ್ಲ. 10 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವ ರೈತರ ಶೇ 25ರಷ್ಟು ಸಾಲ ಮನ್ನಾ ಮಾಡಿ, ಶೇ 75ರಷ್ಟನ್ನು ರೈತರೇ ಭರಿಸಬೇಕು ಎಂದು ಕೇಂದ್ರ ಷರತ್ತು ವಿಧಿಸಿತ್ತು. ಬರಗಾಲದ ಹಿನ್ನೆಲೆಯಲ್ಲಿ ಅದರ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ' ಎಂದರು.
`ವಿದರ್ಭ ಮಾದರಿ ನೆರವಿನ ಪ್ಯಾಕೇಜ್ನಲ್ಲಿ ಸಹ ಅಧಿಕಾರಿಗಳ ತಪ್ಪಿನಿಂದ ವಿಜಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ ಸಾಲ ಮನ್ನಾ ಮಾಡಿಸಲು ಕ್ರಮ ಕೈಗೊಳ್ಳಬೇಕು' ಎಂದು ವಿನಂತಿಸಿದರು.
ದ್ರಾಕ್ಷಿ ಬೆಳೆಗಾರರ ಸಂಘದ ಅಭಯ ನಾಂದ್ರೇಕರ, ಡಾ. ಕೆ.ಎಚ್.ಮುಂಬಾರಡ್ಡಿ, ಕೆ.ಆರ್.ಮೆಂಡೆಗಾರ, ಸದಾಶಿವ ಗುದಿಗೆಣ್ಣವರ, ಸೋಮನಾಥ ಬಾಗಲಕೋಟೆ, ವಾಮನ ಮಹಿಷಿ, ಸಿದ್ದು ಬಿರಾದಾರ, ಧರ್ಮಣ್ಣ ಬೀಳೂರ ಇತರರು ನಿಯೋಗದಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.