ಗುರುವಾರ , ಏಪ್ರಿಲ್ 15, 2021
22 °C

ದ್ವಿತೀಯ ಪಿಯು ಪರೀಕ್ಷೆ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ವಸ್ತ್ರದ್.ಪರೀಕ್ಷಾ ಲೋಪಕ್ಕೆ ಮುಖ್ಯಸ್ಥರೇ ಹೊಣೆ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆಗಳಲ್ಲಿ, ನಕಲು ಅಥವಾ ಇನ್ಯಾವುದೇ ಲೋಪ-ದೋಷ ಉಂಟಾದರೆ ಅದಕ್ಕೆ ಆ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನೇ ಹೊಣೆ ಮಾಡಿ ಅವರನ್ನು ಸೇವೆಯಿಂದಲೇ ವಜಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಎಚ್ಚರಿಕೆ ನೀಡಿದರು.ನಗರದ ಗುರುವಾರ ಪದವಿಪೂರ್ವ ಮತ್ತು ವೃತ್ತಿಶಿಕ್ಷಣ ಇಲಾಖೆ ಆಯೋಜಿಸಿದ್ದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ - 2011ರ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದ್ವಿತೀಯ ಪಿಯು ಪರೀಕ್ಷೆಗಳು ಇದೇ ತಿಂಗಳ 17ರಿಂದ 30ರವರೆಗೆ ರಾಜ್ಯಾದ್ಯಂತ ನಡೆಯಲಿವೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರೀಕ್ಷಾ ನಕಲು ಅಥವಾ ಇನ್ಯಾವುದೇ ರೀತಿಯ ಅವ್ಯವಹಾರಗಳು ವಿದ್ಯಾರ್ಥಿಗಳಿಂದಾಗಲಿ ಅಥವಾ ಪರೀಕ್ಷಾ ಮೇಲ್ವಿಚಾರಕರಿಂದಾಗಲಿ ಕಂಡುಬಂದಲ್ಲಿ ಆ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನೇ ಹೊಣೆಮಾಡಿ ಅಮಾನತು ಮಾಡಲಾಗುವುದು ಎಂದರು.ಹಾಗಾಗಿ, ಪರೀಕ್ಷಾ ಕೇಂದ್ರದವರು ವಿದ್ಯಾರ್ಥಿಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಬೇಕು, ಮೇಲ್ವಿಚಾರಕರಿಗೆ ಉತ್ತಮವಾದ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಎಲ್ಲಾ ಕೇಂದ್ರಗಳಲ್ಲೂ ಪರೀಕ್ಷೆಗಳು ಸುಸೂತ್ರವಾಗಿ ನಡೆಯುವಂತೆ ಪರೀಕ್ಷಾ ಕೊಠಡಿಗಳಲ್ಲಿ ಸುಸಜ್ಜಿಪಿಠೋಪಕರಣಗಳಿರಬೇಕು. ಸಮಯ ಮೀರಿ ಬಂದ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನೀಡಬಾರದು. ನಕಲು ತಡೆಗಟ್ಟಲು ವೀಡಿಯೊ ಕ್ಯಾಮೆರಾ ಬಳಸುವಂತೆ ಹೇಳಿದರು.ಜಿ.ಪಂ. ಸಿಇಒ ಗುತ್ತಿ ಜಂಬುನಾಥ್ ಮಾತನಾಡಿ, ಪುನರಾವರ್ತಿತ ಪರೀಕ್ಷಾರ್ಥಿಗಳು ನಕಲು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಕಾಲೇಜುಗಳಲ್ಲಿ ಪುನರ್‌ಮನನ ತರಗತಿಗಳನ್ನು ಹಮ್ಮಿಕೊಳ್ಳಬೇಕು, ನಕಲು ಮಾಡಿದಲ್ಲಿ ಶಿಕ್ಷೆಯ ಪ್ರಮಾಣವನ್ನು ತಿಳಿಸಬೇಕು. ಪುನಾರಾವರ್ತಿತ ಪರೀಕ್ಷಾರ್ಥಿಗಳಿಗೆ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರುದ್ರಮುನಿ ಮಾತನಾಡಿ, ವಿದ್ಯಾರ್ಥಿಗಳ ಗುರುತಿನ ಚೀಟಿಗೆ ಸಹಿ ಮಾಡುವ ಮೊದಲು ಪ್ರಾಂಶುಪಾಲರು ಖಾತ್ರಿ ಮಾಡಿಕೊಳ್ಳಬೇಕು, ಇಲ್ಲದಿದ್ದಲ್ಲಿ ಆ ಪ್ರಾಂಶುಪಾಲರೇ ಹೊಣೆಗಾರರು. ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರು ಕೊರತೆ ಇರುವ ಕೆಲವು ತಾಲ್ಲೂಕುಗಳಲ್ಲಿ ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಇಲಾಖೆ ಆದೇಶ ನೀಡಿದೆ. ಅದರಂತೆ ಸಂಬಂಧಿಸಿದ ಇಲಾಖೆಯ ನೆರವನ್ನು ಕೋರಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ತಪಾಸಣೆಗೆ ತನಿಖಾ ದಳ: ಪರೀಕ್ಷಾ ಕೇಂದ್ರಗಳನ್ನು ತಪಾಸಣೆ ಮಾಡಲು ಇದೇ ಮೊದಲ ಬಾರಿಗೆ ಪ್ರತಿ ಜಿಲ್ಲೆಗೆ ರಾಜ್ಯಮಟ್ಟದಿಂದ ಎರಡು ತನಿಖಾದಳವನ್ನು ನೇಮಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಪ್ರತಿ ತಾಲ್ಲೂಕು ಹಾಗೂ ಅದರ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಮಟ್ಟದ ಒಬ್ಬರು ಮತ್ತು 6 ತಾಲ್ಲೂಕು ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ತಾಲ್ಲೂಕುಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು  ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ, ಡಿವೈಎಸ್‌ಪಿ ಎಸ್.ಎಸ್. ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೃಷ್ಣಾಸಿಂಗ್. ಎಲ್. ಶಂಕರ್ ನಾಯಕ್, ಷಣ್ಮುಖಪ್ಪ ಹಾಜರಿದ್ದರು.ಕ್ರಷರ್ ಬಂದ್: ಆರೋಪ

ಕಲ್ಲು ಪುಡಿ ಮಾಡುವ ಕ್ರಷರ್‌ಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ನ್ಯಾಯಾಲಯ ನೀಡಿರುವ ಆದೇಶ ಪಾಲನೆ ಹಿನ್ನೆಲೆಯಲ್ಲಿ ಕ್ರಷರ್‌ಗಳ ಕಾರ್ಯ ಸ್ಥಗಿತವಾಗಿದ್ದು, ಸಾವಿರಾರು ಕಲ್ಲು ಕ್ವಾರಿ ಹಾಗು ಕ್ರಷರ್‌ನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಬೀದಿಪಾಲಾಗಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಆರೋಪಿಸಿದೆ.ಕ್ರಷರ್‌ಗಳ ಸ್ಥಳಾಂತರಕ್ಕೆ ಸ್ಥಳ ಗುರುತಿಸಿ, ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿರುವ ಪಕ್ಷದ ಜಿಲ್ಲಾ ವಕ್ತಾರ ಶ್ರಿನಿವಾಸ ಬಸಾಪತಿ,   ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

32 ಕೇಂದ್ರಗಳು

 ದಾವಣಗೆರೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 32 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.  ಅವುಗಳಲ್ಲಿ 23,097 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ 12,624 ಮಂದಿ ಬಾಲಕರು. 10,473 ಬಾಲಕಿಯರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.