ಶನಿವಾರ, ಜನವರಿ 25, 2020
29 °C

ಧರೆಗುರುಳಿದ 44 ಮರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ ಒಟ್ಟು 44 ಮರಗಳು ಧರೆಗುರಳಿವೆ. ಮಳೆಯಿಂದಾದ ತೊಂದರೆಯ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಶುಕ್ರವಾರ ರಾತ್ರಿ ಒಟ್ಟು 472 ದೂರುಗಳು ಬಂದಿವೆ.ಶೇಷಾದ್ರಿಪುರ, ಕತ್ತರಿಗುಪ್ಪೆ ಬಿಗ್ ಬಜಾರ್ ಬಳಿ, ಹನುಮಂತನಗರ, ಬ್ಯಾಂಕ್ ಕಾಲೊನಿ, ಹಲಸೂರು, ಶ್ರಿನಿವಾಸನಗರ, ಶಿವಾಜಿನಗರ ಸೇರಿದಂತೆ ಹಲವೆಡೆ ಮರಗಳು ಬಿದ್ದಿವೆ. ಪ್ರಕಾಶನಗರ, ರಾಜಾಜಿನಗರ ಕೈಗಾರಿಕಾ ಪ್ರದೇಶ, ಸಾರಕ್ಕಿ, ಬನಶಂಕರಿ, ಜಯನಗರ, ಜೆ.ಪಿ.ನಗರ, ಪದ್ಮನಾಭನಗರ, ಗುಬ್ಬಲಾಳ, ಉತ್ತರಹಳ್ಳಿ, ದೀಪಾಂಜಲಿನಗರ, ಕೆಂಗೇರಿ, ಬಾಪೂಜಿನಗರ, ಸುಮನಹಳ್ಳಿ, ಹೊಂಗಸಂದ್ರ, ಕೊಡಿಗೇಹಳ್ಳಿ ಕ್ರಾಸ್, ಗಾಳಿ ಆಂಜನೇಯ ದೇವಸ್ಥಾನ , ಸುಧಾಮನಗರ ಸೇರಿದಂತೆ ಹಲವು ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಬಗ್ಗೆ 172 ದೂರುಗಳು ಬಂದಿವೆ.ಮಹಾತ್ಮ ಗಾಂಧಿ ರಸ್ತೆ, ಬಿನ್ನಿಮಿಲ್ ರಸ್ತೆ, ಅರಮನೆ ರಸ್ತೆ, ಮಾಗಡಿ ರಸ್ತೆ, ಕೆ.ಆರ್.ಮಾರುಕಟ್ಟೆ, ಜೆ.ಸಿ.ರಸ್ತೆ, ಜೆ.ಪಿ.ನಗರ, ಹೊಸೂರು ರಸ್ತೆ, ರೆಸಿಡೆನ್ಸಿ ರಸ್ತೆ, ಮೈಸೂರು ರಸ್ತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾದ ಬಗ್ಗೆ ದೂರುಗಳು ಬಂದಿವೆ. ಮಳೆಯಿಂದ ಹಾನಿಯಾದ ಪ್ರದೇಶಗಳ ಸಮೀಕ್ಷೆ ನಡೆಸಿ ನಷ್ಟದ ವರದಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.ಮಳೆಯಿಂದ ತೊಂದರೆಯಾದ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಲಯಕ್ಕೆ ಮೂರು ಹೆಚ್ಚುವರಿ ಪ್ರಹರಿ ವಾಹನ ಹಾಗೂ 10 ಮಂದಿ ಗ್ಯಾಂಗ್‌ಮೆನ್‌ಗಳ ತಂಡವನ್ನು ರಚಿಸಲಾಗುವುದು. ಮಳೆ ಅನಾಹುತವಾದ ಪ್ರದೇಶಗಳ ನೀರುಗಾಲುವೆ ಹಾಗೂ ಚರಂಡಿಗಳ ಹೂಳೆತ್ತುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು.

ನಗರ ಜಿಲ್ಲಾಧಿಕಾರಿ, ಬಿಬಿಎಂಪಿ, ನಗರ ಪೊಲೀಸ್, ಅಗ್ನಿಶಾಮಕ ದಳ, ಬೆಂಗಳೂರು ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಸ್ಕಾಂ, ಬೆಂಗಳೂರು ಮೆಟ್ರೊ ರೈಲು ನಿಗಮಗಳ ಸಮನ್ವಯದೊಂದಿಗೆ ಪ್ರಕೃತಿ ವಿಕೋಪ ಪರಿಸ್ಥಿತಿ ಎದುರಿಸಲು ಸಮಿತಿ ರಚಿಸಲಾಗಿದೆ.ನಗರದಲ್ಲಿ ಹೊಸದಾಗಿ ಆರು ಕಡೆಗಳಲ್ಲಿ ನಿಯಂತ್ರಣ ಕೊಠಡಿ ತೆರೆಯ ಲಾಗಿದ್ದು, ಮಳೆಯಿಂದ ತೊಂದರೆಯಾದ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಗೆ ದೂರು ನೀಡುವಂತೆ ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)