ಮಂಗಳವಾರ, ಮೇ 11, 2021
20 °C

ಧರ್ಮಸ್ಥಳದಲ್ಲಿ ನಾಳೆ ಸಾಮೂಹಿಕ ವಿವಾಹ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಜಿರೆ: ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹೇಳುತ್ತಾರೆ. ಆದರೆ ಕಾಲಕ್ಕೆ ತಕ್ಕಂತೆ ಕೋಲ ಅನ್ನುವಂತೆ ಆಕಾಶದಲ್ಲಿ, ನೀರಿನಲ್ಲಿ, ಗಾಳಿಯಲ್ಲಿ ಮದುವೆಯಾಗಿ ಸಾಹಸ ಮೆರೆದವರೂ ಇದ್ದಾರೆ.

 

ಧರ್ಮಸ್ಥಳದಲ್ಲಿ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುತ್ತಿದ್ದು ಇಲ್ಲಿ ಮದುವೆಯಾದವರೆಲ್ಲ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ವಿಚ್ಛೇದನ, ಕೌಟುಂಬಿಕ ಕಲಹ, ಮನಸ್ತಾಪ, ವರದಕ್ಷಿಣೆ ಕಿರುಕುಳದ ಪ್ರಕರಣಗಳು ಇಲ್ಲವೇ ಇಲ್ಲ ಎಂದರೂ ಅತಿಶಯೋಕ್ತಿ ಆಗಲಾರದು.ಇದಕ್ಕೆ ಮುಖ್ಯ ಕಾರಣ `ಮಾತು ಬಿಡ ಮಂಜುನಾಥ~ ಎಂಬ ಖ್ಯಾತಿಯ ದೇವರ ಸನ್ನಿಧಿಯಲ್ಲಿ ಆದ ಮದುವೆ ಹಾಗೂ ಮದುವೆ ಸಂದರ್ಭದಲ್ಲಿ ದಂಪತಿಗಳು ಮಾಡುವ ಪ್ರಮಾಣ ವಚನ. ಜೊತೆಗೆ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದ ಹಾಗೂ ಹಿತೋಪದೇಶ.ವರದಕ್ಷಿಣೆ ಹಾಗೂ ವಿವಾಹಕ್ಕಾಗುವ ದುಂದು ವೆಚ್ಚವನ್ನು ತಡೆಯುವ ಉದ್ದೇಶದಿಂದ ಹೆಗ್ಗಡೆಯವರು 1972 ರಲ್ಲಿ ಕೇವಲ 88 ಜೊತೆಯೊಂದಿಗೆ ಪ್ರಾರಂಭಿಸಿದ ಸಾಮೂಹಿಕ ವಿವಾಹವನ್ನು ಪ್ರತಿವರ್ಷ ಏರ್ಪಡಿಸುತ್ತಿದ್ದು ಕಳೆದ ವರ್ಷದ ವರೆಗೆ 11,128 ಜೊತೆ ವಿವಾಹವಾಗಿದ್ದಾರೆ. ಎಲ್ಲರೂ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.ಕುಟುಂಬದ ಹಿರಿಯರ ಸಹಮತವಿದ್ದಲ್ಲಿ ಅಂತರ್‌ಜಾತಿಯ ವಿವಾಹ ಹಾಗೂ ಪ್ರೇಮ ವಿವಾಹಕ್ಕೂ ಸಾಮೂಹಿಕ ವಿವಾಹದಲ್ಲಿ ಅವಕಾಶ ನೀಡಲಾಗುತ್ತದೆ. ಪ್ರಾರಂಭದ ವರ್ಷಗಳ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿಗಳ ಮಕ್ಕಳೂ ಸಾಮೂಹಿಕ ವಿವಾಹದಲ್ಲೇ ಮದುವೆಯಾದ ಉದಾಹರಣೆಗಳೂ ಸಾಕಷ್ಟಿವೆ.ವಿವಾಹ ವಿಧಾನ: ಸಾಮೂಹಿಕ ವಿವಾಹದ ಮುಹೂರ್ತವನ್ನು ನಿಗದಿಗೊಳಿಸಿ ಸಾಕಷ್ಟು ಪೂರ್ವಭಾವಿಯಾಗಿ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಿಂದ ಸೂಕ್ತ ದಾಖಲೆ ಪತ್ರಗಳೊಂದಿಗೆ ಆಸಕ್ತರು ಹೆಸರು ನೋಂದಾಯಿಸಬೇಕು.ಅಮೃತವರ್ಷಿಣಿ ಸಭಾಭವನದಲ್ಲಿ ಒಂದೇ ಮುಹೂರ್ತದಲ್ಲಿ ಆಯಾ ಜಾತಿ ಪದ್ಧತಿಯ ಸಂಪ್ರದಾಯಕ್ಕನುಗುಣವಾಗಿ ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ವಿವಾಹ ನೆರವೇರಿಸಲಾಗುತ್ತದೆ.

ಮದುವೆ ದಿನ ಮುಂಜಾನೆಯೇ ಹೆಗ್ಗಡೆಯವರು ನೂತನ ವಧುವಿಗೆ ಸೀರೆ ಮತ್ತು ರವಿಕೆ ಕಣ ಹಾಗೂ ವರನಿಗೆ ಧೋತಿ ಮತ್ತು ಶಾಲು ನೀಡುತ್ತಾರೆ.ವಿವಾಹದ ಮುಹೂರ್ತಕ್ಕೆ ಮೊದಲು ಮಂಗಳಸೂತ್ರವನ್ನು ನೀಡಲಾಗುತ್ತದೆ. ವಧೂ -ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಮದುವೆ ಮಂಟಪಕ್ಕೆ ಮೆರವಣಿಗೆಯಲ್ಲಿ ತೆರಳುತ್ತಾರೆ. ಮುಂದೆ ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಸತಿ - ಪತಿಯಾಗಿ ಸರಳ ಹಾಗೂ ಶಾಂತಿ, ನೆಮ್ಮದಿಯ ಜೀವನ ನಡೆಸುವುದಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತಾರೆ.ಮದುವೆಯ ಬಳಿಕ ದೇವರ ದರ್ಶನ ಮಾಡಿ ಅನ್ನಪೂರ್ಣ ಛತ್ರದಲ್ಲಿ ಮದುವೆ ಊಟದ ಬಳಿಕ ಊರಿಗೆ ತೆರಳುತ್ತಾರೆ. ಸಾಮೂಹಿಕ ವಿವಾಹಕ್ಕೆ ಅನೇಕ ಭಕ್ತಾದಿಗಳು ಮಂಗಳಸೂತ್ರ, ಸೀರೆ ಹಾಗೂ ಆರ್ಥಿಕ ದೇಣಿಗೆ ನೀಡುತ್ತಾರೆ.ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸಿದ ಬಳಿಕ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ಮುಂತಾದ ಕಡೆಗಳಲ್ಲಿಯೂ ಈ ಕಾರ್ಯಕ್ರಮ ಆರಂಭಿಸಲಾಗಿದೆ. ಅಲ್ಲದೆ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮೊದಲಾದ ಸೇವಾ ಸಂಸ್ಥೆಗಳು ಕೂಡಾ ಅಲ್ಲಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುತ್ತಿವೆ.ಇದೇ 26 ರಂದು ಗುರುವಾರ ಸಂಜೆ ಗಂಟೆ 6.40 ಕ್ಕೆ ಗೋಧೂಳಿ ಲಗ್ನ ಮುಹೂರ್ತದಲ್ಲಿ 200ಕ್ಕೂ ಹೆಚ್ಚು ವಧೂ-ವರರು ಸಾಮೂಹಿಕ ವಿವಾಹದಲ್ಲಿ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಲಿದ್ದಾರೆ.  ವಿವಾಹ ಸಮಾರಂಭದಲ್ಲಿ ತ್ರಿಪುರ ರಾಜ್ಯಪಾಲ ಡಾ. ಡಿ.ವೈ ಪಾಟೀಲ್ ನೂತನ ದಂಪತಿಗಳಿಗೆ ಶುಭ ಹಾರೈಸಲಿದ್ದಾರೆ. ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಬಿರ್ಲಾ ಸಿಮೆಂಟ್ ಕಂಪೆನಿಯ ಅಧಕ್ಷ ವಿನೋದ್ ಹಮೀರ್ ವಾಸಿಯಾ,  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.