ಶನಿವಾರ, ಮೇ 21, 2022
26 °C

ಧಾರಾವಾಹಿಗೆ ಯಶಸ್ಸೇ ಮಾನದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರವಿ ಆರ್.ಗರಣಿ ಟೀವಿ ಧಾರಾವಾಹಿಗಳ ಯಶಸ್ವಿ ನಿರ್ದೇಶಕ. ಇವರ ನಿರ್ದೇಶನದ `ಕಾವ್ಯಾಂಜಲಿ~ 12 ವರ್ಷದ ಹಿಂದೆ ಪ್ರಸಾರವಾಗಿತ್ತು. ನಂತರ ಅದು ತೆಲುಗು, ತಮಿಳಿನಲ್ಲೂ ರೀಮೇಕ್ ಆಯಿತು.



`ಶುಭಂ~ ಎನ್ನುವ ಸದಭಿರುಚಿಯ ಸಿನಿಮಾವೊಂದನ್ನು ರವಿ ನಿರ್ದೇಶಿಸಿದ್ದು, ರಾಜಕುಮಾರ್ ಅಪಹರಣದ ಸಮಯದಲ್ಲೇ ಅದು ಬಿಡುಗಡೆ ಆಗಿದ್ದರಿಂದ ಅಷ್ಟಾಗಿ ಗಮನ ಸೆಳೆಯದೇ ಹೋಯಿತು.



ಸುವರ್ಣ ವಾಹಿನಿಯಲ್ಲಿ ಹಾಲಿ ಪ್ರಸಾರವಾಗುತ್ತಿರುವ ರವಿ ನಿರ್ದೇಶನದ `ಕೃಷ್ಣರುಕ್ಮಿಣಿ~, `ಅಮೃತವರ್ಷಿಣಿ~ಗೆ ಒಳ್ಳೆಯ ಟಿಆರ್‌ಪಿ ಸಿಕ್ಕಿದೆ. ಸಿನಿಮಾ ರೀತಿಯಲ್ಲಿ ಧಾರಾವಾಹಿ ಮಾಡ್ತಾರೆ. ತುಂಬಾ ರಿಸ್ಕ್ ತಗೋತಾರೆ. ಹೆಚ್ಚಿನ ಎಫರ್ಟ್ ಹಾಕ್ತಾರೆ ಅನ್ನೋ ಪ್ರಶಂಸೆ ರವಿ ಗರಣಿ ಬಗ್ಗೆ ಟೀವಿ ಕ್ಷೇತ್ರದಲ್ಲಿದೆ. ಮಂಡ್ಯ ಕಡೆಯ ಹಳ್ಳಿಯ ಆಡುಭಾಷೆಯ `ಕೃಷ್ಣರುಕ್ಮಿಣಿ~ ಧಾರಾವಾಹಿ ದಿನಕ್ಕೆ ಐದು ಬಾರಿ ಮರುಪ್ರದರ್ಶನಗೊಂಡ ಖ್ಯಾತಿ ಪಡೆದಿದೆ. 

ಸಿನಿಮಾದ ರೀತಿ ಧಾರಾವಾಹಿ ಅಲ್ಲ, ಧಾರಾವಾಹಿಯ ರೀತಿ ಸಿನಿಮಾ ಮಾಡಬೇಕು ಎಂದು ಅಭಿಪ್ರಾಯ ಬದಲಿಸಬೇಕಾಗಿದೆ ಅನ್ನೋಹಾಗೆ `ಕೃಷ್ಣರುಕ್ಮಿಣಿ~ ಮೂಡಿಬರ‌್ತಿದೆ. ಏನಿದರ ಯಶಸ್ಸಿನ ಗುಟ್ಟು?



ಸಿನಿಮಾದಲ್ಲಿ ಕಥೆ ಹೇಗೇ ಇರಲಿ. ಮೇಕಿಂಗ್‌ನಲ್ಲಿ ಹೆಚ್ಚಿನ ರಿಸ್ಕ್ ತಗೋತಾರೆ. ಧಾರಾವಾಹಿಯಲ್ಲೂ ನಾನು ಆ ರೀತಿ ಶ್ರಮ ತಗೆದುಕೊಳ್ತಾ ಇದ್ದುದರಿಂದ ಆ ರೀತಿಯ ಮೆಚ್ಚುಗೆಗಳು ಬಂದದ್ದು ನಿಜ. ಧಾರಾವಾಹಿಗಳೂ ಆಗಬೇಕಿದ್ದು ಹಾಗೇನೇ. ಮೇಕಿಂಗ್ ರಿಚ್ ಇರಲೇಬೇಕು. ಅದಕ್ಕೆ `ಕೃಷ್ಣರುಕ್ಮಿಣಿ~ ಒಳ್ಳೆಯ ಉದಾಹರಣೆ. ಹಾಗಾಗಿ ಅದು ಜನಪ್ರಿಯ ಆಗಿದೆ.



ಈ ಧಾರಾವಾಹಿಗಾಗಿಯೇ ಸುವರ್ಣ ವಾಹಿನಿಯವರು ಪ್ರತ್ಯೇಕ ಸೆಟ್ಸ್ ಹಾಕಿಸಿದ್ದಾರೆ. ವೇಷಭೂಷಣ, ವಿನ್ಯಾಸದ ಬಗ್ಗೆ ಜನ ಮಾತಾಡ್ಕೊಳ್ಳೋ ಹಾಗಿರಬೇಕು. ಸಂಗೀತ, ಕ್ಯಾಮೆರಾ ಎಲ್ಲದಕ್ಕೂ ಹೆಚ್ಚಿನ ಎಫರ್ಟ್ ಹಾಕಲೇಬೇಕು. `ಕೃಷ್ಣರುಕ್ಮಿಣಿ~ ಟೀಮ್ ಅದನ್ನೆಲ್ಲ ನಿಭಾಯಿಸಿದೆ.



ವೃತ್ತಿರಂಗಭೂಮಿ ಹಿನ್ನೆಲೆ ಇರುವ ಚಂದ್ರಕಲಾ ಮೋಹನ್ ಅವರಂಥಾ ನಟಿ ಸಿಕ್ಕಿದ್ದಾರೆ. ಅವರ ಪ್ರತಿಭೆಯನ್ನ, ಅವರ ಟೈಮಿಂಗ್ ಅನ್ನ, ಅವರ ಶೈಲೀಕೃತ ಅಭಿನಯ ಮಾದರಿಗಳನ್ನ ಹೊರತೆಗೀಬೇಕು. ಹಾಗೆ ಮಾಡಿದ್ದರಿಂದ ಅವರನ್ನ ಟೀವಿ ಧಾರಾವಾಹಿಗಳ ರಮಾದೇವಿ ಅಂತ ಜನ ಕರೆಯೋ ಹಾಗೆ ದೊಡ್ಡ ಹೆಸರು ಮಾಡಿದ್ದಾರೆ.

ಮೇಕಿಂಗ್‌ಗೆ ಇಷ್ಟೆಲ್ಲಾ ದುಡ್ಡು ಸುರಿದರೆ ಕಮರ್ಷಿಯಲ್ ಆಯ್ತಲ್ಲ?

ಧಾರಾವಾಹಿಗಳಲ್ಲಿ ಕಮರ್ಷಿಯಲ್, ಕಲಾತ್ಮಕ ಎಂಬ ವಿಭಾಗೀಕರಣ ಇಲ್ಲ. ಧಾರಾವಾಹಿ ಹಿಟ್ ಆಗಬೇಕು, ಅಷ್ಟೇ. ಇಷ್ಟ ಆದರೆ ಜನ ನೋಡ್ತಾರೆ. ಇಲ್ಲ ಅಂದ್ರೆ ಹೇಗೂ ರಿಮೋಟ್ ಅವರ ಕೈಯಲ್ಲೇ ಇರುತ್ತಲ್ಲ! ಹಿಟ್ ಆಗೋದೊಂದೇ ಇಲ್ಲಿ ಮಾನದಂಡ.

ಸರಳವಾಗಿ ಕಡಿಮೆ ಬಜೆಟ್‌ನಲ್ಲಿ ನೈಜ ಅಭಿನಯದಲ್ಲಿ ತೆಗೆದರೆ ಸಹಜವಾಗಿ ಮೂಡಿಬರಲ್ವೆ? ಅದನ್ನ ಜನ ಮೆಚ್ಚಲ್ವೆ?

ನೈಜ ಅಭಿನಯ ಹೊರಹೊಮ್ಮಬೇಕಾದರೆ ಸಾಕಷ್ಟು ಪ್ರಯತ್ನ ಹಾಕಬೇಕು. ಅಭಿನಯ (ಆ್ಯಕ್ಟ್) ಮಾಡಬೇಡಿ, ಪಾತ್ರವನ್ನ ಮನಸ್ಸಲ್ಲಿ ಭಾವಿಸಿಕೊಳ್ಳಿ (ಫೀಲ್) ಅಂತ ಕೆಲವು ನಿರ್ದೇಶಕರು ನಟ- ನಟಿಯರಿಗೆ ಹೇಳ್ತಾರೆ.



ಫೀಲ್ ಮಾಡದೆ ಆ್ಯಕ್ಟ್ ಹೇಗೆ ಮಾಡೋಕಾಗುತ್ತೆ? ಕಮಲ್‌ಹಾಸನ್‌ನಂತಹ ನಟನ ಅಭಿನಯ ನೋಡಿದರೆ ಅವರು ಸಹಜವಾಗಿ ಹಾಗಿದಾರೆ, ಅದರಿಂದ ಪಾತ್ರ ನೈಜವಾಗಿ ಮೂಡಿಬಂದಿದೆ ಅಂತ ಅನಿಸುತ್ತೆ. ಆದರೆ ಹಾಗೆ ಸಹಜವಾಗಿ ಪಾತ್ರ ಮೂಡಿಬರೋದರ ಹಿಂದೆ ತುಂಬಾ ಪ್ರಯತ್ನ ಇರಲೇಬೇಕು, ಆ್ಯಕ್ಟ್ ಮಾಡಲೇಬೇಕು.

ಅಂದ್ರೆ ನೈಜತೆಯ ಭ್ರಾಮಕ ಸ್ಥಿತಿಯನ್ನು ಉಂಟುಮಾಡೋದಾ?

ಹೌದು. `ಕೃಷ್ಣರುಕ್ಮಿಣಿ~ಯ ಹಳ್ಳಿಗೌಡರ ಕುಟುಂಬದ ವಸ್ತುಸ್ಥಿತಿ ಧಾರಾವಾಹಿಯ ಬಹುಪಾಲು ವೀಕ್ಷಕರಿಗೆ ಗೊತ್ತಿರಲ್ಲ. ವೀಕ್ಷಕರಲ್ಲಿ ಮಧ್ಯಮ ವರ್ಗದವರು, ನಗರದವರು, ರೈತರು ಎಲ್ಲಾ ಇರ‌್ತಾರೆ.



ದೂರದಲ್ಲಿ ಎಲ್ಲೋ ನಡೆದ ಕಥೆಯನ್ನ ಜನ ತುಂಬಾ ಇಷ್ಟ ಪಡ್ತಾರೆ. ಆ ಬಗ್ಗೆ ಕುತೂಹಲವೂ ಇರುತ್ತೆ. ಆ ಕಥೆಯನ್ನು ಮರುಸೃಷ್ಟಿ ಮಾಡೋದರಲ್ಲಿ ನಿರ್ದೇಶಕನ ಪ್ರತಿಭಾಶಕ್ತಿ, ಪರಿಶ್ರಮ ಬೇಕಾಗುತ್ತೆ. ವೀಕ್ಷಕರ ಮನಸ್ಸಿನಲ್ಲಿ ಅಂತಹದೊಂದು ಭ್ರಾಮಕ ಸ್ಥಿತಿಯನ್ನು ಸೃಷ್ಟಿ ಮಾಡೋದು ಕಲಾವಿದನ ಕೆಲಸ.



ಕೋರ್ಟ್ ಒಳಗೆ ಏನು ನಡೆಯುತ್ತೆ? ಹೇಗೆ ವಿಚಾರಣೆ ನಡೆಯುತ್ತೆ ಅನ್ನೋದು ಶೇಕಡಾ 99ಜನಕ್ಕೆ ಗೊತ್ತಿರಲ್ಲ. ಅದನ್ನ ತೆರೆಯ ಮೇಲೆ ತಂದಾಗ ಮುಗಿಬಿದ್ದು ನೋಡ್ತಾರೆ. ಪ್ರೇಕ್ಷಕರಿಗೆ ಗೊತ್ತಿಲ್ಲದೇ ಇರೋದನ್ನ ತೋರಿಸುವಾಗ ಸತ್ಯಕ್ಕೆ ಅಪಚಾರ ಆಗಬಾರದು. ಒಂದು ಒಳ್ಳೆಯ ಸಂದೇಶ ಕೊಡೋದಕ್ಕೆ ನಟ ನಟಿಯರ ಅಭಿನಯದಲ್ಲಿ ಅತಿಶಯವಾಗಲಿ, ಸೆಟ್ಸ್, ವೇಷಭೂಷಣದಲ್ಲಿ ಭವ್ಯತೆಯಾಗಲಿ- ಇವೆಲ್ಲ ಬೇಕಾಗುತ್ತೆ.

`ಕೃಷ್ಣರುಕ್ಮಿಣಿ~ ಜನಪ್ರಿಯ ನಿಜ. ಆದರೆ ರೀಮೇಕ್ ಅಲ್ಲವೆ?

ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದ್ದ `ಪ್ರತಿಜ್ಞಾ~ ಹಿಂದಿ ಧಾರಾವಾಹಿಯಿಂದ ಪ್ರೇರಣೆ ಪಡೆದಿರುವುದು ನಿಜ, ಆದರೆ ರೀಮೇಕ್ ಅಲ್ಲ. ಮೂಲದ ಒಂದು ಎಳೆ ಹಿಡಿದುಕೊಂಡು ನಾವೇ ಹೊಸದಾಗಿ ಕಲ್ಪಿಸಿಕೊಳ್ಳುತ್ತ ಹೋಗಿರುವ ಕಥೆ.

 

ತಮಿಳಿನ ಹೆಸರಾಂತ ಬರಹಗಾರ ಅಶೋಕಕುಮಾರ್ ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಬರೆದಿರುವ ಭದ್ರಾವತಿಯ ಹರ್ಷಪ್ರಿಯ ಹಾಗೂ ನಾನು, ಅಶೋಕಕುಮಾರ್ ಜತೆ ಚರ್ಚೆಗೆ ಕುಳಿತುಕೊಂಡು ಅದಕ್ಕೆ ಸ್ಥಳೀಯ ಸೊಗಡನ್ನು ಮೇಳೈಸುತ್ತೇವೆ.

ನಿಮ್ಮನ್ನ ಟೆಕ್ನಿಕಲ್ ಡೈರೆಕ್ಟರ್ ಅಂತಾ ಕರೆಯೋಕೆ ತಾಂತ್ರಿಕ ಅಂಶಗಳಿಗೇ ಹೆಚ್ಚಿನ ಆದ್ಯತೆ ಕೊಡೋದು ಕಾರಣವೆ?

ಟೆಕ್ನಿಕಲ್ ಅಂದರೆ ಬರೀ ತಾಂತ್ರಿಕತೆ ಅಲ್ಲ. ನಿರ್ದೇಶಕನಿಗೆ ಓದುವ ಹವ್ಯಾಸ ಇರಬೇಕು. ಓದದೇ ಇದ್ರೆ ದೃಶ್ಯ ಕಲ್ಪನೆ ಬರಲ್ಲ. ಮುಸ್ಲಿಂ ಹುಡುಗಿಯೊಬ್ಬಳಿಗೆ ರಾಖಿ ಕಟ್ಟುವ `ಸಂಬಂಧ~ ಎನ್ನುವ ಕಥೆಯೊಂದು `ಸುಧಾ~ದಲ್ಲಿ ಪ್ರಕಟವಾಗಿತ್ತು.

 

ಬಹಳ ವರ್ಷ ಅದು ನನ್ನನ್ನು ಕಾಡಿತು. ಸುಮಾರು 15 ವರ್ಷಗಳು ಕಾಡಿದ ಮತ್ತೊಂದು ಕಥೆ `ಸುಧಾ~ದಲ್ಲಿ ಪ್ರಕಟವಾಗಿತ್ತು. ಅದರ ಶೀರ್ಷಿಕೆ ನೆನಪಿಗೆ ಬರ‌್ತಿಲ್ಲ. `ಪ್ರಜಾವಾಣಿ~, `ಸುಧಾ~, `ಮಯೂರ~ ಪತ್ರಿಕೆಗಳ ಎಲ್ಲ ಕಥೆಗಳನ್ನೂ ಈಗ ಓದಲಾಗದಿದ್ದರೂ, ಗಮನಿಸ್ತೇನೆ, ಕೆಲವನ್ನು ಕಡ್ಡಾಯವಾಗಿ ಓದ್ತೇನೆ. ಟೆಕ್ನಿಕಲ್ ಡೈರೆಕ್ಟರ್‌ನಲ್ಲಿ ಓದು, ತಾಂತ್ರಿಕ ಪರಿಣತೆ ಎರಡೂ ಮೇಳೈಸಿರುತ್ತೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.