ಮಂಗಳವಾರ, ಜೂಲೈ 7, 2020
29 °C

ಧೃತಿಯ ಟೆನಿಸ್ ದರ್ಬಾರು

ಎನ್.ಸಿದ್ದರಾಜಯ್ಯ Updated:

ಅಕ್ಷರ ಗಾತ್ರ : | |

ಧೃತಿಯ ಟೆನಿಸ್ ದರ್ಬಾರು

ಇಂಡೋನೇಷ್ಯಾದ ಜಕಾರ್ತದಲ್ಲಿ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯುವ ‘ಜೂನಿಯರ್ ವರ್ಲ್ಡ್ ಟೆನಿಸ್ ಚಾಂಪಿಯನ್‌ಷಿಪ್’ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮೈಸೂರಿನ 14 ವರ್ಷ ವಯಸ್ಸಿನ ದಿಟ್ಟ ಆಟಗಾರ್ತಿ ಧೃತಿಯ ಪರಿಚಯ ಇಲ್ಲಿದೆ.ಅಂತರರಾಷ್ಟ್ರೀಯ ಟೆನಿಸ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕು, ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಬೇಕು ಎಂದು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿರುವ ಧೃತಿಯ ಕನಸು ಅಸಹಜವೇನಲ್ಲ. ಕಾರಣ ಅದಕ್ಕೆ ಬೇಕಾದ ಪ್ರತಿಭೆ, ಛಾತಿ ಎಲ್ಲವೂ ಅವರಿಗಿದೆ. ಅದಕ್ಕೆ ಸಾಕ್ಷಿಯಾದದ್ದು ಈಚೆಗೆ ಕತಾರ್‌ನಲ್ಲಿ ನಡೆದ ಐಟಿಎಫ್ ಗ್ರೇಡ್-5 ಟೂರ್ನಿ. ಮಹಾರಾಷ್ಟ್ರದ ಸ್ನೇಹಾದೇವಿ ರೆಡ್ಡಿ ಜೊತೆಗೂಡಿ ಡಬಲ್ಸ್‌ನಲ್ಲಿ 16 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಡಿಸೆಂಬರ್ 2009ರಿಂದ ಇಲ್ಲಿಯವರೆಗೆ ಒಟ್ಟು 12 ಟೂರ್ನಿಗಳನ್ನು ಜಯಿಸಿ ಪ್ರಸ್ತುತ ಏಷ್ಯಾ ಲೆವೆಲ್ (ಯು-14)ನಲ್ಲಿ ರ್ಯಾಂಕ್-1, ಇಂಡಿಯಾ ಲೆವೆಲ್‌ನಲ್ಲಿ (ಯು-14) ರ್ಯಾಂಕ್-2 ಮತ್ತು (ಯು-16) ರ್ಯಾಂಕ್-7 ಹಾಗೂ ಐಟಿಎಫ್ ಜೂನಿಯರ್ ವಿಭಾಗದಲ್ಲಿ 758ನೇ ರ್ಯಾಂಕ್ ಪಡೆದಿದ್ದಾರೆ.2009ರಲ್ಲಿ  ತ್ರಿಶೂರ್ (ಕೇರಳ) ನಡೆದ ಚಾಂಪಿಯನ್‌ಷಿಪ್ ಸೀರೀಸ್ (ಯು-14 ಸಿಂಗಲ್ಸ್), ಪುಣೆ (ಮಹಾರಾಷ್ಟ್ರ) ನಡೆದ ಚಾಂಪಿಯನ್‌ಷಿಪ್ ಸೀರೀಸ್ (ಯು-14 ಮತ್ತು ಯು-16 ಸಿಂಗಲ್ಸ್, ಡಬಲ್ಸ್), 2010ರಲ್ಲಿ ಕೋಲ್ಕತ್ತ (ಪಶ್ವಿಮ ಬಂಗಾಳ) ಸೂಪರ್ ಸೀರೀಸ್ (ಯು-16 ಡಬಲ್ಸ್), ಬೆಹರಾಂಪುರ್ (ಒಡಿಶಾ) ಸೂಪರ್ ಸೀರೀಸ್ (ಯು-16 ಡಬಲ್ಸ್), ಹೈದರಾಬಾದ್‌ನಲ್ಲಿ ನಡೆದ ಏಷ್ಯನ್ ರ್ಯಾಂಕಿಂಗ್ (ಯು-14 ಸಿಂಗಲ್ಸ್, ಡಬಲ್ಸ್), ಮೈಸೂರಿನಲ್ಲಿ ನಡೆದ ಚಾಂಪಿಯನ್‌ಷಿಪ್ ಸೀರೀಸ್ (ಯು-16 ಸಿಂಗಲ್ಸ್), ಅಹಮದಾಬಾದ್ (ಗುಜರಾತ್) ಏಷ್ಯನ್ ರ್ಯಾಂಕಿಂಗ್ (ಯು-14 ಸಿಂಗಲ್ಸ್), ಗೌಹಾತಿ (ಅಸ್ಸಾಂ)ಯಲ್ಲಿ ನಡೆದ ಸೂಪರ್ ಸೀರಿಸ್ (ಯು-16 ಸಿಂಗಲ್ಸ್, ಡಬಲ್ಸ್‌ನಲ್ಲಿ ರನ್ನರ್ ಅಪ್) ಹಾಗೂ ಚೆನ್ನೈನಲ್ಲಿ ನಡೆದ ಐಟಿಎಫ್ ಜೂನಿಯರ್ಸ್‌ನಲ್ಲಿ  (ಯು-18) ರನ್ನರ್ ಅಪ್ ಪ್ರಶಸ್ತಿ... ಹೀಗೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಟೆನಿಸ್ ರ್ಯಾಕೆಟ್ ಹಿಡಿದು ಧೃತಿ ಆಡತೊಡಗಿದರೆ, ಸರ್ವ್ ಮತ್ತು ರಿಟರ್ನ್ ಎರಡರಲ್ಲೂ ಪ್ರಭಾವಶಾಲಿ. ಪ್ರತಿಸ್ಪರ್ಧಿ ಕಡೆಯ ಬೇಸ್‌ಲೈನ್‌ಗೆ ಗುರಿಯಿಟ್ಟು ಹೊಡೆಯುವ ಈಕೆಯ ಖಚಿತತೆ, ಶಕ್ತಿ ಎಲ್ಲರನ್ನೂ ದಂಗುಬಡಿಸುತ್ತದೆ.ಧೃತಿ ತನ್ನ 8ನೇ ವಯಸ್ಸಿನಲ್ಲಿ ಅಕ್ಕ ಧನ್ಯ ಜೊತೆಯಲ್ಲಿ ಹವ್ಯಾಸವಾಗಿ ಟೆನಿಸ್ ಆಡಲು ಆರಂಭಿಸಿದರು. ನಂತರ ಟೆನಿಸ್‌ನಲ್ಲಿ ಆಸಕ್ತಿ ಮೂಡಿ, ಗಂಭೀರವಾಗಿ ಅಭ್ಯಾಸ ಮಾಡಿದರು. ಮಗಳ ಆಸೆಗೆ ತಂದೆ ಟಿ.ವೇಣುಗೋಪಾಲ್,ಮತ್ತು ತಾಯಿ ಮಾಲಾ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದರು.ಮೈಸೂರಿನ ನಾಗರಾಜ್ ಬಳಿ ತರಬೇತಿ ಪಡೆದು, ನಂತರ ರಘುವೀರ್ ಟೆನಿಸ್ ಅಕಾಡೆಮಿ ಸೇರಿ ಅಲ್ಲಿ ಕೋಚ್ ರಘುವೀರ್ ಅವರಲ್ಲಿ ಅಭ್ಯಾಸ ಮಾಡಿದರು. ಏಪ್ರಿಲ್ 2008ರಲ್ಲಿ ಬೆಂಗಳೂರಿನ ಮಹೇಶ್ ಭೂಪತಿ ಟೆನಿಸ್ ಅಕಾಡೆಮಿಗೆ ಸೇರಲು ನಡೆದ ಆಯ್ಕೆ ಪಂದ್ಯಾವಳಿಯಲ್ಲಿ ಜಯಗಳಿಸಿ ಪ್ರವೇಶ ಪಡೆದರು.ಅಲ್ಲಿ ಮಾರ್ಚ್ 2010ರವರೆಗೆ ಒಟ್ಟು ಎರಡು ವರ್ಷಗಳ ಕಾಲ ಮಹೇಶ್ ಭೂಪತಿ ಸೇರಿದಂತೆ ಖ್ಯಾತ ಟೆನಿಸ್ ಆಟಗಾರರ ಜೊತೆ ಅಭ್ಯಾಸ ಮಾಡಿ ಉತ್ತಮ ತರಬೇತಿ, ಅನುಭವವನ್ನು ತಮ್ಮದಾಗಿಸಿ ಕೊಂಡರು. ಪ್ರಸ್ತುತ ಪುಣೆಯ ಅರ್ಜುನ ಪ್ರಶಸ್ತಿ ವಿಜೇತ ಸಂದೀಪ್ ಕೀರ್ತನೆ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಒಟ್ಟು 4-5 ಗಂಟೆಗಳ ಕಾಲ ಟೆನಿಸ್ ಅಭ್ಯಾಸದ ಜೊತೆ, ದೈಹಿಕ ಕಸರತ್ತು ಮಾಡುತ್ತಾರೆ. ಧೃತಿ ಟೆನಿಸ್ ಅಂಗಳದಲ್ಲಿ ಮಿಂಚುವುದಷ್ಟೇ ಅಲ್ಲ,ಓದಿನಲ್ಲೂ ಜಾಣೆ. ಆಟ-ಪಾಠ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಧೃತಿ ಮೈಸೂರಿನ ವಿದ್ಯಾವಿಕಾಸ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾರೆ. ಧೃತಿಯ ಸಾಧನೆಗೆ ವಿದ್ಯಾವಿಕಾಸ ಶಾಲೆ ಬೆಂಬಲ ನೀಡುತ್ತಿದೆ. ಈಚೆಗೆ ಧ್ರುತಿ ಅವರ ಸಾಧನೆಗೆ ಪ್ರೋತ್ಸಾಹ ಧನವಾಗಿ 1 ಲಕ್ಷ ರೂ. ನೀಡಿ ಸನ್ಮಾನಿಸಿತು.ಭವಿಷ್ಯದ ಆಟಗಾರ್ತಿಯಾಗಿ ಭರವಸೆ ಮೂಡಿಸಿರುವ ಧೃತಿ ಅವರು, ಸೆರಿನಾ ವಿಲಿಯಮ್ಸ್ ಮತ್ತು ರೋಜರ್ ಫೆಡರರ್ ನನ್ನ ಫೇವರಿಟ್ ಆಟಗಾರರು ಎನ್ನುತ್ತಾರೆ. ಧೃತಿ ಅವರು ಸೋಲು ಎದುರಾದಾಗ ‘ಧೃತಿ’ಗೆಡದೆ ಕ್ರೀಡಾಸ್ಫೂರ್ತಿಯಿಂದ ಆಡಿ ಟೆನಿಸ್ ಅಂಗಳದಲ್ಲಿ ಮಿಂಚಲಿ, ಅವರ ಕ್ರೀಡಾ ಯಾತ್ರೆ ಹೀಗೆ ಯಶಸ್ವಿಯಾಗಿ ಸಾಗಲಿ. ಅವರು ಟೆನಿಸ್ ಲೋಕದಲ್ಲಿ ಹೊಸ ಮಿಂಚು ಮೂಡಿಸಲಿ ಎನ್ನುವ ಹಾರೈಕೆಯೊಂದಿಗೆ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.