ಮಂಗಳವಾರ, ಮೇ 18, 2021
28 °C

ನಂಜಪ್ಪ ವೃತ್ತದ ವೈಜ್ಞಾನಿಕ ಅಭಿವೃದ್ಧಿಗೆ ನೀಲನಕ್ಷೆ

ರಶೀದ್ ಕಪ್ಪನ್ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜಪ್ಪ ವೃತ್ತದ ವೈಜ್ಞಾನಿಕ ಅಭಿವೃದ್ಧಿಗೆ ನೀಲನಕ್ಷೆ

ಬೆಂಗಳೂರು: ಶಾಂತಿನಗರದ ಹಾಕಿ ಕ್ರೀಡಾಂಗಣದ ಬಳಿಯ ನಂಜಪ್ಪ ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ವಾಸ್ತುಶಿಲ್ಪಿಗಳು ನೀಲನಕ್ಷೆಯನ್ನು ರೂಪಿಸಿದ್ದಾರೆ. ಸದ್ಯ ನಂಜಪ್ಪ ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಹಾಗೂ ವಾಹನ ನಿಲುಗಡೆಗೆ ಸ್ಥಳಾವಕಾಶವೇ ಇಲ್ಲದಂತಾಗಿದೆ. ನೂತನ ನೀಲನಕ್ಷೆಯಂತೆ ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ರಸ್ತೆಯಲ್ಲಿ ಪಾದಚಾರಿ ಮಾರ್ಗ ಹಾಗೂ ವಾಹನ ನಿಲುಗಡೆಗೆ ಹೆಚ್ಚಿನ ಅವಕಾಶ ಸಿಗಲಿದೆ.`ನಂಜಪ್ಪ ವೃತ್ತದಲ್ಲಿ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ವಾಹನ ಹಾಗೂ ಜನ ಸಂಚಾರ ಹೆಚ್ಚಾಗಿರುವ ಈ ವೃತ್ತದಲ್ಲಿ ಪಾದಚಾರಿ ಮಾರ್ಗ ಹಾಗೂ ವಾಹನ ನಿಲುಗಡೆಗೆ ಅವಕಾಶವೇ ಇಲ್ಲದಂತಾಗಿದೆ. ಆದರೆ, ರಸ್ತೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದರೆ ಪಾದಚಾರಿಗಳಿಗೆ ಅನುಕೂಲವಾಗುವುದರ ಜತೆಗೆ ವಾಹನ ನಿಲುಗಡೆಗೂ ಸಾಕಷ್ಟು ಸ್ಥಳಾವಕಾಶ ಸಿಗಲಿದೆ' ಎಂದು ನೀಲನಕ್ಷೆ ರೂಪಿಸಿರುವ ವೆಂಕಟರಮಣನ್ ಅಸೋಸಿಯೇಷನ್‌ನ ಹಿರಿಯ ವಾಸ್ತುಶಿಲ್ಪಿ ನರೇಶ್ ವಿ. ನರಸಿಂಹನ್ ತಿಳಿಸಿದರು.`ಲಾಂಗ್‌ಫೋರ್ಡ್ ರಸ್ತೆ ಹಾಗೂ ರೀನಿಯಸ್ ಸ್ಟ್ರೀಟ್‌ಗಳು ಸೇರುವ ನಂಜಪ್ಪ ವೃತ್ತ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆಯಿರುತ್ತದೆ. ರೀನಿಯಸ್ ಸ್ಟ್ರೀಟ್‌ನಲ್ಲಿ ಸಾಕಷ್ಟು ಮರಗಳಿವೆ. ವೃತ್ತದ ಮಧ್ಯಭಾಗದ ಜಾಗದಲ್ಲಿ ಕೂಡಾ ಮರಗಳಿವೆ. ಇದಲ್ಲದೇ ವೃತ್ತದ ಮಧ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಇದೆ. ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಿ ಅಭಿವೃದ್ಧಿ ಪಡಿಸಿದರೆ ಪಾದಚಾರಿಗಳಿಗೆ ಅನುಕೂಲವಾಗುತ್ತದೆ' ಎಂದು ಅವರು ಹೇಳಿದರು.`ಹೊಸ ನೀಲನಕ್ಷೆಯ ಪ್ರಕಾರ ವೃತ್ತ ಹಾಗೂ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದರೆ ವಾಹನ ಸಂಚಾರಕ್ಕೆ ತೊಂದರೆಯೇನೂ ಆಗುವುದಿಲ್ಲ. ವೃತ್ತ ಹಾಗೂ ರಸ್ತೆಯಲ್ಲಿ ಅನಗತ್ಯವಾಗಿ ಬಿಡಲಾಗಿರುವ ಸ್ಥಳಾವಕಾಶವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ನೀಲನಕ್ಷೆ ಸಹಕಾರಿಯಾಗುತ್ತದೆ. ರೀನಿಯಸ್ ಸ್ಟ್ರೀಟ್‌ನ ಎರಡೂ ಕಡೆಗಳಲ್ಲಿ ಸದ್ಯ ವಾಹನ ನಿಲುಗಡೆಗೆ ಜಾಗವಿದೆ. ಆದರೆ, ವೈಜ್ಞಾನಿಕವಾಗಿ ವಾಹನ ನಿಲುಗಡೆ ಜಾಗವನ್ನು ಅಭಿವೃದ್ಧಿಪಡಿಸಿದರೆ ಇನ್ನಷ್ಟು ವಾಹನಗಳು ನಿಲ್ಲಲು ಅವಕಾಶ ಸಿಗಲಿದೆ' ಎಂದು ಅವರು ಮಾಹಿತಿ ನೀಡಿದರು.`ನಂಜಪ್ಪ ವೃತ್ತದ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆದಾಟಲು ಜೀಬ್ರಾ ಪಟ್ಟಿಯನ್ನು ಹಾಕಬೇಕು. ವೃತ್ತದ ನಡುವಿನ ಅಂಬೇಡ್ಕರ್ ಪ್ರತಿಮೆಯ ಮುಂದಿನ ಜಾಗದಲ್ಲಿ ಪಾದಚಾರಿ ಮಾರ್ಗ ವಿಸ್ತರಣೆಗೆ ಸಾಕಷ್ಟು ಸ್ಥಳಾವಕಾಶವಿದ್ದು, ಅದನ್ನು ಅಭಿವೃದ್ಧಿ ಪಡಿಸಬೇಕು. ಹಾಕಿ ಕ್ರೀಡಾಂಗಣ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ಶೌಚಾಲಯದ ಎದುರು ಈಗಿರುವ ಎಡ ತಿರುವು ಮುಚ್ಚುವುದರಿಂದ ಪಾದಚಾರಿ ಮಾರ್ಗ ವಿಸ್ತರಿಸಬಹುದು. ಇದರಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ' ಎಂದು ಅವರು ತಿಳಿಸಿದರು.`ಹೊಸೂರು ರಸ್ತೆಯ ಕಡೆಗೆ ಹೋಗುವ ಲಾಂಗ್‌ಫೋರ್ಡ್ ರಸ್ತೆಯ ಬಲಭಾಗದ ಮೊದಲನೇ ಅಡ್ಡರಸ್ತೆಯ ಬಳಿ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಿಸಬಹುದಾಗಿದೆ. ಆದರೆ, ಸದ್ಯ ಈ ಭಾಗದಿಂದ ಯಾವುದೇ ಪ್ರಯೋಜನವೂ ಇಲ್ಲ. ವೈಜ್ಞಾನಿಕವಾಗಿ ರಸ್ತೆಯ ಈ ಭಾಗವನ್ನು ಪಾದಚಾರಿ ಮಾರ್ಗವಾಗಿ ಅಭಿವೃದ್ಧಿ ಪಡಿಸಬೇಕು. ರೀನಿಯಸ್ ಸ್ಟ್ರೀಟ್‌ನ ಎಡಭಾಗದ ಪಾದಚಾರಿ ಮಾರ್ಗವನ್ನು ವಿಸ್ತರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಬದಲಾವಣೆಗಳನ್ನು ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.