ಸೋಮವಾರ, ಜೂನ್ 14, 2021
27 °C

ನಕಲಿ ಕಾಂಗ್ರೆಸ್‌ಗೆ ಬದ್ಧತೆ ಇಲ್ಲ: ವೆಂಕಯ್ಯನಾಯ್ಡು

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈಗಿನ ಕಾಂಗ್ರೆಸ್‌ ನಕಲಿ ಪಕ್ಷ. ಅಸಲಿತನ ಕಳೆದುಕೊಂಡಿರುವ ಆ ಪಕ್ಷಕ್ಕೆ ಆದರ್ಶ, ಬದ್ಧತೆ, ಸಿದ್ಧಾಂತ ಇಲ್ಲ. ಕೇವಲ ಭ್ರಷ್ಟಾಚಾರವೊಂದೇ ನಕಲಿ ಕಾಂಗ್ರೆಸ್‌ ಪಕ್ಷದ ಸಾಧನೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಎಂ. ವೆಂಕಯ್ಯನಾಯ್ಡು ಅವರು ವ್ಯಂಗ್ಯವಾಡಿದರು.ಭಾನುವಾರ ನಗರದಲ್ಲಿ ನಡೆದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು ಹಗರಣ, 2ಜಿ ತರಂಗಾಂತರ ಹಂಚಿಕೆ, ಕಾಮನ್‌ವೆಲ್ತ್‌  ಕ್ರೀಡಾಕೂಟ ಮುಂತಾದ ಕೋಟ್ಯಂತರ ರೂಪಾಯಿ ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್‌ಗೆ ಆಡಳಿತ ನಡೆಸುವ ನೈತಿಕತೆ ಇಲ್ಲ ಎಂದು ಟೀಕಿಸಿದರು.ಯುಪಿಎ ಆಡಳಿತದಲ್ಲಿ ಡಾಲರ್‌ ಮೌಲ್ಯ ಏರಿಕೆಯಾಯಿತು. ಆದರೆ, ರೂಪಾಯಿ ಮೌಲ್ಯ ಕುಸಿದು ತೀವ್ರ ನಿಗಾ ಘಟಕದಲ್ಲಿಡುವ ಪರಿಸ್ಥಿತಿ ಉಂಟಾಗಿದೆ. ಪ್ರಧಾನಿ ಮನಮೋಹನ್‌ ಸಿಂಗ್‌ ದಿಟ್ಟತನದಿಂದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ನಾಯಕತ್ವ ಕೊರತೆ ಉಂಟಾಗಿದೆ. ಇದುವರೆಗೆ ಪ್ರಧಾನಿ ಹುದ್ದೆಗೆ ಅಭ್ಯರ್ಥಿ ಯಾರು ಎಂದು ಪ್ರಕಟಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ನುಡಿದರು.ತೃತೀಯ ರಂಗ ಒಂದು ರೀತಿಯಲ್ಲಿ ‘ಪಾರ್ಕಿಂಗ್‌ ಸ್ಥಳ’ವಾಗಿದೆ. ತೃತೀಯ ರಂಗ ಅಧಿಕಾರಕ್ಕೆ ಬಂದರೆ ವಾರದ ಏಳು ದಿನ ಏಳು ಮಂದಿ ಪ್ರಧಾನಿಯಾ­ಗುತ್ತಾರೆ. ಮುಲಾಯಂ ಸಿಂಗ್‌, ಜಯಲಲಿತಾ, ಎಚ್‌.ಡಿ.ದೇವೇಗೌಡ, ನಿತೀಶ್ ಕುಮಾರ್‌ ಸೇರಿದಂತೆ ಹಲವಾರು ನಾಯಕರು ಪ್ರಧಾನಿ­ಯಾಗಲು ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದರು.ಶಾಸಕ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ದೇಶದಾದ್ಯಂತ ಕಾಂಗ್ರೆಸ್‌ ದೂಳಿಪಟವಾಗುತ್ತಿದೆ. ದೆಹಲಿಯಲ್ಲೇ ಕಾಂಗ್ರೆಸ್‌ ನೆಲಕಚ್ಚಿದೆ.

ದೇಶಕ್ಕೆ ಒಬ್ಬ ಸಮರ್ಥ ನಾಯಕ ಮತ್ತು ಸ್ಥಿರ ಸರ್ಕಾರ ಅಗತ್ಯವಿದೆ ಎಂದು ನುಡಿದರು.ಸಂಸದ ಅನಂತಕುಮಾರ್‌ ಮಾತ­ನಾಡಿ, ಬೂತ್‌ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಕಾರ್ಯಕರ್ತರು ಪಣ ತೊಡಬೇಕು. ಕಾಂಗ್ರೆಸ್‌ ಪಾಲಿಗೆ ನರೇಂದ್ರ ಮೋದಿ ಅಲೆ ಸುನಾಮಿ­ಯಾಗಲಿದೆ.ಲೋಕಸಭೆ ಚುನಾವಣೆ­ಯಲ್ಲಿ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗುತ್ತದೆ ಎಂದು ನುಡಿದರು.ಸಂಸದ ಪಿ.ಸಿ. ಮೋಹನ್‌, ಶಾಸಕರಾದ ಎಸ್‌.ಸುರೇಶ್‌ ಕುಮಾರ್‌, ಬಿ.ಎನ್‌.ವಿಜಯ­ಕುಮಾರ್‌, ಅರವಿಂದ ಲಿಂಬಾವಳಿ, ಎಸ್‌. ರಘು, ವಿಧಾನಪರಿಷತ್‌ ಸದಸ್ಯರಾದ ವಿ. ಸೋಮಣ್ಣ, ತಾರಾ ಹಾಜರಿದ್ದರು.13ಕ್ಕೆ ಎರಡನೇ ಪಟ್ಟಿ

ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಇದೇ 13ರಂದು ನಡೆಯಲಿದ್ದು, ಉಳಿದ 8 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾ­ಗುವುದು ಎಂದು ಸಂಸದ ಅನಂತಕುಮಾರ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.