ಗುರುವಾರ , ಮೇ 13, 2021
39 °C

ನಕಲಿ ವಸ್ತುಗಳ ಮಾರಾಟ: ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕಲಿ ವಸ್ತುಗಳ ಮಾರಾಟ: ಆರೋಪಿಗಳ ಬಂಧನ

ಬೆಂಗಳೂರು: ನಗರದ ವಿವಿಧೆಡೆ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ  ರೂ11 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ತಿಗಳರಪೇಟೆ ಸಮೀಪದ ಎಸ್.ಪಿ.ರಸ್ತೆಯ ಪ್ರಿನ್ಸ್ ಇನ್ಫೋಟೆಕ್ ಹಾಗೂ ಹರಿ ಸಿಸ್ಟಮ್ಸ ಎಂಬ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು, ನಕಲಿ ಸಾಫ್ಟ್‌ವೇರ್‌ಗಳ ಸಿ.ಡಿಗಳನ್ನು ಮಾರಾಟ ಮಾಡುತ್ತಿದ್ದ ಮುರಳಿ (20) ಮತ್ತು ಭವಾನಿ (20) ಎಂಬುವರನ್ನು ಬಂಧಿಸಿದ್ದಾರೆ.`ಎಸ್.ಪಿ.ರಸ್ತೆಯ ಕೆಲ ಅಂಗಡಿಗಳಲ್ಲಿ ನಕಲಿಯಾಗಿ ತಯಾರಿಸಿದ ಸಾಫ್ಟ್‌ವೇರ್‌ಗಳ ಸಿ.ಡಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಬಂತು. ಆ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಿದಾಗ ಮುರಳಿ ಮತ್ತು ಭವಾನಿ ಎಂಬುವರ ಅಂಗಡಿಯಲ್ಲಿ ಸಿ.ಡಿಗಳು ಪತ್ತೆಯಾದವು.ಆರೋಪಿಗಳು, `ಮೈಕ್ರೋಸಾಫ್ಟ್' ಕಂಪೆನಿ ಹೆಸರಿನಲ್ಲಿ ನಕಲಿಯಾಗಿ ತಯಾರಿಸಿದ ವಿಂಡೋಸ್-7, ವಿಂಡೋಸ್-8 ಮತ್ತು ವಿಂಡೋಸ್ ಆಫೀಸ್ ಸಾಫ್ಟ್‌ವೇರ್‌ಗಳ ಸಿ.ಡಿಗಳನ್ನು ಅಸಲಿ ಸಾಫ್ಟ್‌ವೇರ್ ಸಿ.ಡಿಗಳೆಂದು ಮಾರಾಟ ಮಾಡಿ ವಂಚಿಸುತ್ತಿದ್ದರು' ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.ಬಂಧಿತರಿಂದ ಆರು ಸಾವಿರ ರೂಪಾಯಿ ಮೌಲ್ಯದ 47 ನಕಲಿ ಸಾಫ್ಟ್‌ವೇರ್ ಸಿ.ಡಿಗಳನ್ನು ವಶಪಡಿಸಕೊಳ್ಳಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಕಲಿ ಸೂಟ್‌ಕೇಸ್ ಮಾರಾಟ- ಬಂಧನ:  ಉಪ್ಪಾರಪೇಟೆ ಠಾಣೆ ವ್ಯಾಪ್ತಿಯ ಶಬೀರ್ ಸೆಲೆಕ್ಷನ್, ಪರ್ಫೆಕ್ಟ್ ಬ್ಯಾಗ್ ಹೌಸ್, ಸಿಟಿ ಶಾಪ್, ಪೆಸಿಫಿಕ್ ಟ್ರಾವೆಲರ್ಸ್‌ ಚಾಯ್ಸ ಎಂಬ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಪ್ರತಿಷ್ಠಿತ ಕಂಪೆನಿಯ ಹೆಸರಿನಲ್ಲಿ ನಕಲಿ ಸೂಟ್‌ಕೇಸ್‌ಗಳನ್ನು ಮಾರಾಟ ಮಾಡುತ್ತಿದ್ದ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.ಗಾಂಧಿನಗರದ ನಜೀರ್ ಇಬ್ರಾಹಿಂ (45), ರಾಮಚಂದ್ರಪುರದ ಸಿಬ್ಗಾತುಲ್ಲಾ (21), ನಜೀರ್ (25) ಮತ್ತು ಮುಸ್ತಫಾ (30) ಎಂಬುವರನ್ನು ಬಂಧಿಸಿ, ರೂ25,000 ಮೌಲ್ಯದ 10 ನಕಲಿ ಸೂಟ್‌ಕೇಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಟೆಲಿ ಮಾರ್ಕೆಟಿಂಗ್ ಕಂಪೆನಿಗಳ ವಸ್ತುಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಮಹಮ್ಮದ್ ಖಮರುದ್ದೀನ್ (36) ಮತ್ತು ಮಹಮ್ಮದ್ ಮೋಹಿನುದ್ದೀನ್ (36) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.`ಆರೋಪಿಗಳು, ಟಿ.ವಿ.ಚಾನೆಲ್‌ಗಳಲ್ಲಿ ಜಾಹೀರಾತಾಗುವ ಪ್ರತಿಷ್ಠಿತ ಕಂಪೆನಿಗಳ ವಸ್ತುಗಳನ್ನು ನಕಲಿಯಾಗಿ ತಯಾರಿಸುತ್ತಿದ್ದರು. ಬಳಿಕ ತಮ್ಮ ಸಹಚರರನ್ನು ಗ್ರಾಮಗಳಿಗೆ ಕಳುಹಿಸಿ, ನಕಲಿ ವಸ್ತುಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದರು.ಇವರಿಂದ ವಸ್ತುಗಳನ್ನು ಖರೀದಿಸಿದವರು ಹಲವು ತೊಂದರೆಗಳಿಗೆ ಒಳಗಾಗಿರುವ ನಿದರ್ಶನಗಳಿವೆ. ಬಂಧಿತರಿಂದ 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಸಿಸಿಬಿ ಡಿಸಿಪಿ ಡಿ.ದೇವರಾಜ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.