ಭಾನುವಾರ, ಜೂನ್ 20, 2021
28 °C

ನಗರಕ್ಕೂ ತಟ್ಟಿದ ಕುಡಿಯುವ ನೀರಿನ ಬಿಸಿ

ಪ್ರಜಾವಾಣಿ ವಾರ್ತೆ/ವಿನಾಯಕ ಭಟ್ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬಿಸಿಲಿನ ದಗೆ ದಿನೇ ದಿನೇ ಹೆಚ್ಚುತ್ತಿದ್ದಂತೆ ನಗರದ ಹಲವು ಬಡಾವಣೆಗಳ ಜನರಿಗೆ ಕುಡಿಯುವ `ನೀರಿನ ಬಿಸಿ~ ತಟ್ಟಲು ಆರಂಭವಾಗಿದೆ. ಖಾಲಿ ಬಿಂದಿಗೆಗಳ ಎದುರು ಕುಳಿತ ಮಹಿಳೆಯರು, ಕುಡಿಯುವ ನೀರು ಇಂದು ಬರಬಹುದು, ನಾಳೆ ಬರಬಹುದು ಎಂದು ಲೆಕ್ಕಾಚಾರ ಹಾಕತೊಡಗಿದ್ದಾರೆ.ಸಾಮಾನ್ಯವಾಗಿ ಮೂರು ದಿನಗಳಿಗೆ ಒಮ್ಮೆ ಪೂರೈಕೆಯಾಗುತ್ತಿದ್ದ ನೀರು, ಕೆಲವು ಬಡಾವಣೆಗಳಲ್ಲಿ ಈಗ ನಾಲ್ಕೈದು ದಿನಗಳಾದರೂ ನಳಗಳಲ್ಲಿ ನೀರು ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಸಮೀಪದ ಕೈಪಂಪ್, ಕೊಳವೆ ಬಾವಿಗಳಿಂದ ನೀರು ಹಿಡಿದುಕೊಂಡು ಸೈಕಲ್ ಮೇಲೆ, ತಲೆ ಮೇಲೆ ಹೊತ್ತಿಕೊಂಡು ಬರುವ ದೃಶ್ಯಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ.ಆರು ವರ್ಷಗಳ ಹಿಂದೆ ಮಹಾನಗರ ಪಾಲಿಕೆಯಿಂದ ನೀರು ಪೂರೈಕೆ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹಿಡಕಲ್ ಡ್ಯಾಮ್ ಹಾಗೂ ರಾಕಸಕೊಪ್ಪ ಜಲಾಶಯಗಳಿಂದ ಬೆಳಗಾವಿ ನಗರಕ್ಕೆ ನೀರು ಪೂರೈಸುತ್ತಿವೆ.ನಿತ್ಯ 15 ಮಿಲಿಯನ್ ಗ್ಯಾಲೆನ್ ನೀರನ್ನು ಜಲಾಶಯಗಳಿಂದ ಮೇಲಕ್ಕೆ ಎತ್ತಲಾಗುತ್ತಿದೆ. ಜಲಾಶಯಗಳಲ್ಲೂ ಅಗತ್ಯ ಪ್ರಮಾಣದ ನೀರು ಇದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಆರಂಭಿಸಿರುವುದರಿಂದ ಜಲಾಶಯಗಳಿಂದ ನೀರನ್ನು ಮೇಲಕ್ಕೆ ಎತ್ತುವಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹೀಗಾಗಿ ನಗರದ ಹೊರವಲಯದ ಹಲವು ಬಡಾವಣೆಗಳಿಗೆ ನೀರು ಪೂರೈಸುವಲ್ಲಿ ವಿಳಂಬವಾಗುತ್ತಿದೆ ಎಂಬುದು ಮಂಡಳಿಯ ಅಧಿಕಾರಿಗಳ ವಿವರಣೆ.ನಗರದ 10 ವಾರ್ಡ್‌ಗಳಿಗೆ ಈಗಾಗಲೇ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಬಾಕಿ ಉಳಿದ 48 ವಾರ್ಡ್‌ಗಳಲ್ಲಿ ಇನ್ನೂ ನೀರು ಪೂರೈಕೆಯ ಹಳೆಯ ವ್ಯವಸ್ಥೆಯೇ ಮುಂದುವರಿದಿದೆ. ಇದರೊಂದಿಗೆ ಲೋಡ್ ಶೆಡ್ಡಿಂಗ್ ಸಹ ಆರಂಭವಾಗಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.ನಗರದಲ್ಲಿ 52 ಸಾವಿರ ಅಧಿಕೃತ ನಳಗಳ ಸಪಂರ್ಕಗಳಿವೆ. ಹಲವು ಬಡಾವಣೆಗಳಲ್ಲಿ ಇರುವ ಅಕ್ರಮ ನಳಗಳ ಜೋಡಣೆಗೆ ಕಡಿವಾಣವನ್ನು ಹಾಕದಿರುವುದರಿಂದ ಹಾಗೂ ನಳಗಳಿಗೆ ಅನಧಿಕೃತವಾಗಿ ಪಂಪ್‌ಸೆಟ್ ಜೋಡಿಸಿ ನೀರನ್ನು ಎಳೆದುಕೊಳ್ಳುವುದರಿಂದ ಈಗಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳತೊಡಗಿದೆ.ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸುಮಾರು 4 ಕೋಟಿ ರೂಪಾಯಿ ನೀರಿನ ಕರವನ್ನು ಪಾವತಿಸುವುದು ಬಾಕಿ ಉಳಿದುಕೊಂಡಿದೆ. ಇದರಲ್ಲಿ 1.80 ಕೋಟಿ ರೂಪಾಯಿ ಕೈಗಾರಿಕಾ ವಲಯದಿಂದ ಬಾಕಿ ಇದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರಿನ ಕರ ಬಾಕಿ ಇರುವುದರಿಂದ ಮಂಡಳಿಯೂ ಕುಡಿಯುವ ನೀರು ಪೂರೈಕೆಯಲ್ಲಿ ವಿಶೇಷ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.“ನಾವು ತಪ್ಪದೇ ತೆರಿಗೆಯನ್ನು ಪಾವತಿಸುತ್ತಿದ್ದರೂ ಮಲ್ಲಿಕಾರ್ಜುನ ನಗರ ಹಾಗೂ ಸಮರ್ಥ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿಲ್ಲ. ನಳಗಳ ವ್ಯವಸ್ಥೆ ಮಾಡಿದ್ದರೂ ಅವುಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಹೀಗಾಗಿ ಸುತ್ತಲಿನ ಪ್ರದೇಶಗಳಿಗೆ ಹೋಗಿ ನೀರನ್ನು ತರಬೇಕಾಗಿದೆ” ಎನ್ನುತ್ತಾರೆ ರವಿಂದ್ರ ಎಸ್. ಕನೇರಿ.

ನಗರದ ರಾಮತೀರ್ಥ ನಗರ, ಮಾಳಮಾರುತಿ ಮತ್ತಿತರ ಕಡೆಗಳಲ್ಲಿ ನಾಲ್ಕೈದು ದಿನಗಳಾದರೂ ಒಮ್ಮಮ್ಮೆ ನೀರು ಬರುತ್ತಿಲ್ಲ. ವಂಟಮೂರಿ ಕಾಲೋನಿಯಲ್ಲಿ ಜನರು ಆಗಾಗ ಟ್ಯಾಂಕರ್ ಮೂಲಕ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಹಲವು ಬಡಾವಣೆಯ ಜನರು ನೀರು ಪೂರೈಸುವಂತೆ ಒತ್ತಾಯಿಸಿ ಮನವಿ ಹಿಡಿದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ, ಹಿಡಕಲ್ ಡ್ಯಾಮ್ ಹಾಗೂ ರಾಕಸಕೊಪ್ಪ ಜಲಾಶಯಗಳಿಂದ ಮೇಲಕ್ಕೆ ಎತ್ತಿದ ನೀರು ನಗರಕ್ಕೆ ಪೂರೈಸಿಯೂ ಹೆಚ್ಚಿರುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಿಗೂ ನೀರು ಪೂರೈಸುವಂತೆ ಶಾಸಕರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.ನೀರು ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸದೇ ಗ್ರಾಮೀಣ ಪ್ರದೇಶಕ್ಕೂ ನೀರು ನೀಡಲು ಆರಂಭಿಸಿದರೆ, ಏಪ್ರಿಲ್- ಮೇ ತಿಂಗಳಿನಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಉದ್ಭವಿಸಲಿದೆ.ಕೆಯುಐಡಿಎಫ್‌ಸಿ ನಗರದ ಎಲ್ಲ 58 ವಾರ್ಡ್‌ಗಳಿಗೂ 24 ಗಂಟೆಗಳ ಕಾಲ ನೀರು ಪೂರೈಸುವ ಯೋಜನೆಯನ್ನು ಕೈಗೆತ್ತುಕೊಂಡಿದೆ. ಈ ಯೋಜನೆ ಪೂರ್ಣಗೊಳ್ಳುವವರೆಗೂ ನಗರದ ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಆಗಾಗ ಕೇಳಿ ಬರುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.