ಭಾನುವಾರ, ಮೇ 9, 2021
26 °C

ನಗರದಲ್ಲಿರುವ ಅಕ್ರಮ ಕಟ್ಟಡಗಳೆಷ್ಟು?

ಎಂ. ಕೀರ್ತಿಪ್ರಸಾದ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳ ಸಂಖ್ಯೆ ಎಷ್ಟು? ಈ ಪ್ರಶ್ನೆಗೆ ಸುಲಭವಾಗಿ ಉತ್ತರ ಸಿಗುವುದಿಲ್ಲ. ಏಕೆಂದರೆ ಸ್ವತಃ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೇ ಅಧಿಕಾರಿಗಳು ಮೂರು ತಿಂಗಳಿಂದ ಈ ಬಗ್ಗೆ ಮಾಹಿತಿ ನೀಡಿಲ್ಲ!ನಗರದಲ್ಲಿ ನಿಯಮ ಉಲ್ಲಂಘಿಸಿ ಲಕ್ಷಾಂತರ ಕಟ್ಟಡಗಳು ನಿರ್ಮಾಣವಾಗಿವೆ ಎಂಬುದನ್ನು ಪಾಲಿಕೆಯ ಅಧಿಕಾರಿಗಳೇ ಒಪ್ಪುತ್ತಾರೆ. ಆದರೆ ಅಕ್ರಮ ಕಟ್ಟಡಗಳ ನಿಖರ ಅಂಕಿ-ಅಂಶ ನೀಡಲು ಹಿಂಜರಿಯುತ್ತಾರೆ. ಇದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು ಕೇಳಿದ ಮಾಹಿತಿಯನ್ನು ಒದಗಿಸಬೇಕಾದುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯ. ವಿಚಿತ್ರ ಎಂದರೆ ನಗರ ವ್ಯಾಪ್ತಿಯಲ್ಲಿ `ತಾತ್ಕಾಲಿಕ ಆದೇಶ~ (ಪಿ.ಒ), ಸ್ಥಿರೀಕರಣ ಆದೇಶ (ಸಿ.ಒ) ನೋಟಿಸ್ ನೀಡಿರುವ ವಿವರ ಹಾಗೂ ಇತರೆ ಮಾಹಿತಿ ನೀಡುವಂತೆ ನಗರ ಯೋಜನೆ ಸ್ಥಾಯಿ ಅಧ್ಯಕ್ಷರು ಆಯುಕ್ತರಿಗೆ ಪತ್ರ ಬರೆದಿದ್ದರೂ ಈವರೆಗೆ ಮಾಹಿತಿ ಸಲ್ಲಿಸಿಲ್ಲ.ಸಮಿತಿ ಅಧ್ಯಕ್ಷ ಸಿ.ಕೆ. ರಾಮಮೂರ್ತಿ ಅವರು ಇದೇ ಮೇ 28ರಂದು ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ 2010ರ ಜನವರಿ ಒಂದರಿಂದ ಈವರೆಗೆ ಮಂಜೂರಾದ ನಕ್ಷೆಯಲ್ಲಿ ನಮೂದಿಸಲಾದ ಮಹಡಿಗಳು, ಹಾಲಿ ನಿರ್ಮಿಸುತ್ತಿರುವ ಮಹಡಿಗಳು, ಕಟ್ಟಡದ ವಿಸ್ತೀರ್ಣ, ಉಲ್ಲಂಘನೆ ವಿವರ ಹಾಗೂ ಉಲ್ಲಂಘನೆಗೆ ವಿಧಿಸಿರುವ ದಂಡದ ವಿವರವನ್ನು ನೀಡುವಂತೆ ಕೋರಿದ್ದರು. ಪ್ರತಿಯನ್ನು ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕರು ಹಾಗೂ ಎಲ್ಲ ವಲಯಗಳ ಸಹಾಯಕ ನಿರ್ದೇಶಕರಿಗೆ ಸಲ್ಲಿಸಿದ್ದರು. ಆದರೆ, ಈವರೆಗೆ ಅವರಿಗೆ ಮಾಹಿತಿ ನೀಡಿಲ್ಲ.ಜೂನ್ ಒಂದರಂದು ಬರೆದಿರುವ ಪತ್ರದಲ್ಲಿ 2008-09ನೇ ಸಾಲಿನಿಂದ ಈವರೆಗೆ ಮಂಜೂರಾದ ನಕ್ಷೆಗಳ ದಿನಾಂಕ, ಸಿ.ಸಿ ಹಾಗೂ ಓ.ಸಿ ಪಡೆದ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ವಾರದೊಳಗೆ ಸಲ್ಲಿಸುವಂತೆ ಕೋರಿದ್ದರು. ಅದೂ ಕೂಡ ಈವರೆಗೆ ಸಲ್ಲಿಕೆಯಾಗಿಲ್ಲ.ಇನ್ನು ಇದೇ ಜೂನ್ 9ರಂದು ಬರೆದ ಪತ್ರದಲ್ಲಿ 1,200 ಚದರ ಅಡಿ ಹಾಗೂ 2,400 ಚದರ ಅಡಿ ವಿಸ್ತೀರ್ಣದ ಕಟ್ಟಡಗಳನ್ನು ಹೊರತುಪಡಿಸಿ, ಅನಧಿಕೃತವಾಗಿ ನಿರ್ಮಾಣಗೊಂಡ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಕಟ್ಟಡಗಳು, ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸುತ್ತಿರುವವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ. ಎಷ್ಟು ಪ್ರಕರಣಗಳಲ್ಲಿ ಪಿ.ಒ ಹಾಗೂ ಸಿ.ಒ ನೋಟಿಸ್ ನೀಡಲಾಗಿದೆ. ಎಷ್ಟು ಪ್ರಕರಣಗಳಿಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ತಡೆಯಾಜ್ಞೆ ತೆರವಿಗೆ ಕೈಗೊಂಡ ಕ್ರಮಗಳೇನು. ಎಷ್ಟು ಪ್ರಕರಣಗಳಲ್ಲಿ ತಡೆಯಾಜ್ಞೆ ತೆರವುಗೊಳಿಸಲಾಗಿದೆ ಎಂಬ ಕುರಿತು ವಾರ್ಡ್‌ವಾರು ಮಾಹಿತಿಯನ್ನು 15 ದಿನದೊಳಗೆ ನೀಡುವಂತೆ ಕೋರಿದ್ದರು. ಈ ಬಗ್ಗೆ ಕೂಡ ಈವರೆಗೆ ಮಾಹಿತಿ ನೀಡಿಲ್ಲ.ಎಂಜಿನಿಯರ್‌ಗಳ ನಿರ್ಲಕ್ಷ್ಯ:

ನಗರದ ಯಾವುದೇ ಭಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದರೆ ಈ ಕುರಿತು ಸಂಬಂಧಪಟ್ಟ ವಾರ್ಡ್ ಹಾಗೂ ಉಪವಿಭಾಗದ ಎಂಜಿನಿಯರ್‌ಗಳು ವಿವಿಧ ಹಂತದಲ್ಲಿ ಪರಿಶೀಲನೆ ನಡೆಸುತ್ತಾರೆ. ಒಂದೊಮ್ಮೆ ಕಟ್ಟಡ ನಿರ್ಮಾಣದಲ್ಲಿ ಉಲ್ಲಂಘನೆ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದ್ದರೆ ದಂಡ ವಸೂಲಿ ಮಾಡಬಹುದಾಗಿದೆ.ಆದರೆ ಶೇ 5ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಉಲ್ಲಂಘನೆಯಾಗಿದ್ದರೆ ಆ ಕಟ್ಟಡ ಮಾಲೀಕರಿಗೆ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಾತ್ಕಾಲಿಕ ಆದೇಶದ (ಪಿ.ಒ) ನೋಟಿಸ್ ನೀಡುತ್ತಾರೆ.ಈ ಬಗ್ಗೆ ಕಟ್ಟಡ ಮಾಲೀಕರು ಏಳು ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು. ಅಕ್ರಮವಾಗಿ ನಿರ್ಮಾಣಗೊಂಡ ಭಾಗವನ್ನು ತೆರವುಗೊಳಿಸಲು ಸಮಯಾವಕಾಶವನ್ನು ಕೋರಬಹುದು. ಆದರೆ ಏಳು ದಿನಗಳವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ತಾತ್ಕಾಲಿಕ ಆದೇಶವನ್ನು ಸ್ಥಿರೀಕರಣ ಆದೇಶವಾಗಿ ಹೊರಡಿಸಬಹುದು.ಈ ಆದೇಶ ಹೊರಡಿಸುತ್ತಿದ್ದಂತೆ ಪ್ರತಿಯೊಂದನ್ನು ಕಾನೂನು ಕೋಶಕ್ಕೆ ರವಾನಿಸಬೇಕು. ಕೂಡಲೇ ಕಾನೂನು ಕೋಶವು ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಬಳಿಕ ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್ ಅಕ್ರಮ ಭಾಗದ ತೆರವಿಗೆ ಆದೇಶ ಹೊರಡಿಸುತ್ತಾರೆ. ಆದರೆ ಕೆಲವು ಪ್ರಕರಣಗಳಲ್ಲಿ ಈ ರೀತಿ ನಡೆಯುವುದಿಲ್ಲ.ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದ್ದರೆ ಈ ಪ್ರಮಾಣದಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿರಲಿಲ್ಲ. ಎಂಜಿನಿಯರ್‌ಗಳ ಪೈಕಿ ಬಹುಪಾಲು ಮಂದಿ ಎರವಲು ಸೇವೆ ಸಲ್ಲಿಸುತ್ತಿರುವುದರಿಂದ ನಿಯಂತ್ರಣ ಕೂಡ ಇಲ್ಲದಂತಾಗಿದೆ ಎಂಬ ಮಾತಿದೆ.ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ನಂತರ ನಾಲ್ಕು ಮಹಡಿಗಿಂತ ಹೆಚ್ಚು ಮಹಡಿಯ 419 ಕಟ್ಟಡಗಳ ನಿರ್ಮಾಣಕ್ಕೆ ನಗರ ಯೋಜನೆ ವಿಭಾಗ ನಕ್ಷೆ ಮಂಜೂರಾತಿ ನೀಡಿದೆ. ಈ ಪೈಕಿ 168 ಕಟ್ಟಡ ಮಾಲೀಕರು ಆರಂಭಿಕ ಪ್ರಮಾಣ ಪತ್ರ (ಸಿ.ಸಿ) ಪಡೆದಿದ್ದಾರೆ. ಹಾಗೆಯೇ 199 ಕಟ್ಟಡ ಮಾಲೀಕರು ಸ್ವಾಧೀನ ಪತ್ರವನ್ನು (ಓ.ಸಿ) ಪಡೆದುಕೊಂಡಿದ್ದಾರೆ.ಜನಪ್ರತಿನಿಧಿಗಳ ಆಡಳಿತ ಆರಂಭವಾದ ಬಳಿಕ ಒಟ್ಟು 180 ಬಹುಮಹಡಿ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಮಾಡಲಾಗಿದೆ. ಹಾಗೆಯೇ 2009- 10ನೇ ಸಾಲಿನಲ್ಲಿ ಒಟ್ಟು 116 ಬಹುಮಹಡಿ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿರುವುದು ಕಂಡು ಬರುತ್ತದೆ.-ಮುಂದುವರಿಯುವುದು... 


ನೀವೂ ಮಾಹಿತಿ ನೀಡಿ:

ನಿಯಮಗಳ ಉಲ್ಲಂಘನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ನಡೆಯುವ ಅಕ್ರಮಗಳ ಕುರಿತು `ಪ್ರಜಾವಾಣಿ~ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಓದುಗರು ಸಹ ಈ ರೀತಿಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬಹುದು. ಅಲ್ಲದೇ ಕಟ್ಟಡ ನಿರ್ಮಾಣ ವೇಳೆ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದರೆ ಮಾಹಿತಿ ನೀಡಬಹುದು. ಅದನ್ನು ಓದುಗರ ಹೆಸರಿನಲ್ಲಿಯೇ ಪ್ರಕಟಿಸಲಾಗುವುದು. ಹಾಗೆಯೇ ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡಗಳ ಬಗ್ಗೆ ದಾಖಲೆ ಸಹಿತ ಮಾಹಿತಿಯನ್ನು ಪ್ರತಿಕ್ರಿಯೆಯನ್ನು ಸಲ್ಲಿಸಬಹುದು. ಇ-ಮೇಲ್ ವಿಳಾಸ: ivicpv@gmail.com

 
ಮಾಹಿತಿ ನೀಡಲು ಹಿಂದೇಟು

`ಅಗತ್ಯ ಮಾಹಿತಿ ನೀಡುವಂತೆ ಕೋರಿ ಬರೆದ ಪತ್ರವನ್ನು ಆಯುಕ್ತರು ಪ್ರಾಮಾಣಿಕವಾಗಿ ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಆದರೆ ಅಧಿಕಾರಿಗಳು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಅನುಮಾನ ಮೂಡಿಸಿದೆ. ಏಕೆಂದರೆ ಇದರಿಂದ ಅಕ್ರಮಗಳು ಬಯಲಾಗಲಿವೆ ಎಂಬ ಆತಂಕ ಅಧಿಕಾರಿಗಳಿಗಿರಬಹುದು. ಈ ಸಂಬಂಧ ಸದ್ಯದಲ್ಲೇ ಮತ್ತೊಂದು ಪತ್ರ ಬರೆಯುತ್ತೇನೆ~.

-ನಗರ ಯೋಜನೆ ಸ್ಥಾಯಿ ಅಧ್ಯಕ್ಷ ಸಿ.ಕೆ. ರಾಮಮೂರ್ತಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.