ಶುಕ್ರವಾರ, ಅಕ್ಟೋಬರ್ 2, 2020
24 °C

ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ;ಜಿಲ್ಲಾಧಿಕಾರಿ ದಿಢೀರ್ ನಗರ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ;ಜಿಲ್ಲಾಧಿಕಾರಿ ದಿಢೀರ್ ನಗರ ಸಂಚಾರ

ಚಿಕ್ಕಬಳ್ಳಾಪುರ: ನಗರದಾದ್ಯಂತ ಮಾಲಿನ್ಯ ಹೆಚ್ಚುತ್ತಿರುವ ಮತ್ತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಅವರು ಬುಧವಾರ ದಿಢೀರ್‌ನೇ ನಗರ ಸಂಚಾರ ಕೈಗೊಂಡರು.ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಅವರು ಆಯಾ ವಾರ್ಡ್‌ಗಳ ನಿವಾಸಿಗಳೊಡನೆ ಸಂವಾದ ನಡೆಸಿದರು. ಆಯಾ ವಾರ್ಡ್‌ಗಳಲ್ಲಿರುವ ನೀರಿನ ಸಮಸ್ಯೆ ಮತ್ತು ಕುಂದು-ಕೊರತೆ ವಿಷಯಗಳನ್ನು ತಿಳಿದುಕೊಂಡ ಅವರು ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗಂಗಮ್ಮನಗುಡಿ (ವಾರ್ಡ್    ಸಂಖ್ಯೆ-10), ಸಾಧುಮಠ (ವಾರ್ಡ್ ಸಂಖ್ಯೆ-11), ಕಂದವಾರಪೇಟೆ  (ವಾರ್ಡ್ ಸಂಖ್ಯೆ-15) ಮತ್ತು ಗೋಪಾಲಕೃಷ್ಣಪ್ಪ ಕಡ್ಡಿಪುಡಿ ಪ್ರದೇಶ (ವಾರ್ಡ್ ಸಂಖ್ಯೆ-16) ವ್ಯಾಪ್ತಿಯಲ್ಲಿನ ವಿವಿಧ ಬಡಾವಣೆಗಳಿಗೆ ಮತ್ತು ರಸ್ತೆಗಳಿಗೆ ಭೇಟಿ ನೀಡಿದ ಅವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಒಂದೆಡೆ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರು ದೂರಿದರೆ, ಮತ್ತೊಂದೆಡೆ ತ್ಯಾಜ್ಯ ವಿಲೇವಾರಿ ನಿರ್ವಹಣೆ ಬಗ್ಗೆ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿಗಳ ದಿಢೀರ್ ಭೇಟಿಯಿಂದ ಅಚ್ಚರಿ ವ್ಯಕ್ತಪಡಿಸಿದ ಜನರು ಒಂದೊಂದಾಗಿ ಸಮಸ್ಯೆಗಳನ್ನು ಹೇಳಿಕೊಂಡರು. ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ವಿವರಿಸಿದ ಬಡಾವಣೆಯೊಂದರ ನಿವಾಸಿ ಜಯಶ್ರೀ, `ಹತ್ತು-ಹದಿನೈದು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಸಿಹಿ ನೀರು ಆಗಾಗ್ಗೆ ಬರುತ್ತದೆ.ಒಂದು ವಾರ ಅಥವಾ ಹತ್ತು ದಿನಗಳ ಕಾಲ ನಾವು ನೀರನ್ನು ತುಂಬಿಸಿಟ್ಟುಕೊಳ್ಳಲು ಹೇಗೆ ಸಾಧ್ಯ? ನೀರಿನ ಟಿಲ್ಲರ್‌ಗೆ 120 ರೂಪಾಯಿ ಮತ್ತು ಒಂದು ಬಿಂದಿಗೆ ನೀರಿಗೆ 3 ರೂಪಾಯಿ ಕೊಡಬೇಕು. ಪರಿಸ್ಥಿತಿ ಹೀಗೆ ಮುಂದುವರೆದರೆ, ನಾವು ಇಲ್ಲಿ ಜೀವನ ಮಾಡುವುದು ಹೇಗೆ~ ಎಂದು ಪ್ರಶ್ನಿಸಿದರು.`ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಬೇಗನೇ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಕೊಳವೆಬಾವಿಗಳು ಬತ್ತುತ್ತಿರುವುದರಿಂದ ನೀರಿನ ಲಭ್ಯತೆಯು ಕಡಿಮೆಯಾಗುತ್ತಿದೆ. ನೀರು ಪೂರೈಕೆ ಬಗ್ಗೆ ಕೇಳಿದರೆ ನಗರಸಭೆ ಸದಸ್ಯರು ಒಂದು ಉತ್ತರ ನೀಡಿದರೆ, ಅಧಿಕಾರಿಗಳು ಮತ್ತೊಂದು ಉತ್ತರ ಕೊಡುತ್ತಾರೆ. ನೀರು ಸಾಕಷ್ಟು ಪ್ರಮಾಣದಲ್ಲಿ ಯಾವಾಗ ಸಿಗುತ್ತದೆ ಮತ್ತು ನೀರಿನ ಕೊರತೆ ಯಾವಾಗ ಕೊನೆಗೊಳ್ಳುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ~ ಎಂದು ಸುನಂದಾ ಬೇಸರ ವ್ಯಕ್ತಪಡಿಸಿದರು.ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಮಾಲಾ ಮತ್ತು ಮಂಜುಳಾ ಎಂಬುವರು ಆರೋಪಿಸಿದರು. `ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದ ಕಾರಣ ಅಲ್ಲಲ್ಲಿ ತಿಪ್ಪೆಗುಂಡಿಗಳು ಸೃಷ್ಟಿಯಾಗಿವೆ. ತ್ಯಾಜ್ಯ ಎಸೆಯಲು ಡಬ್ಬಿಯ ವ್ಯವಸ್ಥೆ ಮಾಡಲಾಗಿಲ್ಲ. ಪರ್ಯಾಯ ಮಾರ್ಗವನ್ನು ಕಂಡು ಹಿಡಿಯಲಾಗಿಲ್ಲ. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ನಗರಸಭೆಯು ಸೂಕ್ತ ರೀತಿಯ ಕ್ರಮ ಕೈಗೊಂಡಲ್ಲಿ, ಅಗತ್ಯ ಶುಲ್ಕ ಪಾವತಿಸಲು ನಾವು ಸಿದ್ಧರಿದ್ದೇವೆ~ ಎಂದು ಅವರು ಹೇಳಿದರು.ಒಳಚರಂಡಿ ಕಾಮಗಾರಿ ವೇಳೆ ಕಳಪೆ ಕಾಮಗಾರಿ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಡಾ. ಎನ್.ಮಂಜುಳಾ ಅವರು ಕಳಪೆ ಕಾಮಗಾರಿ ಆಗಿರುವುದರ ಕುರಿತು ಪರಿಶೀಲನೆ ನಡೆಸಿ, ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ನೀರಿನ ಸಮಸ್ಯೆ ಬಗ್ಗೆ ವಿವರಣೆ ನೀಡಿದ ನಗರಸಭೆ ಆಯುಕ್ತ ಡಿ.ಎಚ್.ರಾಯ, `ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 124 ಕೊಳವೆಬಾವಿಗಳಿದ್ದು, 82 ಕೊಳವೆಬಾವಿಗಳು ಸುಸ್ಥಿತಿಯಲ್ಲಿವೆ. 42 ಕೊಳವೆಬಾವಿಗಳು ಬತ್ತಿದ್ದು, ಅವುಗಳನ್ನು ಮರುಕೊರೆದು ನೀರು ಬರುವಂತೆ ಮಾಡಲಾಗುವುದು. ತ್ಯಾಜ್ಯ ವಿಲೇವಾರಿ ಸಂಬಂಧಿಸಿದಂತೆಯೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು~ ಎಂದರು. ನಗರಸಭೆ ಅಧ್ಯಕ್ಷ ಎಂ.ವಿ.ಭಾಸ್ಕರ್ ಮತ್ತು ನಗರಸಭೆಯ ಇತರ ಸದಸ್ಯರು ಉಪಸ್ಥಿತರಿದ್ದರು.ಮೊಬೈಲ್‌ನಲ್ಲಿ ಕಳಪೆ ಕಾಮಗಾರಿ

ಚಿಕ್ಕಬಳ್ಳಾಪುರ: ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸುಬ್ಬರಾಯನಪೇಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಅವರು ಇದಕ್ಕೆ  ಕಾರಣಕರ್ತರು   ಯಾರು ಎಂದು ಪ್ರಶ್ನಿಸಿದರು. ಸಂಬಂಧಪಟ್ಟ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ನೋಟಿಸ್ ಜಾರಿಗೊಳಿಸುವಂತೆ  ಸೂಚಿ ಸಿದರು.ಇಷ್ಟಕ್ಕೆ ಸುಮ್ಮನಾಗದ ಅವರು ಕೂಡಲೇ ತಮ್ಮ ಮೊಬೈಲ್ ಫೋನ್ ತೆಗೆದು ಅದರ ಮೂಲಕ ಕಳಪೆ ಕಾಮಗಾರಿಯಾಗಿರುವ ಸ್ಥಳವನ್ನು ಸೆರೆ ಹಿಡಿದರು. `ಕಳಪೆ ಕಾಮಗಾರಿಯಿಂದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಮೂಲಸೌಕರ್ಯದ ಅವ್ಯವಸ್ಥೆಗೂ ಕಾರಣವಾಗುತ್ತದೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ವಾರಕ್ಕೊಮ್ಮೆ ಭೇಟಿ

ಚಿಕ್ಕಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿನ ವಿವಿಧ ಬಡಾವಣೆಗಳಲ್ಲಿ ಮೂಲಸೌಕರ್ಯ ಮತ್ತು ನೀರಿನ ಸಮಸ್ಯೆ ತೀವ್ರವಾಗಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಬಡವರ ಸಂಘ ಕಾಲೋನಿ (ವಾರ್ಡ್ ಸಂಖ್ಯೆ-31) ಮತ್ತು ಸುತ್ತಮುತ್ತಲಿನ ಬಡಾವಣೆಗಳಿಗೆ ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಭೇಟಿ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.