ಶುಕ್ರವಾರ, ಮೇ 27, 2022
31 °C

ನಗರದ ಕೆರೆಗಳಲ್ಲಿ ಮಿತಿ ಮೀರಿದ ಮಾಲಿನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದ ಕೆರೆಗಳಲ್ಲಿ ಮಿತಿ ಮೀರಿದ ಮಾಲಿನ್ಯ

ಬೆಂಗಳೂರು: `ನಗರದ ಯಲಹಂಕ, ಬೈರಮಂಗಲ, ಬೆಳ್ಳಂದೂರು, ಕಲ್ಕೆರೆ, ಅಳ್ಳಾಲಸಂದ್ರ, ದಾಸರಹಳ್ಳಿ ದೀಪಾಂಜಲಿನಗರ ಕೆರೆಗಳಲ್ಲಿ ಮಾಲಿನ್ಯ ಪ್ರಮಾಣ ಮಿತಿ ಮೀರಿದ್ದು ಇವುಗಳ ರಕ್ಷಣೆಗೆ ಕೂಡಲೇ ಮುಂದಾಗಬೇಕಿದೆ~ ಎಂದು ಬೆಂಗಳೂರು ಜಲಮಂಡಲಿಯ ನಿವೃತ್ತ ಎಂಜಿನಿಯರ್ ಡಾ. ಎಂ.ಎನ್.ತಿಪ್ಪೇಸ್ವಾಮಿ ತಿಳಿಸಿದರು.ಎಂಜಿನಿಯರುಗಳ ಸಂಸ್ಥೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಬೆಂಗಳೂರು ನಗರದಲ್ಲಿ ನೀರಿನ ಗುಣಮಟ್ಟ ಮೇಲ್ವಿಚಾರಣೆ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಯಲಹಂಕ, ಬೆಳ್ಳಂದೂರು ಹಾಗೂ ಬೈರಮಂಗಲ ಕೆರೆಗಳು ನಗರದ ಬೃಹತ್ ಜಲಮೂಲಗಳಾಗಿವೆ. ನಗರದ ಬಹುಪಾಲು ನೀರು ಸಂಗ್ರಹವಾಗುವ ಈ ಕೆರೆಗಳ ಸಂರಕ್ಷಣಾ ಕಾರ್ಯ ನಡೆಯುತ್ತಿಲ್ಲ. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ~ ಎಂದು ಹೇಳಿದರು.`ದಕ್ಷಿಣ ಪಿನಾಕಿನಿ ಮತ್ತು ಅರ್ಕಾವತಿ ನದಿ ಪಾತ್ರಗಳನ್ನು ಸಂರಕ್ಷಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕಿದೆ. ನಗರಕ್ಕೆ ನೀರು ಒದಗಿಸುವ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಅರ್ಕಾವತಿ ನದಿ ಹರಿಯುತ್ತಿದ್ದು ಇದರ ಸುತ್ತ ದೊಡ್ಡ ಪ್ರಮಾಣದ ವಸತಿ ಪ್ರದೇಶಗಳು ಸೃಷ್ಟಿಯಾಗುತ್ತಿವೆ. ದಕ್ಷಿಣ ಪಿನಾಕಿನಿ ನದಿಯ ಸುತ್ತಲಿನ ಕೈಗಾರಿಕಾ ಪ್ರದೇಶಗಳಿಂದ ಭಾರಿ ಪ್ರಮಾಣದ ಮಾಲಿನ್ಯ ಹರಿದು ಬರುತ್ತಿದೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.`ನಗರದ ಶೇ 95ರಷ್ಟು ಜನ ಬಳಸುವ ಕಾವೇರಿ ನೀರು ಕೂಡ ಸುರಕ್ಷಿತವಲ್ಲ. ಕಾವೇರಿ ಹರಿದು ಬರುವ ಕೊಡಗು, ಮೈಸೂರು, ಮಂಡ್ಯ, ಮಳವಳ್ಳಿ ಮತ್ತಿತರ ಕಡೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ನದಿಗೆ ಬಿಡುತ್ತಿಲ್ಲ. ಬೆಂಗಳೂರು ಜಲಮಂಡಲಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗಳು ಕಾವೇರಿ ಜಲಾನಯನ ಪ್ರದೇಶ ಮಲಿನವಾಗದಂತೆ ಕ್ರಮ ಕೈಗೊಳ್ಳಬೇಕಿದೆ~ ಎಂದು ಹೇಳಿದರು.`ವಿಶ್ವ ಆರೋಗ್ಯ ಸಂಸ್ಥೆಯ ಜಲ ಸುರಕ್ಷತಾ ಯೋಜನೆಯನ್ನು ವಿಶ್ವದ ಎಲ್ಲಾ ದೇಶಗಳು ಅಳವಡಿಸಿಕೊಳ್ಳುತ್ತಿದ್ದು ಇದರಿಂದ ಬಹಳಷ್ಟು ಸಮಸ್ಯೆಗಳು ಪರಿಹಾರವಾಗಲಿವೆ. ಜಲಮೂಲ, ನೀರು ಸಂಸ್ಕರ ಣೆಯ ವೇಳೆ ಮಾತ್ರ ಕಾಳಜಿ ವಹಿಸದೆ  ಸಂಗ್ರಹ ಮತ್ತು ಸರಬರಾಜು ವೇಳೆಯೂ ಮಾಲಿನ್ಯ ಉಂಟಾಗದಂತೆ ತಡೆಯಬೇಕು. ಗ್ರಾಹಕರಿಗೆ ಶುದ್ಧ ನೀರು ದೊರೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು~ಎಂದು ಅವರು ಸಲಹೆ ನೀಡಿದರು.ಕೇಂದ್ರ ಸರ್ಕಾರದ ಪರಮಾಣು ವಿಭಾಗದ ವಿಜ್ಞಾನಿ ಡಾ. ಎಂ.ಎ.ಆರ್.ಐಯ್ಯಂಗಾರ್, `ನೀರಿನಲ್ಲಿ ರೆಡಾನ್ ವಿಕಿರಣ ಸೇರ್ಪಡೆಯಾಗುವುದರಿಂದ ಅಪಾಯ ಇದೆ ಎಂಬ ಭಾವನೆ ಅನೇಕರಲ್ಲಿ ಇದೆ. ಆದರೆ ಇದು ತಪ್ಪು. ಅಂತರ್ಜಲದಲ್ಲಿ ರೆಡಾನ್ ಅಂಶವಿದ್ದಾಗ ಮಾತ್ರ ತೊಂದರೆ.ಗಾಳಿಯೊಂದಿಗೆ ಬೆರೆತಾಗ ಅದು ಕರಗಿ ಹೋಗುತ್ತದೆ. ರೆಡಾನ್‌ಗಿಂತ ರೇಡಿಯಂ ಅತ್ಯಂತ ಹೆಚ್ಚು ಹಾನಿಕಾರಕ. ಇದು ನೀರಿನ ಮೇಲ್ಮೈನಲ್ಲೂ ಸರಾಗವಾಗಿ ಹರಿಯುತ್ತದೆ. ನೀರಿನ ಕ್ಯಾಲ್ಷಿಯಂ ಜತೆ ಬೆರೆತು ದೇಹವನ್ನು ಸೇರಿ ವಿವಿಧ ರೋಗಗಳಿಗೆ ಕಾರಣವಾಗಬಲ್ಲದು~ ಎಂದರು.`ವಿಕಿರಣಯುಕ್ತ ನೀರನ್ನು ಕುಡಿಯುವುದರಿಂದ ಹುಟ್ಟಿನ ದೋಷಗಳು, ಶ್ವಾಸಕೋಶ ಕ್ಯಾನ್ಸರ್, ಚರ್ಮರೋಗ,  ಮಾತ್ರ ವಲ್ಲದೇ ಅನುವಂಶಿಕ ಕಾಯಿಲೆಗಳು ಬಾಧಿಸುತ್ತವೆ. ಕುದಿಸಿದ, ಸಂಸ್ಕರಿಸಿದ ನೇರಳಾತೀತ ಕಿರಣಗಳನ್ನು ಹಾಯಿಸಿದ ಹಾಗೂ ಸೌರ ಭಟ್ಟಿಯಿಂದ ಲಭಿಸುವ ನೀರನ್ನು ಕುಡಿಯುವುದರಿಂದ ಸಮಸ್ಯೆಗಳು ಇರುವುದಿಲ್ಲ~ ಎಂದು ಹೇಳಿದರು.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಡಾ. ಜಿ.ವಿ.ಹೆಗಡೆ, `ನಗರದಲ್ಲಿ ಶೇ 9ರಷ್ಟು ಮಾತ್ರ ಮಾಲಿನ್ಯ ರಹಿತ ನೀರು ಲಭಿಸುತ್ತಿದೆ. ಹಲವು ಭಾಗಗಳ ಅಂತರ್ಜಲದಲ್ಲಿ ನೈಟ್ರೇಟ್, ಕಬ್ಬಿಣ ಹಾಗೂ ಫ್ಲೋರೈಡ್ ಅಂಶಗಳು ಕಂಡು ಬಂದಿವೆ.

 

ನಗರದ ವಾಯವ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ಕಲುಷಿತ ನೀರು ಪತ್ತೆಯಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶದ ಅಂತರ್ಜಲದಲ್ಲಿ ಭಾರಿ ಲೋಹದ ಅಂಶಗಳಿವೆ~ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಪ್ರೊ.ಎಂ.ಆರ್.ಪ್ರಾಣೇಶ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.